ಸಾವಿರ ದಿನ ಪೂರೈಸಿದ ಐಟಿಐ ಕಾರ್ಮಿಕರ ಹೋರಾಟ
ಬೆಂಗಳೂರು: ‘ಐಟಿಐ ಲಿಮಿಟೆಡ್ ಮ್ಯಾನೇಜ್‍ಮೆಂಟ್’ನ ಅಧಿಕಾರಿಗಳು 2021ರ ಡಿ.1ರಂದು 80 ಕಾರ್ಮಿಕರನ್ನು ಅಕ್ರಮವಾಗಿ ವಜಾಗೊಳಿಸಿರುವುದನ್ನು ವಿರೋಧಿಸಿ ಐಟಿಐ ನೌಕರರು ನಡೆಸುತ್ತಿದ್ದ ಹೋರಾಟವು ಆ.27ಕ್ಕೆ ಸಾವಿರ ದಿನ ಪೂರೈಸಿದ್ದು, 1001ನೆ ದಿನಕ್ಕೆ ಕಾಲಿಟ್ಟಿದೆ.
ಕಾರ್ಮಿಕರು ಸಂಘಟಿತರಾಗಿ ಅವರ ಹಕ್ಕುಗಳಿಗಾಗಿ ಪ್ರಶ್ನೆ ಮಾಡುತ್ತಿದ್ದಾರೆನ್ನುವ ಕಾರಣಕ್ಕೆ ನಗರದ ಕೆ.ಆರ್.ಪುರಂ ಸಮೀಪದಲ್ಲಿರುವ ‘ಐಟಿಐ ಲಿ. ಆಡಳಿತ ಮಂಡಳಿ ಅಧಿಕಾರಿಗಳು 80ಕಾರ್ಮಿಕರನ್ನು ಕಾನೂನು ಬಾಹಿರವಾಗಿ ಉದ್ಯೋಗದಿಂದ ಕಿತ್ತು ಹಾಕಲಾಗಿತ್ತು. ಹೊರಹಾಕಲ್ಪಟ್ಟ ಕಾರ್ಮಿಕರು ಐಟಿಐ ಕಾರ್ಖಾನೆ ಬಳಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯು ಕರ್ನಾಟಕದಲ್ಲಿ ನಡೆದ ಕಾರ್ಮಿಕ ವರ್ಗದ ಸುದೀರ್ಘ ಹೋರಾಟಗಳಲ್ಲಿ ಒಂದಾಗಿದೆ.
ಆಡಳಿತ ಮಂಡಳಿ ಮತ್ತು ಯೂನಿಯನ್ 2022ರ ಮಾ.17ರಂದು ಇತ್ಯರ್ಥಕ್ಕೆ ಬಂದಿತ್ತು. ಅದರ ಪ್ರಕಾರ 35 ಕಾರ್ಮಿಕರನ್ನು ತಕ್ಷಣವೆ ಕೆಲಸಕ್ಕೆ ವಾಪಸ್ಸು ಪಡೆದುಕೊಳ್ಳುವಂತೆ ಮತ್ತು ಉನ್ನುಳಿದ 45ಕಾರ್ಮಿಕರನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ಆಡಳಿತ ಮಂಡಳಿ ಒಪ್ಪಿಕೊಂಡಿತು. ಆದಾಗ್ಯೂ, ಐಟಿಐ ಆಡಳಿತ ಮಂಡಳಿ ಒಪ್ಪಂದದಂತೆ ನಡೆದುಕೊಳ್ಳದೆ ನಿರಾಕರಿಸಿತ್ತು. ಕಾರ್ಮಿಕರು ತಮ್ಮ ಉದ್ಯೋಗವನ್ನು ಖಾತ್ರಿಪಡಿಸಬೇಕೆಂದು ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ.
ಸಾವಿರ ದಿನಕ್ಕೆ ಹೋರಾಟ ಕಾಲಿಟ್ಟಿದ್ದು ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಎಐಸಿಸಿಟಿಯು ಕಾರ್ಯದರ್ಶಿ ಅಪ್ಪಣ್ಣ ಮಾತನಾಡಿ, ಕಾರ್ಮಿಕರ ಹಕ್ಕುಗಳಿಗೆ ಸ್ಪಂದಿಸದ ಐಟಿಐ ಕಾರ್ಯವೈಖರಿ ನಾಚಿಕೆಗೇಡಿನ ಸಂಗತಿ. ಕಾರ್ಮಿಕರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು. ಈ ವೇಳೆ ದಸಂಸ ಅಧ್ಯಕ್ಷ ಮುನಿನಂಜಪ್ಪ, ಐಟಿಐ ನೌಕರರ ಹೋರಾಟವು ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಡಲು ರಾಜ್ಯಾದ್ಯಂತ ಕಾರ್ಮಿಕರನ್ನು ಪ್ರೇರೇಪಿಸಿದೆ ಎಂದರು. ಬಿಬಿಎಂಪಿ ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ನಿರ್ಮಲಾ ಭಾಗವಹಿಸಿದ್ದರು.