×
Ad

ನಾಳೆ (ಮೇ 20) ಔಷಧಿ ವ್ಯಾಪಾರಿಗಳ ಮುಷ್ಕರ

Update: 2026-05-19 19:00 IST

ಸಾಂದರ್ಭಿಕ ಚಿತ್ರ (AI)

ಬೆಂಗಳೂರು: ಆನ್‍ಲೈನ್ ಔಷಧ ಮಾರಾಟ ಮತ್ತು ಇ-ಕಾಮರ್ಸ್ ಸಂಸ್ಥೆಗಳ ಅನಿಯಂತ್ರಿತ ವ್ಯವಹಾರವನ್ನು ವಿರೋಧಿಸಿ ನಾಳೆ (ಮೇ 20) ‘ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘ’ದ ನೇತೃತ್ವದಲ್ಲಿ ರಾಷ್ಟ್ರಾದ್ಯಂತ ಒಂದು ದಿನದ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ಆ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಅಗತ್ಯವಿರುವ ಔಷಧಿಗಳ ಲಭ್ಯತೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಡೆಲಿವರಿ ಆ್ಯಪ್ ಆಧಾರಿತ ಔಷಧಿ ಮಾರಾಟದಿಂದ ಅಕ್ರಮ ಇ-ಫಾರ್ಮಸಿಗಳು, ನಿಯಂತ್ರಣವಿಲ್ಲದ ಆನ್‍ಲೈನ್ ಔಷಧ ಮಾರಾಟ, ಸೂಕ್ತ ವೈದ್ಯರ ಚೀಟಿ ಇಲ್ಲದೇ ನಕಲಿ ಪ್ರಿಸ್ಕ್ರಿಪ್ಷನ್‍ಗಳ ಬಳಕೆ, ಆಂಟಿಬಯೋಟಿಕ್ ಮತ್ತು ಚಟ ಉಂಟುಮಾಡುವ ಔಷಧಿಗಳ ದುರುಪಯೋಗ, ರೋಗಿ ಮತ್ತು ಫಾರ್ಮಸಿಸ್ಟ್ ನಡುವೆ ನೇರ ಸಂಪರ್ಕದ ಕೊರತೆ ಸೃಷ್ಟಿಸಲಿದೆ ಎಂದು ಆರೋಪಿಸಲಾಗಿದೆ.

ನಕಲಿ ಮತ್ತು ಸರಿಯಾಗಿ ಸಂಗ್ರಹಿಸದ ಔಷಧಿಗಳ ಅಪಾಯ, ದೊಡ್ಡ ಕಂಪೆನಿಗಳ ಭಾರೀ ರಿಯಾಯಿತಿಯಿಂದ ಸಣ್ಣ ಪ್ರಮಾಣದ ಔಷಧ ವ್ಯಾಪಾರಿಗಳಿಗೆ ಅಪಾಯ ಮತ್ತು ಮಾರುಕಟ್ಟೆಯಲ್ಲಿ ಏಕಾಧಿಪತ್ಯದ ಭೀತಿ ಉಂಟು ಮಾಡುತ್ತಿರುವುದು ಮುಷ್ಕರಕ್ಕೆ ಪ್ರಮುಖ ಕಾರಣಗಳು ಎಂದು ಔಷಧ ವ್ಯಾಪಾರಿಗಳ ಸಂಘಟನೆಗಳು ತಿಳಿಸಿವೆ.

ಔಷಧಿ ವ್ಯಾಪಾರಿಗಳ ಸಂಘಟನೆಯು ದೇಶದ 12.40 ಲಕ್ಷಕ್ಕೂ ಹೆಚ್ಚು ಔಷಧಿ ವ್ಯಾಪಾರಿಗಳನ್ನು ಪ್ರತಿನಿಧಿಸುತ್ತದೆ. ಇದರೊಂದಿಗೆ ರಾಜ್ಯ ಔಷಧಿ ವ್ಯಾಪಾರಿಗಳ ಸಂಘ(ಕೆಸಿಡಿಎ) ಬೆಂಗಳೂರು ಫಾರ್ಮಾ ಕೈಜೋಡಿಸಿದೆ. ಇದರ ಅಂಗ ಸಂಸ್ಥೆಯಾದ ರಿಟೇಲರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್ ಫಾರಂ ಇಂದು ನಡೆಯುತ್ತಿರುವ ಒಂದು ದಿನದ ಮುಷ್ಕರಕ್ಕೆ ಬೆಂ.ನಗರ ಜಿಲ್ಲೆಯ ಔಷಧಿ ವ್ಯಾಪಾರಿಗಳೂ ಬೆಂಬಲ ನೀಡಲಿದ್ದಾರೆ ಎಂದು ಡಿಸ್ಟ್ರಿಬ್ಯೂಟರ್ಸ್ ಫೋರಂ ಸಂಘದ ಅಧ್ಯಕ್ಷ ರಘುನಾಥ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಪ್ರಮುಖ ಬೇಡಿಕೆಗಳು:

► ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಆನ್‍ಲೈನ್ ಔಷಧ ವಿತರಣೆಗೆ ಸರಕಾರ ನೀಡಿದ್ದ ತಾತ್ಕಾಲಿಕ ಸಡಿಲಿಕೆಗಳನ್ನು ಹಿಂಪಡೆಯುವುದು.

► ಸ್ಥಳೀಯ ಔಷಧ ವ್ಯಾಪಾರಿಗಳ ಹಿತರಕ್ಷಣೆಗಾಗಿ ಸೂಕ್ತ ನೀತಿಗಳನ್ನು ರೂಪಿಸುವುದು.

► ಕೇಂದ್ರ ಸರಕಾರ ಅಕ್ರಮ ಇ-ಫಾರ್ಮಸಿಗಳನ್ನು ಬಂದ್ ಮಾಡಬೇಕು.

► ಅತಿಯಾದ ರಿಯಾಯಿತಿ ವಿರುದ್ಧ ಕಠಿಣ ಕ್ರಮ ಕೈಗೊಂಡು ಸಣ್ಣ ಔಷಧಿ ವ್ಯಾಪಾರಿಗಳನ್ನು ರಕ್ಷಿಸುವುದು.


ಆಸ್ಪತ್ರೆಗಳ ಒಳಗೆ ಮತ್ತು ಹೊರಗಿನ ಆವರಣಗಳಲ್ಲಿರುವ ಮೆಡಿಕಲ್ ಸ್ಟೋರ್ ಗಳು ಮಾತ್ರ ತೆರೆದಿರುತ್ತವೆ. ತುರ್ತು ಔಷಧ ಸೇವೆಗಳು ಲಭ್ಯ ಇರುತ್ತವೆ. ಜನೌಷಧ ಕೇಂದ್ರಗಳು ತೆರೆದಿರುತ್ತವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News