ಆರೆಸ್ಸೆಸ್ ಕಚೇರಿಗೆ ಚರ್ಚೆಗೆ ಹೋಗಲು ನಾನು ಸಿದ್ಧ, ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರಿಸಲಿ: ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಗೃಹ ಸಚಿವ ಪ್ರಿಯಾಂಕ್ ಖರ್ಗೆ (Photo: X)
ಹೊಸದಿಲ್ಲಿ: ನಾನು ಆರೆಸ್ಸೆಸ್ ಕಚೇರಿ ಕೇಶವಕೃಪ, ಜಗನ್ನಾಥ ಭವನ ಎಲ್ಲಿಗೆ ಬೇಕಾದರೂ ಬರಲು ಸಿದ್ಧ. ಆದರೆ, ಅದಕ್ಕಿಂತ ಮುಂಚೆ ನಾನು ಆರೆಸ್ಸೆಸ್‍ಗೆ ಕೇಳಿರುವ ಏಳು ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಮಂಗಳವಾರ ಹೊಸದಿಲ್ಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಆರೆಸ್ಸೆಸ್ ಮುಖ್ಯಸ್ಥರಿಗೆ ಕೇಳಿರುವ ಏಳು ಪ್ರಶ್ನೆಗಳಲ್ಲಿ ಯಾವುದಾದರೂ ಕಾನೂನು ಬಾಹಿರ, ಸಂವಿಧಾನ ಬಾಹಿರವಿದೆಯೆ? ಎಂದು ಪ್ರಶ್ನಿಸಿದರು.
ಅವರು ನನ್ನ ಕಚೇರಿಗೆ ಆದರೂ ಬರಲಿ, ಇಲ್ಲ ನನ್ನನ್ನೆ ಅವರ ಕಚೇರಿಗೆ ಕರೆಸಿಕೊಳ್ಳಲಿ. ಇಲ್ಲವೆ, ಸಂಬಂಧಪಟ್ಟ ವಕೀಲರನ್ನಾದರೂ ಕಳುಹಿಸಲಿ, ನಾವು ನಮ್ಮ ವಕೀಲರನ್ನು ಕಳುಹಿಸುತ್ತೇವೆ. ಈ ವಿಚಾರದ ಕುರಿತು ಚರ್ಚೆ ಮಾಡೋಣ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಆರೆಸ್ಸೆಸ್‍ಗೆ ಬರುತ್ತಿರುವ ದೇಣಿಗೆಯನ್ನು ಗುರು ದಕ್ಷಿಣೆ ಎನ್ನುತ್ತಾರೆ. ಹಾಗಾದರೆ, ಆರೆಸ್ಸೆಸ್‍ಗೆ ಗುರು ಯಾರು? ಅದರ ಧ್ವಜ ತಾನೆ?. ಆ ಧ್ವಜ ಹೆಸರಿನಲ್ಲಿ ಇವರು ದಕ್ಷಿಣೆ ತೆಗೆದುಕೊಳ್ಳುತ್ತಿದ್ದಾರೆ. ನಾಳೆ ನಾನು ನೀಲಿ ಧ್ವಜ ಹಾಕಿ, ಅದರಲ್ಲಿ ಧಮ್ಮ ಚಕ್ರ ಅಳವಡಿಸಿ ದೇಣಿಗೆ ಸಂಗ್ರಹಿಸಲು ಮುಂದಾದರೆ ನೀವು ದೇಣಿಗೆ ನೀಡುತ್ತೀರಾ?, ಅದನ್ನು ಒಪ್ಪುತ್ತೀರಾ? ಎಂದು ಅವರು ಪ್ರಶ್ನಿಸಿದರು.
ಸುಮಾರು 2500 ಅಂತರ್‍ರಾಷ್ಟ್ರೀಯ ಸಂಸ್ಥೆಗಳು ಆರೆಸ್ಸೆಸ್‍ನ ವಿಚಾರ ವಿಭಾಗಕ್ಕೆ ದೇಣಿಗೆ ನೀಡುತ್ತಿವೆ. ಇತ್ತೀಚೆಗೆ ಎಲ್ಲ ಚರ್ಚ್‍ಗಳು, ಮಿಷನರಿಗಳಿಗೆ ಅವರ ಆರ್ಥಿಕ ವ್ಯವಹಾರಗಳ ಬಗ್ಗೆ ಪಾರದರ್ಶಕವಾಗಿರುವ ನಿಟ್ಟಿನಲ್ಲಿ ಕಾನೂನು ಜಾರಿಗೆ ತರಲಾಗಿತ್ತು. ಅದೇ ಆಧಾರದಲ್ಲಿ ಆರೆಸ್ಸೆಸ್‍ಗೂ ಉತ್ತರದಾಯಿತ್ವ ನಿಗದಿ ಮಾಡಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಿದ ದೇಣಿಗೆ ವಿಚಾರದಲ್ಲಿ ದೊಡ್ಡ ಹಗರಣ ನಡೆದು, ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ನಮ್ಮ ದೇಶದಲ್ಲಿ ಶ್ರೀರಾಮನೆ ಲೆಕ್ಕ ಕೊಡಬೇಕು. ಇನ್ನು ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡುವವರು ಲೆಕ್ಕ ಕೊಡಬಾರದಾ? ರಾಮನ ಹೆಸರಿನಲ್ಲಿ ಪಥಸಂಚಲನ, ರಾಜಕೀಯ ಮಾಡುವವರು, ಸಂಘಟನೆ ಕಟ್ಟವವರಿಗೆ ಉತ್ತದಾಯಿತ್ವ ಇಲ್ಲವೆ? ಅವರು ಪ್ರಶ್ನಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ತನ್ನ ಅಸ್ತಿತ್ವದ ಶತಮಾನೋತ್ಸವದ (100 ವರ್ಷ) ಸಂದರ್ಭದಲ್ಲಾದರೂ ತನ್ನ ಕಾನೂನುಬದ್ಧ ಸ್ಥಾನಮಾನವನ್ನು ಸ್ಪಷ್ಟಪಡಿಸಬೇಕು ಹಾಗೂ ಆರ್ಥಿಕ ಪಾರದರ್ಶಕತೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ದೇಶಾದ್ಯಂತ 60 ಸಾವಿರಕ್ಕೂ ಹೆಚ್ಚು ದೈನಂದಿನ ಶಾಖೆಗಳನ್ನು ಹಾಗೂ ಕೋಟ್ಯಂತರ ಸ್ವಯಂಸೇವಕರನ್ನು ಹೊಂದಿರುವ ಇಷ್ಟು ದೊಡ್ಡ ಸಂಘಟನೆ ಆರೆಸ್ಸೆಸ್ ಯಾವ ಕಾನೂನಿನ ಆಧಾರದ ಮೇಲೆ ಔಪಚಾರಿಕ ನೋಂದಣಿ ಇಲ್ಲದೆ, ಇಷ್ಟೊಂದು ವ್ಯಾಪಕವಾಗಿ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಅವರು ಪ್ರಶ್ನಿಸಿದರು.
ಸಂವಿಧಾನದ ಅಡಿಯಲ್ಲಿ ಪ್ರತಿಯೊಂದು ಸಂಸ್ಥೆಯೂ ಕಾನೂನಿನ ಚೌಕಟ್ಟಿಗೆ ಬದ್ಧವಾಗಿರಬೇಕು. ಸಾಮಾನ್ಯ ನಾಗರಿಕರು, ಕಾರ್ಮಿಕ ಸಂಘಟನೆಗಳು, ಸರಕಾರೇತರ ಸಂಸ್ಥೆಗಳು, ಟ್ರಸ್ಟ್‍ಗಳು ಮತ್ತು ಕಂಪನಿಗಳು ಸರಕಾರದ ನಿಯಮಾವಳಿಗಳ ಪ್ರಕಾರ ನೋಂದಣಿ ಮಾಡಿಕೊಂಡು, ತಮ್ಮ ಆದಾಯ-ವೆಚ್ಚಗಳ ವಿವರಗಳನ್ನು ನೀಡುತ್ತಿರುವಾಗ ಆರೆಸ್ಸೆಸ್‍ಗೆ ಮಾತ್ರ ಇದರಿಂದ ಏಕೆ ವಿನಾಯಿತಿ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಸಂಘಟನೆಯ ಒಟ್ಟು ಆಸ್ತಿ ಎಷ್ಟು, ದೇಣಿಗೆಯ ಮೂಲಗಳೇನು, ಆರ್ಥಿಕ ವೆಚ್ಚಗಳು ಹೇಗೆ ನಡೆಯುತ್ತವೆ ಮತ್ತು ಚಾಲ್ತಿಯಲ್ಲಿರುವ ತೆರಿಗೆ ಕಾನೂನುಗಳ ಪ್ರಕಾರ ತೆರಿಗೆ ಪಾವತಿಸಲಾಗುತ್ತಿದೆಯೆ ಎಂಬ ಸಂಪೂರ್ಣ ವಿವರಗಳನ್ನು ಸಾರ್ವಜನಿಕವಾಗಿ ಇಡಬೇಕು ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು.
ಅಖಿಲ ಭಾರತೀಯ ಪ್ರತಿನಿಧಿ ಸಭೆಯ ವರದಿಯನ್ನು ಉಲ್ಲೇಖಿಸಿದ ಸಚಿವರು, ಕರ್ನಾಟಕವೊಂದರಲ್ಲೆ 4,127 ದೈನಂದಿನ ಶಾಖೆಗಳು, 1,389 ವಾರಾಂತರ ಸಭೆಗಳು, 60 ಮಾಸಿಕ ಮಂಡಳಿಗಳು ನಡೆಯುತ್ತಿವೆ. ಜೊತೆಗೆ 500ಕ್ಕೂ ಹೆಚ್ಚು ಪಥಸಂಚಲನಗಳು ಹಾಗೂ ಲಕ್ಷಾಂತರ ಜನರು ಭಾಗವಹಿಸುವ ಸಮಾಜೋತ್ಸವಗಳು ನಿರಂತರವಾಗಿ ಜರುಗುತ್ತಿವೆ ಎಂದು ಅವರು ಹೇಳಿದರು.
ಇಷ್ಟು ದೊಡ್ಡ ಮಟ್ಟದ ಸಾರ್ವಜನಿಕ ಸಜ್ಜುಗೊಳಿಸುವಿಕೆ ಹಾಗೂ ಗಣವೇಶಧಾರಿ ಪಥಸಂಚಲನಗಳನ್ನು ‘ಖಾಸಗಿ ಅಥವಾ ಅನೌಪಚಾರಿಕ ವ್ಯವಸ್ಥೆ’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಅನುಮತಿಗಳ ವಿವರಗಳನ್ನು ಒದಗಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಶತಮಾನೋತ್ಸವದ ಸಂದರ್ಭದಲ್ಲಿ ಆತ್ಮಾವಲೋಕನ ಅಗತ್ಯ: ಆರೆಸ್ಸೆಸ್ ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ, ಭಾರತೀಯ ಸಂವಿಧಾನಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. 100ನೆ ವರ್ಷದಲ್ಲಿ ಸಂಘಟನೆಯು ಕಾನೂನುಬದ್ಧವಾಗಿ ನೋಂದಾಯಿಸಿಕೊಂಡು, ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುವುದೆ ದೇಶಕ್ಕೆ ನೀಡುವ ಅತ್ಯುತ್ತಮ ಕೊಡುಗೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಕಾನೂನಿಗಿಂತ ಮಿಗಿಲಲ್ಲ. ಇಷ್ಟು ದೊಡ್ಡ ಸಂಘಟನೆಯ ಸಾರ್ವಜನಿಕ ಹೊಣೆಗಾರಿಕೆ, ಆರ್ಥಿಕ ಪಾರದರ್ಶಕತೆ ಮತ್ತು ದೇಶದ ಕಾನೂನುಗಳ ಪಾಲನೆಯ ಬಗ್ಗೆ ಪ್ರಶ್ನಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ ಎಂದು ಅವರು ಪುನರುಚ್ಚರಿಸಿದರು.