‘ಕಾಕ್ರೋಚ್ ಜನತಾ ಪಾರ್ಟಿ’ಗೆ ನಟಿ ರಮ್ಯಾ ಬೆಂಬಲ?; ಇನ್ಸ್ಟಾಗ್ರಾಂ ಕಮೆಂಟ್ ವೈರಲ್
ನಟಿ ಹಾಗೂ ಮಾಜಿ ಸಂಸದೆ ರಮ್ಯಾ
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವ‘ಕಾಕ್ರೋಚ್ ಜನತಾ ಪಾರ್ಟಿ’ (CJP)ಗೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಮಾಡಿದ ಕಮೆಂಟ್ ಕುತೂಹಲಕ್ಕೆ ಕಾರಣವಾಗಿದೆ.
ವ್ಲಾಗರ್ ಹಾಗೂ ನಟ ಅಲೆನ್ ಗೊನ್ಸಾಲ್ವೆಸ್ ಅವರು “ತಾನು ಕಾಕ್ರೋಚ್ ಜನತಾ ಪಾರ್ಟಿಯ ಮೊದಲ ಶಾಸಕನಾಗುತ್ತೇನೆ” ಎಂದು ಹೇಳಿರುವ ವೀಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ, “ನನ್ನ ಮತ ನಿಮಗೆ” ಎಂದು ಕಮೆಂಟ್ ಮಾಡಿದ್ದಾರೆ. ಅವರ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
2012ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದ ರಮ್ಯಾ, 2013ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿದ್ದರು. ಬಳಿಕ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ರಾಷ್ಟ್ರೀಯ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಅವರು ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದಾರೆ.
ಈ ನಡುವೆ, ‘ಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನ ಚರ್ಚೆಗೆ ರಮ್ಯಾ ಪ್ರತಿಕ್ರಿಯೆ ನೀಡಿರುವುದು ರಾಜಕೀಯ ವಲಯದಲ್ಲೂ ಗಮನ ಸೆಳೆದಿದೆ.
►ಏನಿದು ‘ಕಾಕ್ರೋಚ್ ಜನತಾ ಪಾರ್ಟಿ’?
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನಿರುದ್ಯೋಗಿಗಳ ಕುರಿತು ಮಾಡಿದ ಹೇಳಿಕೆಯನ್ನು ಆಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಹೆಸರು ಟ್ರೆಂಡ್ ಆಗತೊಡಗಿದೆ. ಇದಕ್ಕೆ ಸಂಬಂಧಿಸಿದಂತೆ ಯುವ ಸಮುದಾಯದಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.