×
Ad

ಕರ್ನಾಟಕ ಜಗತ್ತಿನಲ್ಲೇ ಅತಿ ಹೆಚ್ಚು ವೈದ್ಯರನ್ನು ನೀಡುತ್ತಿರುವ ರಾಜ್ಯ: ಸಿಎಂ ಡಿ.ಕೆ. ಶಿವಕುಮಾರ್

Update: 2026-06-16 21:22 IST

ಬೆಂಗಳೂರು: ಕರ್ನಾಟಕವು ಜಗತ್ತಿನಲ್ಲೇ ಅತಿ ಹೆಚ್ಚು ವೈದ್ಯರನ್ನು ನೀಡುತ್ತಿರುವ ರಾಜ್ಯವಾಗಿದ್ದು, ವರ್ಷಕ್ಕೆ 13,940 ವೈದ್ಯರು ನಮ್ಮ ರಾಜ್ಯದ ಮೆಡಿಕಲ್ ಕಾಲೇಜುಗಳಿಂದ ಪದವಿ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿ ವ್ಯಾಸಂಗ ಮಾಡಿದ ಅತ್ಯುತ್ತಮ ವೈದ್ಯರು, ನರ್ಸ್‍ಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಮಂಗಳವಾರ ಇಲ್ಲಿನ ಜಿಕೆವಿಕೆ ಆವರಣದಲ್ಲಿ ಆಯೋಜಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ 72 ವೈದ್ಯಕೀಯ ಕಾಲೇಜುಗಳಿದ್ದು, ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಇಲ್ಲ. ಇದು ನಮ್ಮ ಶಕ್ತಿಯಾಗಿದ್ದು, ರಾಜೀವ್ ಗಾಂಧಿ ವಿವಿ ಇದಕ್ಕೆಲ್ಲಾ ಆಧಾರಸ್ತಂಭವಾಗಿ ನಿಂತಿದೆ. ವಿವಿ ಕಳೆದ 3 ದಶಕಗಳಲ್ಲಿ 8 ಲಕ್ಷ ಪದವೀಧರರನ್ನು ತಯಾರು ಮಾಡಿದೆ. ಸಮಾಜದ ಎಲ್ಲ ವರ್ಗಕ್ಕೆ ಆರೋಗ್ಯ ಸೇವೆ ನೀಡಿ ಕಾಪಾಡುವುದು ಈ ವಿವಿಯ ಮೂಲ ಉದ್ದೇಶ ಎಂದರು.

ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆಗೆ ಬಂದಾಗ, ‘ವಿಶ್ವದ ನಾಯಕರು ಮೊದಲು ದಿಲ್ಲಿಗೆ ಬಂದು, ನಂತರ ದೇಶದ ಇತರೆ ಭಾಗಗಳಿಗೆ ಹೋಗುತ್ತಿದ್ದರು’ ಎಂದಿದ್ದರು. ಆದರೆ ಈಗ ಕಾಲ ಬದಲಾಗುತ್ತಿದೆ. ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಇತರೆ ಭಾಗಗಳಿಗೆ ಹೋಗುತ್ತಿದ್ದಾರೆ. ಈಗ ಬೆಂಗಳೂರಿನಲ್ಲಿ 26 ಲಕ್ಷ ಐಟಿ ವೃತ್ತಿಪರರಿದ್ದಾರೆ. ಆದರೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಐಟಿ ವೃತ್ತಿಪರರಿದ್ದಾರೆ ಎಂದು ವಿವರಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಸರಕಾರವು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು, ಕ್ಯಾನ್ಸರ್ ಆಸ್ಪತ್ರೆ ಹಾಗೂ ಟ್ರೋಮಾ ಕೇರ್ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಸಾಮಾನ್ಯ ಜನರೂ ತಮ್ಮ ರಾಜ್ಯದಲ್ಲಿಯೇ ಉತ್ತಮ, ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆಗಳನ್ನು ಪಡೆಯಬೇಕು ಎಂಬುದು ಸರಕಾರದ ಆಶಯವಾಗಿದೆ ಎಂದು ಹೇಳಿದರು.

ನೈತಿಕತೆ, ಸಹಾನುಭೂತಿ ಮತ್ತು ಸೇವಾ ಮನೋಭಾವದ ಮೂಲಕ ವೈದ್ಯ ವೃತ್ತಿಯ ಗೌರವವನ್ನು ಕಾಪಾಡಬೇಕು. ವೈದ್ಯಕೀಯ ಜ್ಞಾನವು ರೋಗಗಳನ್ನು ಗುಣಪಡಿಸುತ್ತದೆ, ಆದರೆ ಮಾನವೀಯತೆ ಮನುಷ್ಯರನ್ನು ಗುಣಪಡಿಸುತ್ತದೆ. ಹೀಗಾಗಿ ಯುವ ವೈದ್ಯರು ಮತ್ತು ಆರೋಗ್ಯ ವೃತ್ತಿಪರರು ಸಮಾಜಸೇವೆಯ ಬದ್ಧತೆ, ಪ್ರಾಮಾಣಿಕತೆ ಹಾಗೂ ಜವಾಬ್ದಾರಿಯುತ ಮನೋಭಾವದೊಂದಿಗೆ ಕಾರ್ಯನಿರ್ವಹಿಸಬೇಕು. ತಮ್ಮ ವೃತ್ತಿಜೀವನದ ಪ್ರತಿಯೊಂದು ಹಂತದಲ್ಲೂ ರೋಗಿಗಳ ಹಿತಾಸಕ್ತಿಯನ್ನು ಅತ್ಯುನ್ನತ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಅವರು ಕರೆ ನೀಡಿದರು.

ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿ, ವಲಸೆ ತಪ್ಪಿಸಿ: ‘ಭಾರತ ಈಗ ಸಾಮಾಜಿಕ ಹಾಗೂ ತಂತ್ರಜ್ಞಾನ ಪರಿವರ್ತನೆಯ ತಿರುವಿನಲ್ಲಿದೆ. ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅತ್ಯಾಧುನಿಕ ಅವಿಷ್ಕಾರ ಕಂಡಿದೆ. ಕೇವಲ ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸುವುದರ ಬಗ್ಗೆ ಮಾತ್ರ ಗಮನ ಹರಿಸಬಾರದು. ಗ್ರಾಮೀಣ ಪ್ರದೇಶದಲ್ಲೂ ಆರೋಗ್ಯ ಸೇವೆ ಒದಗಿಸುವತ್ತ ಗಮನಹರಿಸಬೇಕು. ಈ ಮೂಲಕ ಜನ ನಗರಗಳತ್ತ ವಲಸೆ ಬರುವುದನ್ನು ತಪ್ಪಿಸಬೇಕು’

-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News