×
Ad

ಎನ್ ಡಿಎ ಮೈತ್ರಿ ಕೂಟಕ್ಕೆ ಜೆಡಿಎಸ್‌ ಸೇರ್ಪಡೆ: ಕುಮಾರಸ್ವಾಮಿ ಭೇಟಿ ಬಳಿಕ ಜೆ.ಪಿ ನಡ್ಡಾ ಟ್ವೀಟ್‌

Update: 2023-09-22 16:44 IST

Photo- Twitter@JPNadda

ಬೆಂಗಳೂರು, ಸೆ. 22: ಮುಂಬರಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ರಾಜ್ಯದಲ್ಲಿ ಜಾತ್ಯತೀತ ಜನತಾದಳ(ಜೆಡಿಎಸ್) ಹಾಗೂ ಬಿಜೆಪಿಯ ನಡುವೆ ಚುನಾವಣಾ ಪೂರ್ವ ಮೈತ್ರಿ ಪ್ರಕ್ರಿಯೆ ವಿದ್ಯುಕ್ತವಾಗಿ ಆರಂಭವಾಗಿದೆ.

ಶುಕ್ರವಾರ ಹೊಸದಿಲ್ಲಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಖುದ್ದು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದು, ಜೆಡಿಎಸ್ ಅಧಿಕೃತವಾಗಿ ಬಿಜೆಪಿ ನೇತೃತ್ವದ ಎನ್‍ಡಿಎ ಭಾಗವಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಂಡು ಚುನಾವಣೆ ಎದುರಿಸಿದ್ದ ಜೆಡಿಎಸ್, ಇದೀಗ ಬಿಜೆಪಿಯನ್ನು ಅಪ್ಪಿಕೊಂಡಿದೆ. ಮಾತ್ರವಲ್ಲ, ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಆ ಮೂಲಕ ಮುಂದಿನ ಚುನಾವಣೆಯಲ್ಲಿ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಜಂಟಿ ಹೋರಾಟಕ್ಕೆ ಮಹತ್ವದ ಹೆಜ್ಜೆಯನ್ನಿಟ್ಟಿವೆ.

ದಿಲ್ಲಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಚ್.ಡಿ.ಕುಮಾರಸ್ವಾಮಿ, ‘ಎನ್‍ಡಿಎ ಭಾಗವಾಗಲು ನಾವು ಸಿದ್ಧವಾಗಿದ್ದು, ಇದಕ್ಕೆ ಅಗತ್ಯವಾಗಿರುವ ವಿಧಿ-ವಿಧಾನಗಳನ್ನು ಪೂರ್ಣಗೊಳಿಸಲಾಗುವುದು. ಮುಂದಿನ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಪ್ರಕ್ರಿಯೆ ಶೀಘ್ರ ಪೂರ್ಣಗೊಂಡರೆ ಚುನಾವಣಾ ರಣತಂತ್ರ ರೂಪಿಸಲು ಸಾಧ್ಯವಾಗಲಿದೆ’ ಎಂದು ಹೇಳಿದರು.

‘ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ 28 ಕ್ಷೇತ್ರಗಳ ಪೈಕಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಸೀಟು ಹಂಚಿಕೆ ಕುರಿತು ಉಭಯ ಪಕ್ಷಗಳ ಮುಖಂಡರು ಒಟ್ಟಿಗೆ ಕುಳಿತು ಮಾತುಕತೆ ನಡೆಸಿ ನಿರ್ಧಾರ ತೆಗೆದುಕೊಳ್ಳೋಣ ಎಂದು ಕೇಂದ್ರ ಗೃಹ ಸಚಿವರೂ ಆಗಿರುವ ಹಿರಿಯ ಮುಖಂಡ ಅಮಿತ್ ಶಾ ಹೇಳಿದ್ದಾರೆ’ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಭೇಟಿ ಕುರಿತು ‘ಎಕ್ಸ್’ ಜಾಲತಾಣದಲ್ಲಿ ಫೋಟೋವೊಂದನ್ನು ಹಂಚಿಕೊಂಡಿರುವ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ‘ಜಾತ್ಯತೀತ ಜನತಾದಳ(ಜೆಡಿಎಸ್) ಎನ್‍ಡಿಎ ಮೈತ್ರಿಕೂಟದ ಭಾಗವಾಗಲು ಆಸಕ್ತಿ ತೋರಿದ್ದು, ಜೆಡಿಎಸ್ ಮುಖಂಡರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಇದರಿಂದ ಎನ್‍ಡಿಎ ಮತ್ತಷ್ಟು ಬಲವರ್ಧನೆಯಾಗಲಿದ್ದು, ನವಭಾರತ-ಬಲಿಷ್ಠ ಭಾರತ ನಿರ್ಮಿಸುವ ಪ್ರಧಾನಿ ಮೋದಿ ದೃಷ್ಟಿಕೋನಕ್ಕೆ ಈ ಬೆಳವಣಿಗೆ ಪೂರಕವಾಗಿದೆ’ ಎಂದು ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News