×
Ad

ಅಕ್ರಮ ಹಣ ವರ್ಗಾವಣೆ ಪ್ರಕರಣ; ಶ್ರೀಕಿ ಸೇರಿ ಮೂವರನ್ನು ಮತ್ತೆ 5 ದಿನ ಈಡಿ ಕಸ್ಟಡಿಗೆ ನೀಡಿದ ವಿಶೇಷ ಕೋರ್ಟ್

Update: 2026-05-18 23:00 IST

ಸಾಂದರ್ಭಿಕ ಚಿತ್ರ | Image by freepik

ಬೆಂಗಳೂರು : ಬಿಟ್‌ ಕಾಯಿನ್‌ ಹಗರಣ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ, ಸುನೀಶ್‌ ಹೆಗಡೆ ಹಾಗೂ ರಾಬಿನ್‌ ಖಂಡೇಲವಾಲ್‌ ಅವರನ್ನು ಮತ್ತೆ 5 ದಿನ ಜಾರಿ ನಿರ್ದೇಶನಾಲಯದ (ಈಡಿ) ವಶಕ್ಕೆ ಒಪ್ಪಿಸಿ ಬೆಂಗಳೂರಿನ ವಿಶೇಷ ನ್ಯಾಯಾಲಯ ಆದೇಶಿಸಿದೆ‌.

ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಚಂದ್ರಶೇಖರ್‌ ರೆಡ್ಡಿ ಅವರು ಆರೋಪಿಗಳನ್ನು ಮೇ 22ರವರೆಗೆ ಈಡಿ ಕಸ್ಟಡಿಗೆ ನೀಡಿದ್ದಾರೆ. ಮೇ 9ರಂದು ಆರೋಪಿಗಳನ್ನು 10 ದಿನ ಈಇಡಿ ಸುಪರ್ದಿಗೆ ನೀಡಲಾಗಿತ್ತು. ಸೋಮವಾರ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

ಪ್ರಕರಣದ ಹಿನ್ನೆಲೆ:

ಕರ್ನಾಟಕ ಸರ್ಕಾರದ ಇ-ಪ್ರಕ್ಯೂರ್‌ಮೆಂಟ್‌ ಪೋರ್ಟಲ್‌ನಿಂದ 11.5 ಕೋಟಿ ರೂ. ಕದ್ದಿರುವುದು, ಭಾರತದ ಗೇಮಿಂಗ್‌ ವೆಬ್‌ಸೈಟ್‌ಗಳ ಹ್ಯಾಕಿಂಗ್‌ ಮತ್ತು ವಿದೇಶದಲ್ಲಿ ಕ್ರಿಪ್ಟೊ ಕರೆನ್ಸಿ ಬದಲಾವಣೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಈಡಿ ತನಿಖೆ ನಡೆಸುತ್ತಿದೆ.

ಇತ್ತೀಚೆಗೆ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ಮನೆಯಲ್ಲಿಯೂ ಈಡಿ ಶೋಧ ನಡೆಸಿತ್ತು. ಯುನೋಕಾಯಿನ್‌ ಹ್ಯಾಕಿಂಗ್‌ ಮತ್ತು ಕಳವು ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ಶ್ರೀಕಿ ಮತ್ತಿತರರ ವಿರುದ್ಧ ತನಿಖೆ ನಡೆಸಿತ್ತು.ಗೇಮಿಂಗ್‌ ವೆಬ್‌ಸೈಟ್‌ಗಳ ಹ್ಯಾಕಿಂಗ್‌ ಮತ್ತು ಬಿಟ್‌  ಬಳಸಿ ಡಾರ್ಕ್‌ನೆಟ್‌ ಮೂಲಕ ಮಾದಕ ದ್ರವ್ಯ ತರಿಸಿದ ಆರೋಪದ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2023ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಹಿರಿಯ ಐಪಿಎಸ್‌ ಅಧಿಕಾರಿ ಮನೀಷ್‌ ಖರ್ಬೀಕರ್‌ ನೇತೃತ್ವದಲ್ಲಿ ಬಿಟ್‌ ಕಾಯಿನ್‌ ಹಗರಣದ ತನಿಖೆಗೆ ಎಸ್‌ಐಟಿ ನೇಮಿಸಲಾಗಿತ್ತು. ಆನಂತರ, 2024ರ ಜುಲೈನಲ್ಲಿ ಶ್ರೀಕಿ ಹಾಗೂ ಖಂಡೇಲವಾಲಾ ವಿರುದ್ಧ ದಾಖಲಾಗಿರುವ ಕೊಕಾ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿತ್ತು. ಈ ಇಬ್ಬರೂ 2020ರಲ್ಲಿ ಅಶೋಕ ನಗರ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣದ ರದ್ದತಿ ಕೋರಿ ಸಲ್ಲಿಸಿರುವ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News