×
Ad

ಇಟಲಿ ಪ್ರಧಾನಿಯೊಂದಿಗೆ ರೀಲ್ಸ್ ಶೂಟಿಂಗ್ ಮಾಡುತ್ತಿರುವ ಮೋದಿ: ಬಿ.ಕೆ.ಹರಿಪ್ರಸಾದ್ ಟೀಕೆ

"ರೂಪಾಯಿ ಕುಸಿತದ ಬಗ್ಗೆ ಮೌನ, ಬೆಲೆ ಏರಿಕೆಯ ಬಗ್ಗೆ ಉತ್ತರ ಇಲ್ಲ"

Update: 2026-05-20 22:39 IST

ಬಿ.ಕೆ.ಹರಿಪ್ರಸಾದ್/ನರೇಂದ್ರ ಮೋದಿ (Photo credit: ANI)

ಬೆಂಗಳೂರು: ದೇಶದ ಜನರಿಗೆ ‘ಆರ್ಥಿಕ ಚಂಡಮಾರುತ ಬರುತ್ತಿದೆ… ಜಾಗರೂಕರಾಗಿ… ವಿದೇಶಗಳಿಗೆ ಹೋಗಬೇಡಿ’…ಎಂದು ಪ್ರಧಾನಿ ನರೇಂದ್ರ ಮೋದಿಯ ಗಂಭೀರ ಉಪದೇಶ.! ಕೆಲವೇ ಗಂಟೆಗಳಲ್ಲಿ ದುಬಾರಿ ವಿಶೇಷ ವಿಮಾನದಲ್ಲಿ ಇಟಲಿಗೆ ಹಾರಾಟ…ಜೇಬಿನಲ್ಲಿ ‘ಮೆಲೋಡಿ’ ಟಾಫಿ,…ಕ್ಯಾಮೆರಾ ಮುಂದೆ ಇಟಲಿ ಪ್ರಧಾನಿಯೊಂದಿಗೆ ರೀಲ್ಸ್ ಶೂಟಿಂಗ್ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಈ ಸಂಬಂಧ ಎಕ್ಸ್ ನಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡಿರುವ ವಿಡಿಯೋ ಹಂಚಿಕೊಂಡಿರುವ ಅವರು, ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಮಾತನಾಡಿದ ತಕ್ಷಣವೆ ಟಾಫಿ ರಾಜತಾಂತ್ರಿಕತೆಗೆ ಹೊರಡುವ ಈ ವಿರೋಧಾಭಾಸವೆ ಭಾರತದ ಇಂದಿನ ಅತ್ಯಂತ ದೊಡ್ಡ ರಾಜಕೀಯ ವ್ಯಂಗ್ಯ. ಒಂದೆಡೆ ಯುವಕರು ಉದ್ಯೋಗಕ್ಕಾಗಿ ಸಾಲಿನಲ್ಲಿ ನಿಂತಿದ್ದಾರೆ. ಇನ್ನೊಂದೆಡೆ ಪ್ರಧಾನಮಂತ್ರಿಯವರ ಪಿಆರ್ ಯಂತ್ರ ‘ಟಾಫಿ’ ಹಂಚುವ ದೃಶ್ಯಗಳನ್ನು ವೈರಲ್ ಮಾಡಲು ಬ್ಯುಸಿಯಾಗಿದೆ ಎಂದು ಟೀಕಿಸಿದ್ದಾರೆ.

ರೂಪಾಯಿ ಕುಸಿತದ ಬಗ್ಗೆ ಮೌನ. ಬೆಲೆ ಏರಿಕೆಯ ಬಗ್ಗೆ ಉತ್ತರ ಇಲ್ಲ. ಸಣ್ಣ ವ್ಯಾಪಾರಿಗಳ ಸಂಕಷ್ಟದ ಬಗ್ಗೆ ಚರ್ಚೆ ಇಲ್ಲ. ಆದರೆ ‘ರೀಲ್ಸ್ ಡಿಪ್ಲೊಮಸಿ’ ಮಾತ್ರ ಭರ್ಜರಿ. ಇದೀಗ ದೇಶದ ಆಡಳಿತ ಸಂಸತ್ತಿನಲ್ಲಿ ನಡೆಯುತ್ತಿದೆಯೋ… ಅಥವಾ ವಾಟ್ಸಪ್ ಯೂನಿವರ್ಸಟಿಗಳಲ್ಲಿ, ಕ್ಯಾಮೆರಾ ಮುಂದೆ ನಡೆಯುತ್ತಿದೆಯೊ ಎಂದು ದೇಶದ ಜನರು ಕೇಳುವಂತಾಗಿದೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ ಮಾತು ಅಕ್ಷರಶಃ ಸತ್ಯ. ‘ದೇಶದ ಜನರೊಂದಿಗೆ ಏನು ಆಟ ನಡೆಯುತ್ತಿದೆ ನೋಡಿ.’ ದೇಶ ಆರ್ಥಿಕ ಅನಿಶ್ಚಿತತೆಯ ಅಂಚಿನಲ್ಲಿ ನಿಂತಿರುವಾಗ, ಪ್ರಧಾನಮಂತ್ರಿಯವರ ಆದ್ಯತೆ ‘ಮೆಲೋಡಿ ಟಾಫಿ ಕಂಟೆಂಟ್’ ಆಗಿದ್ದರೆ ಇದು ಆಡಳಿತದ ವೈಫಲ್ಯ ಮಾತ್ರವಲ್ಲ, ದೇಶದ ಜನರ ನೋವಿನ ಮೇಲೆಯೇ ನಡೆಯುತ್ತಿರುವ ರಾಜಕೀಯ ಪ್ರದರ್ಶನ ಎಂದು ಹರಿಪ್ರಸಾದ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News