×
Ad

ಒಪ್ಪಿಗೆಯಿಲ್ಲದ ಖಾಸಗಿ ವೀಡಿಯೊ-ಫೋಟೊ ಪ್ರಸಾರಕ್ಕೆ ಕಡಿವಾಣ: ಪೊಲೀಸ್ ಇಲಾಖೆ ಹೊಸ ಮಾರ್ಗಸೂಚಿ

ತಕ್ಷಣವೇ FIR ದಾಖಲಿಸುವಂತೆ ಸೂಚನೆ

Update: 2026-06-16 22:49 IST

ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ

ಬೆಂಗಳೂರು: ಅನುಮತಿಯಿಲ್ಲದೇ ಯಾವುದೇ ವ್ಯಕ್ತಿಯ ಖಾಸಗಿ ವಿಡಿಯೋ ಮತ್ತು ಫೋಟೊ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವ ಪ್ರಕರಣಗಳಲ್ಲಿ ಪೊಲೀಸರು ಅನುಸರಿಸಬೇಕಾದ ಕ್ರಮಗಳ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ಪಾಲಿಸುವಂತೆ ರಾಜ್ಯ ಪೊಲೀಸ್ ಇಲಾಖೆಯು ಮಂಗಳವಾರ ಆದೇಶ ಹೊರಡಿಸಿದೆ.

ಇತ್ತೀಚೆಗೆ ಈ ಮೇಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುಗಳನ್ನು ದಾಖಲಿಸುವಲ್ಲಿ ವಿಳಂಬ ಅಥವಾ ಕೆಲವೆಡೆ ನಿರಾಕರಣೆ ಮಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಈ ಆದೇಶದಲ್ಲಿ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದರೆ ಪ್ರಸಾರಕ್ಕೂ ಒಪ್ಪಿಗೆ ನೀಡಿದಂತೆ ಅಲ್ಲ ಎಂಬ ಕಾನೂನು ಸ್ಥಿತಿಯನ್ನು ಸ್ಪಷ್ಟಪಡಿಸಲಾಗಿದೆ. ಅಂದರೆ, ಒಬ್ಬ ವ್ಯಕ್ತಿ ಚಿತ್ರ ಸೆರೆಹಿಡಿಯಲು ಒಪ್ಪಿಗೆ ನೀಡಿದ್ದರೂ, ಅದನ್ನು ಹಂಚಲು ಅಥವಾ ಪ್ರಸಾರ ಮಾಡಲು ಒಪ್ಪಿಗೆ ನೀಡದಿದ್ದರೆ, ಅದು ಸಂಜ್ಞೆಯ (ಕಾಗ್ನಿಜೆನ್ಸ್) ಅಪರಾಧವಾಗಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿಲಾಗಿದೆ.

ಈ ಸೆಕ್ಷನ್‍ಗಳ ಅನ್ವಯ ಕ್ರಮಕ್ಕೆ ಸೂಚನೆ: ಭಾರತೀಯ ನ್ಯಾಯ ಸಂಹಿತೆ(ಬಿಎನ್‍ಎಸ್) 2023ರ ಸೆಕ್ಷನ್ 77ರಂತೆ ಗೌಪ್ಯತೆ ಉಲ್ಲಂಘನೆಗೆ ಸಂಬಂಧಿಸಿದ ವಿಧಿಗಳು, ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 66(ಇ), 67 ಮತ್ತು 67(ಎ)ಗಳನ್ನು ಅಳವಡಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಮಹಿಳಾ ಸಂತ್ರಸ್ತರಿದ್ದಲ್ಲಿ 77ರ ವಿಧಿಯ ಜೊತೆಗೆ ಐಟಿ ಕಾಯ್ದೆಯ ಸೆಕ್ಷನ್‍ಗಳನ್ನು ಸೇರಿಸಿ ಎಫ್‍ಐಆರ್ ಕಡ್ಡಾಯವಾಗಿ ನೋಂದಣಿ ಮಾಡಬೇಕೆಂದು ನಿರ್ದೇಶಿಸಲಾಗಿದೆ.

ತಕ್ಷಣವೇ ಎಫ್‍ಐಆರ್ ನೋಂದಣಿ: ಅನುಮತಿಯಿಲ್ಲದೆ ಖಾಸಗಿ/ಆಪ್ತ ಚಿತ್ರಗಳು ಅಥವಾ ವೀಡಿಯೊಗಳ ಪ್ರಸಾರ ಮತ್ತು ಬೆದರಿಕೆ ವೀಡಿಯೊಗಳು, ‘ಸೆಕ್ಸ್ಟೋರ್ಷನ್’, ‘ರಿವೇಂಜ್ ಪೋರ್ನೋಗ್ರಫಿ’ ಮುಂತಾದ ಪ್ರಕರಣಗಳಲ್ಲಿ ತಕ್ಷಣ ಎಫ್‍ಐಆರ್ ದಾಖಲಿಸಬೇಕು. ಪೀಡಿತರು ಮೊದಲು ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣಕ್ಕೆ ದೂರು ನಿರಾಕರಿಸಬಾರದು. ಅಪರಾಧ ಸ್ಥಳೀಯ ವ್ಯಾಪ್ತಿಯ ಹೊರಗೆ ನಡೆದಿದ್ದರೆ ಝೀರೋ ಎಫ್‍ಐಆರ್ ದಾಖಲಿಸಿ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಪರಾಧಕರ ವಿಷಯವನ್ನು ತಕ್ಷಣ ತೆಗೆದುಹಾಕಲು ಐಟಿ ನಿಯಮಗಳ ಪ್ರಕಾರ ಸಂಬಂಧಿತ ಸಂಸ್ಥೆಗಳಿಗೆ ನೋಟಿಸ್ ನೀಡಬೇಕು ಮತ್ತು ಎಲ್ಲ ಡಿಜಿಟಲ್ ಸಾಕ್ಷ್ಯಗಳನ್ನು ಕಾನೂನುಬದ್ಧವಾಗಿ ಸಂರಕ್ಷಿಸಬೇಕು. ಪೀಡಿತರ ಗುರುತು ಗೌಪ್ಯವಾಗಿರಬೇಕು, ಮಹಿಳಾ ಸಂತ್ರಸ್ತೆಯ ದೂರುಗಳನ್ನು ಮಹಿಳಾ ಅಧಿಕಾರಿಗಳು ದಾಖಲಿಸುವಂತೆ ಸೂಚಿಸಲಾಗಿದೆ.

ಸೈಬರ್ ಕ್ರೈಂ ಘಟಕಗಳೊಂದಿಗೆ ಸಮನ್ವಯತೆ: ತನಿಖಾಧಿಕಾರಿಗಳು ಸೈಬರ್ ಕ್ರೈಂ ಘಟಕಗಳೊಂದಿಗೆ ಸಮನ್ವಯತೆ ಸಾಧಿಸಿ ತಾಂತ್ರಿಕ ತನಿಖೆ ಹಾಗೂ ಫೋರೆನ್ಸಿಕ್ ವಿಶ್ಲೇಷಣೆ ನಡೆಸಬೇಕು. ಇಂತಹ ಪ್ರಕರಣಗಳಲ್ಲಿ ಎಫ್‍ಐಆರ್ ನೋಂದಣಿ ಮಾಡದಿರುವುದು ಅಥವಾ ‘ಪೂರ್ವಾನುಮತಿ’ ಎಂಬ ತಪ್ಪು ಕಾರಣದಿಂದ ವಿಳಂಬ ಮಾಡಿದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ತಮ್ಮ ಆದೇಶದಲ್ಲಿ ಎಲ್ಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News