×
Ad

ಜನಾರ್ಧನ ರೆಡ್ಡಿಯವರ ಆಸ್ತಿಯನ್ನು ರಾಜ್ಯ ಸರಕಾರ ಮುಟ್ಟುಗೋಲು ಹಾಕಿಕೊಳ್ಳಲಿ : ವಿ.ಎಸ್.ಉಗ್ರಪ್ಪ

Update: 2025-05-07 19:31 IST

ಬೆಂಗಳೂರು : ಕರ್ನಾಟಕ ಆಂಧ್ರಪ್ರದೇಶ ಅಂತಾರಾಜ್ಯ ಗಡಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಸರಕಾರದ ಬೊಕ್ಕಸಕ್ಕೆ 884 ಕೋಟಿ ನಷ್ಟ ಉಂಟು ಮಾಡಿರುವ ಪ್ರಕರಣದಲ್ಲಿ ಬಿಜೆಪಿ ನಾಯಕ, ಶಾಸಕ ಜಿ.ಜನಾರ್ದನ ರೆಡ್ಡಿ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯ ದೋಷಿಗಳೆಂದು ತೀರ್ಪು ಪ್ರಕಟಿಸಿದ್ದು, ಈ ಸಂಬಂಧ ಇದರ ಹಿಂದೆ ಇರುವ ಎಲ್ಲರ ಆಸ್ತಿಯನ್ನು ರಾಜ್ಯ ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅರಿಯರ್ಸ್ ಆಫ್ ಲ್ಯಾಂಡ್ ರೆವಿನ್ಯೂ ಎಂದು ಜನಾರ್ಧನ ರೆಡ್ಡಿ ಅವರ ಅಕ್ರಮ ಗಣಿಗಾರಿಕೆ ಲೂಟಿಯನ್ನು ಪರಿಗಣಿಸಿ ಇದರ ಹಿಂದೆ ಇರುವ ಎಲ್ಲರ ಆಸ್ತಿಯನ್ನು ರಾಜ್ಯ ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಇದರಿಂದ ಲಾಭ ಪಡೆದ ಅಂದಿನ ರಾಜ್ಯ ಸರಕಾರ ಮುನ್ನಡೆಸುತ್ತಿದ್ದವರು, ಅಧಿಕಾರಿಗಳ ವಿರುದ್ದವು ಕ್ರಮ ತೆಗೆದುಕೊಳ್ಳಬೇಕು ಎಂದರು.

29 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಜನಾರ್ಧನ ರೆಡ್ಡಿ ಮತ್ತು ತಂಡ ಅಕ್ರಮವಾಗಿ ವಿದೇಶಕ್ಕೆ ರಫ್ತು ಮಾಡಿತ್ತು. ಇದರ ಮೌಲ್ಯ 884 ಕೋಟಿ ಎಂದು ನ್ಯಾಯಾಧೀಶರೇ ಹೇಳಿದ್ದಾರೆ. ಈಗ ಅವರಿಗೆ ಶಿಕ್ಷೆಯಾಗಿದೆ. ಇವರ ಜೊತೆಯಿದ್ದ ಬಿಜೆಪಿ ನಾಯಕರು, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದರು.

ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಸಿಬಿಐ ವಿಶೇಷ ನ್ಯಾಯಲಯ ಜನಾರ್ಧನ ರೆಡ್ಡಿ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ನೀಡಿರುವುದು ಇಡೀ ದೇಶಕ್ಕೆ ಹಾಗೂ ಭ್ರಷ್ಟರಿಗೆ ಸ್ಪಷ್ಟ ಸಂದೇಶ ನೀಡಿದಂತಾಗುತ್ತದೆ. ದುರಂಹಕಾರಿ ರಾಜಕಾರಣಿಗಳು ಒಂದಲ್ಲ ಒಂದು ರೀತಿಯಲ್ಲಿ ಶಿಕ್ಷೆ ಅನುಭವಿಸಲೇಬೇಕು ಎಂಬುದಕ್ಕೆ ತಕ್ಕ ಉದಾಹರಣೆ ಎಂದ ಅವರು, 2000-2006 ರಿಂದ ನಡೆದ ಅಕ್ರಮ ಗಣಿಗಾರಿಗೆ ನಡೆದಾಗ ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿತ್ತು. ಅಂದು ಅರಣ್ಯ ಸಚಿವರಾಗಿದ್ದ ಚೆನ್ನಿಗಪ್ಪ ಅವರು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ಇಟ್ಟುಕೊಂಡು ನಾನು ಸದನದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ದ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದೆ ಎಂದು ನೆನೆದರು.

ಆನಂತರ, ಅಂದಿನ ಸರಕಾರ ಜಸ್ಟೀಸ್ ಯು.ಎಲ್.ಭಟ್ ನೇತೃತ್ವದ ತನಿಖಾ ಆಯೋಗ ನೇಮಕ ಮಾಡಿತು. ಈ ಆಯೋಗವು ಸಿಬಿಐ ತನಿಖೆಗೆ ನೀಡಬೇಕು ಎಂದು ಶಿಫಾರಸ್ಸು ಮಾಡಿತು. ನಾವು ತನಿಖೆಗೆ ಒತ್ತಾಯ ಮಾಡಿದಾಗ ಲೋಕಾಯುಕ್ತ ತನಿಖೆಗೆ ನೀಡಲಾಯಿತು. ಈ ಹೋರಾಟದ ಹಿಂದೆ ಇರುವುದು ಕಾಂಗ್ರೆಸ್ ಪಕ್ಷ, ಕೆ.ಸಿ.ಕೊಂಡಯ್ಯ, ನಾನು ಈ ಹೋರಾಟದ ಹಿಂದೆ ಇದ್ದೆವು. ಆಂದ್ರ ಪ್ರದೇಶದ ಮಲ್ಪನಗುಡಿ, ಕರ್ನಾಟಕದ ತುಮಟಿ, ವಿಠಲಾಪುರ ಮಧ್ಯದ ಸುಮಾರು 32 ಕಿಮೀ ಭೂಭಾಗದಲ್ಲಿರುವ ಉತೃಷ್ಟವಾದ 29 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಜನಾರ್ಧನ ರೆಡ್ಡಿ ಮತ್ತು ತಂಡ ಅಕ್ರಮವಾಗಿ ವಿದೇಶಕ್ಕೆ ರಫ್ತು ಮಾಡಿತ್ತು ಎಂದು ಉಲ್ಲೇಖಿಸಿದರು.

ಅಕ್ರಮ ಗಣಿಗಾರಿಕೆ ಬಗ್ಗೆ ಅತ್ಯಂತ ನಿಖರವಾದ ವರದಿಯನ್ನು ಮಾಡಿದ್ದು ಕಾಂಗ್ರೆಸ್ ಪಕ್ಷ. ನನ್ನ ನೇತೃತ್ವದ ಸತ್ಯಶೋದನಾ ಸಮಿತಿ 2008ರಲ್ಲಿ ಇದನ್ನು ಬಿಡುಗಡೆಗೊಳಿಸಿತ್ತು. ಲೋಕಾಯುಕ್ತದವರು ನನ್ನ ವರದಿಯನ್ನು ಇಟ್ಟುಕೊಂಡು ಪ್ರಾಥಮಿಕ ವರದಿ ನೀಡಿದರು. ಕಾಂಗ್ರೆಸ್ ಪಕ್ಷ ರಿಪಬ್ಲಿಕ್ ಬಳ್ಳಾರಿಯ ವಿರುದ್ದ ಪಾದಯಾತ್ರೆ ನಡೆಸಿ ದೊಡ್ಡ ಹೋರಾಟ ಮಾಡಿತ್ತು. ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆ ವಿಚಾರವಾಗಿ ಮಾತನಾಡುವಾಗ ಅಕ್ರಮ ನಡೆದಿಲ್ಲ ಎಂದು ಹೇಳುತ್ತಿದ್ದರು.

ಈ ಅಕ್ರಮ ಗಣಿಗಾರಿಕೆ ಹಿಂದೆ ಇದ್ದಿದ್ದೆ ಅಂದಿನ ರಾಜ್ಯ ಸರಕಾರ. ಅಂದು ಶ್ರೀರಾಮುಲು ಅವರು ಅರಣ್ಯ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದ ಬಗ್ಗೆ ದೂರು ದಾಖಲಾಗಿತ್ತು. ಅಂದು ಅಧಿಕಾರದಲ್ಲಿ ಇದ್ದುಕೊಂಡೆ ಅನ್ಯಾಯ ಎಸಗಿದವರಿಗೆ ಇಂದು ತಕ್ಕ ಶಿಕ್ಷೆಯಾಗಿದೆ. ನಾನು ತಯಾರು ಮಾಡಿದ ಸತ್ಯಶೋಧನಾ ವರದಿಯಲ್ಲಿ ಜರ್ನಾರ್ಧನ ರೆಡ್ಡಿ ಮತ್ತು ತಂಡದ ಸಂಪೂರ್ಣ ಅಕ್ರಮ, ಅನ್ಯಾಯಗಳನ್ನು ಎಳೆ, ಎಳೆಯಾಗಿ ಬಿಚ್ಚಿಟ್ಟಿದ್ದೇನೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರಕಾಶ್ ರಾಥೋಡ್ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News