×
Ad

"ʼಇವ ನಮ್ಮವʼ ನಿಲುವನ್ನು ಅಳವಡಿಸಿಕೊಳ್ಳಬೇಕು": ಹಿಜಾಬ್ ನಿರ್ಬಂಧಿಸುವ ಆದೇಶ ಹಿಂಪಡೆದ ರಾಜ್ಯ ಸರಕಾರ

►ಜನಿವಾರ, ಪೇಟ, ರುದ್ರಾಕ್ಷಿಗೂ ಅವಕಾಶ ►ಬಿಜೆಪಿ ಸರಕಾರ ಹೊರಡಿಸಿದ್ದ ಆದೇಶದಲ್ಲಿ ಏನಿತ್ತು?; ಹೊಸ ಆದೇಶದಲ್ಲೇನಿದೆ?

Update: 2026-05-13 20:59 IST

ಬೆಂಗಳೂರು: 2022 ರಲ್ಲಿ ಬಿಜೆಪಿ ಸರಕಾರ ಹೊಡಿಸಿದ್ದ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವ ಕುರಿತ ಆದೇಶವನ್ನು ಬುಧವಾರ ಸಿದ್ದರಾಮಯ್ಯ ಸರಕಾರ ಹಿಂಪಡೆದಿದೆ.

2022 ರಲ್ಲಿ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ಕುರಿತು ವಿವಾದ ಉಂಟಾಗಿದ್ದು, ಬಳಿಕ ವಿದ್ಯಾರ್ಥಿನಿಯರನ್ನು ಹೊರಗೆ ಕಳುಹಿಸಿದ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಘಟನೆ ಸಂಬಂಧ ಆಗಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಸಮವಸ್ತ್ರ ಧರಿಸುವ ಕುರಿತು ಆದೇಶ ಹೊರಡಿಸಿದ್ದು, ಈ ಆದೇಶ ಹಿನ್ನಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಲಾಗಿತ್ತು. ಇದು ವ್ಯಾಪಕ ಆಕ್ರೋಶ ಹಾಗೂ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಇದೀಗ ಈ ಆದೇಶವನ್ನು ರಾಜ್ಯ ಸರಕಾರ ವಾಪಸ್ ಪಡೆದಿದೆ.

ಸಮವಸ್ತ್ರ ಮತ್ತು ಶಿಸ್ತನ್ನು ಕಾಪಾಡುವ ಜೊತೆಗೆ, ತಾರತಮ್ಯವಿಲ್ಲದ ಮತ್ತು ಸಾಂವಿಧಾನಿಕವಾಗಿ ಸಮತೋಲಿತವಾದ ರೀತಿಯಲ್ಲಿ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ಧರಿಸಲು ಅನುಮತಿಸುವ ಉದ್ದೇಶದಿಂದ 2022 ರ ಆದೇಶವನ್ನು ಹಿಂಪಡೆದು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಹೊಸ ನಿರ್ದೇಶನಗಳನ್ನು ನೀಡುವುದು ಅಗತ್ಯವೆಂದು ಸರ್ಕಾರವು ತೀರ್ಮಾನಿಸಿದೆ ಎಂದು ರಾಜ್ಯ ಸರಕಾರ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ನ್ಯಾಯಾಲಯದ ಕದ ತಟ್ಟಿದ್ದ ವಿದ್ಯಾರ್ಥಿನಿಯರು:

ಬಿಜೆಪಿ ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ತ್ರಿಸದಸ್ಯ ಪೀಠವು ಸರ್ಕಾರದ ಸಮವಸ್ತ್ರ ಆದೇಶವನ್ನು ಸಾಂವಿಧಾನಿಕವಾಗಿ ಎತ್ತಿ ಹಿಡಿದಿತ್ತು. ಶಿಕ್ಷಣ ಸಂಸ್ಥೆಗಳು ಸಮವಸ್ತ್ರವನ್ನು ನಿಗದಿಪಡಿಸುವ ಅಧಿಕಾರವನ್ನು ಹೊಂದಿವೆ ಮತ್ತು ಇದು ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಲ್ಲ ಎಂದು ನ್ಯಾಯಾಲಯ ಅಂದು ತೀರ್ಪು ನೀಡಿತ್ತು. ಹೈಕೋರ್ಟ್‌ನ ಈ ತೀರ್ಪು ಅಂದು ಸಾಕಷ್ಟು ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿತ್ತಲ್ಲದೆ, ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ದಾರಿ ಮಾಡಿಕೊಟ್ಟಿತ್ತು.

ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಕ್ಟೋಬರ್ 2022 ರಲ್ಲಿ ಈ ಪ್ರಕರಣದಲ್ಲಿ ವಿಭಜಿತ ತೀರ್ಪನ್ನು (Split Verdict) ನೀಡಿತ್ತು. ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಭಿನ್ನಾಭಿಪ್ರಾಯದ ತೀರ್ಪು ಪ್ರಕಟಿಸಿತ್ತು. ನ್ಯಾಯಮೂರ್ತಿ ಗುಪ್ತಾ ಅವರು ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದರೆ, ನ್ಯಾಯಮೂರ್ತಿ ಧುಲಿಯಾ ಅವರು ಹಿಜಾಬ್ ಧರಿಸುವುದು ಅವರ ವೈಯಕ್ತಿಕ ಆಯ್ಕೆಯ ವಿಷಯವಾಗಿದೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡೆತಡೆ ಇರಬಾರದು ಎಂದು ಹೇಳುವ ಮೂಲಕ ಸರ್ಕಾರದ ನಿಷೇಧವನ್ನು ರದ್ದುಗೊಳಿಸಿದ್ದರು. ಇಬ್ಬರು ನ್ಯಾಯಾಧೀಶರ ತೀರ್ಪು ಭಿನ್ನವಾಗಿದ್ದರಿಂದ, ಈ ಪ್ರಕರಣವನ್ನು ಅಂತಿಮ ತೀರ್ಮಾನಕ್ಕಾಗಿ ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿತ್ತು. ಅಲ್ಲಿಂದ ಈ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು, ಈಗ ರಾಜ್ಯ ಸರ್ಕಾರದ ಈ ಹೊಸ ಆದೇಶವು ಆ ಇಡೀ ಕಾನೂನು ಪ್ರಕ್ರಿಯೆಯ ನಡುವೆಯೇ ಹೊರಬಿದ್ದಿದೆ.

2022ರ ಆದೇಶದಲ್ಲಿ ಏನಿತ್ತು?:

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನೇ ಕಡ್ಡಾಯವಾಗಿ ಧರಿಸಬೇಕು. ಖಾಸಗಿ ಶಾಲಾ-ಕಾಲೇಜುಗಳಲ್ಲಿ ಸಹ ಆಯಾ ಆಡಳಿತ ಮಂಡಳಿ ನಿರ್ಧರಿಸಿರುವ ಸಮವಸ್ತ್ರವನ್ನು ಧರಿಸಬೇಕು. ಪದವಿ ಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮಂಡಳಿ ಮೇಲ್ವಿಚಾರಣಾ ಸಮಿತಿ ನಿರ್ಧರಿಸುವ ಸಮವಸ್ತ್ರ ಧರಿಸಬೇಕು ಎಂದು ಎಂದು ಆಗಿನ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು.

ಆಡಳಿತ ಮಂಡಳಿಗಳು ಸಮವಸ್ತ್ರಗಳನ್ನು ನಿಗದಿಪಡಿಸದೇ ಇದ್ದರೆ ಸಮಾನತೆ ಮತ್ತು ಏಕತೆಯನ್ನು ಕಾಪಾಡಿಕೊಂಡು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಉಡುಪು ಧರಿಸಬೇಕು ಎಂದೂ ಆದೇಶದಲ್ಲಿ ಹೇಳಲಾಗಿತ್ತು.

ಹೊಸ ಆದೇಶಲ್ಲೇನಿದೆ?

ಶಿಕ್ಷಣ ಸಂಸ್ಥೆಗಳು ಕೇವಲ ಶೈಕ್ಷಣಿಕ ಬೋಧನಾ ಕೇಂದ್ರಗಳಲ್ಲ. ಬದಲಾಗಿ ವಿದ್ಯಾರ್ಥಿಗಳು ವೈಜ್ಞಾನಿಕತೆ, ವೈಚಾರಿಕತೆ, ಸಮಾನತೆ, ಘನತೆ, ಭ್ರಾತೃತ್ವ, ಶಿಸ್ತು, ಪರಸ್ಪರ ಗೌರವ, ಸಾಮಾಜಿಕ ಸಾಮರಸ್ಯ ಮತ್ತು ಜವಾಬ್ದಾರಿಯುತ ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಯುವ ಸಾಂವಿಧಾನಿಕ ಕೇಂದ್ರಗಳಾಗಿವೆ. ಕರ್ನಾಟಕ ಶಿಕ್ಷಣ ಕಾಯ್ದೆ, 1983ರ ಸೆಕ್ಷನ್ 7 ರನ್ವಯ, ಶಿಕ್ಷಣದ ಸಮರ್ಪಕ ನಿಯಂತ್ರಣಕ್ಕಾಗಿ ಅಗತ್ಯವಿರುವ ವಿಷಯಗಳನ್ನು ನಿರ್ದಿಷ್ಟಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಸೆಕ್ಷನ್ 133(2) ರನ್ವಯ ಈ ಕಾಯ್ದೆ ಮತ್ತು ನಿಯಮಗಳ ಉದ್ದೇಶಗಳನ್ನು ಜಾರಿಗೊಳಿಸಲು ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡುವ ಅಧಿಕಾರವೂ ಸರ್ಕಾರಕ್ಕಿದೆ.

2022 ರ ಆದೇಶವನ್ನು ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಮತ್ತು ಉಡುಪು ಸಂಹಿತೆಗೆ ಸಂಬಂಧಿಸಿದಂತೆ ಉಂಟಾಗಿದ್ದ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಹೊರಡಿಸಲಾಗಿತ್ತು. ಸರ್ಕಾರಿ, ಖಾಸಗಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಸಂಬಂಧಿತ ಪ್ರಾಧಿಕಾರವು ನಿಗದಿಪಡಿಸಿದ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು ಹಾಗೂ ಸಮವಸ್ತ್ರ, ನಿಗದಿಪಡಿಸದಿದ್ದಲ್ಲಿ ಏಕತೆ, ಸಮಾನತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಹೊಂದುವಂತಹ ಉಡುಪನ್ನು ಧರಿಸಬೇಕು ಎಂದು 2022 ರ ಆದೇಶದಲ್ಲಿ ತಿಳಿಸಲಾಗಿತ್ತು.

ಆದರೆ, ಸಮವಸ್ತ್ರ, ನಿಯಮಗಳನ್ನು ಜಾರಿಗೊಳಿಸುವಾಗ, ವಿವಿಧ ಧರ್ಮ ಮತ್ತು ಸಂಪ್ರದಾಯಗಳ ವಿದ್ಯಾರ್ಥಿಗಳು ಧರಿಸುವ ಸಾಂಪ್ರದಾಯಿಕ ಮತ್ತು ನಂಬಿಕೆ ಆಧಾರಿತವಾದ ಕೆಲವು ಸೀಮಿತ ಗುರುತುಗಳ ಕುರಿತಾದ ವಿಷಯಗಳು ಸರ್ಕಾರದ ಗಮನಕ್ಕೆ ಬಂದಿವೆ. ಈ ವಿಷಯವನ್ನು ಮರು ಪರಿಶೀಲಿಸಿದ ಸರ್ಕಾರವು, ವಿದ್ಯಾರ್ಥಿಗಳು ಸಾಮಾನ್ಯವಾಗಿ ಧರಿಸುವ ಇಂತಹ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ನಿರ್ಬಂಧಿಸದೆಯೇ ಸಂಸ್ಥೆಯ ಶಿಸ್ತು ಮತ್ತು ಸುವ್ಯವಸ್ಥೆಯನ್ನು ಕಾಪಾಡಬಹುದು ಎಂದು ಅಭಿಪ್ರಾಯಪಟ್ಟಿದೆ. ಆದರೆ, ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ನಿಗದಿತ ಸಮವಸ್ತ್ರಕ್ಕೆ ಅಡ್ಡಿಯಾಗಬಾರದು. ವಿದ್ಯಾರ್ಥಿಗಳ ಗುರುತಿಸುವಿಕೆಗೆ ತೊಂದರೆಯಾಗಬಾರದು ಹಾಗೂ ಶಿಸ್ತು, ಸುರಕ್ಷತೆ, ಬೋಧನೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರಬಾರದು ಎಂಬುದನ್ನು ಸರ್ಕಾರವು ಗಂಭೀರವಾಗಿ ಗಣನೆಗೆ ತೆಗೆದುಕೊಂಡಿದೆ ಹಾಗೂ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಅಳವಡಿಸಿಕೊಂಡಿರುವ ವಸ್ತ್ರ ಸಂಹಿತೆ ನಿಯಮಗಳನ್ನೂ ಸರಕಾರ ಪರಿಶೀಲಿಸಿದೆ.

ಶಿಕ್ಷಣ ಸಂಸ್ಥೆಗಳು ವೈಚಾರಿಕತೆ, ವೈಜ್ಞಾನಿಕತೆ, ಸಮಾನತೆ, ಭ್ರಾತೃತ್ವ, ಘನತೆ, ಪರಸ್ಪರ ಗೌರವ ಮತ್ತು ಜಾತ್ಯತೀತ ದೃಷ್ಟಿಕೋನವನ್ನು ಉತ್ತೇಜಿಸಬೇಕು. ಸಾಂವಿಧಾನಿಕ ಅರ್ಥದಲ್ಲಿ ಜಾತ್ಯತೀತತೆ ಎಂದರೆ ವೈಯಕ್ತಿಕ ನಂಬಿಕೆಗಳ ವಿರೋಧವಲ್ಲ. ಬದಲಾಗಿ, ಎಲ್ಲರಿಗೂ ಸಮಾನ ಗೌರವ ನೀಡುವಿಕೆ, ಸಾಂಸ್ಥಿಕ ನಿಷ್ಪಕ್ಷಪಾತತೆ ಮತ್ತು ತಾರತಮ್ಯರಹಿತ ವರ್ತನೆಯಾಗಿದೆ. ಸರ್ಕಾರವು ಸಾಂವಿಧಾನಿಕ ತತ್ವಗಳಿಗೆ ಅನುಗುಣವಾಗಿ ಎಲ್ಲಾ ಧರ್ಮ ಮತ್ತು ಸಂಪ್ರದಾಯಗಳ ಬಗ್ಗೆ ತಟಸ್ಥ ಮತ್ತು ಸಮಾನ ನಿಲುವು ಹೊಂದಿರಬೇಕು. ಅದೇ ರೀತಿ, ಯಾರಿಗೂ ತೊಂದರೆಯಾಗದಂತಹ ಸೀಮಿತ ಸಾಂಪ್ರದಾಯಿಕ ಅಥವಾ ನಂಬಿಕೆ ಆಧಾರಿತ ಆಚರಣೆಗಳಿಂದಾಗಿ ಯಾವುದೇ ವಿದ್ಯಾರ್ಥಿಗೆ ಶಿಕ್ಷಣದ ಹಕ್ಕು ನಿರಾಕರಣೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಸಂಸ್ಥೆಯ ಶಿಸ್ತು ಹಾಗೂ ಸಮಾನತೆ, ಘನತೆ ಮತ್ತು ಶಿಕ್ಷಣದ ಹಕ್ಕಿನಂತಹ ಸಾಂವಿಧಾನಿಕ ಮೌಲ್ಯಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿದೆ.

ಆದ್ದರಿಂದ, ನಿಗದಿತ ಸಮವಸ್ತ್ರಕ್ಕೆ ಪೂರಕವಾಗಿ ಮತ್ತು ಅದಕ್ಕೆ ಹೊಂದಿಕೊಳ್ಳುವಂತೆ ಸೀಮಿತ ಸಾಂಪ್ರದಾಯಿಕ ಅಥವಾ ನಂಬಿಕೆ ಆಧಾರಿತ ಗುರುತುಗಳನ್ನು ಧರಿಸಲು ಅವಕಾಶ ನೀಡುವ, ಆದರೆ ಸಂಸ್ಥೆಯ ಶಿಸ್ತು, ಸಾರ್ವಜನಿಕ ಸುವ್ಯವಸ್ಥೆ, ಸುರಕ್ಷತೆ, ತರಗತಿಯ ವಾತಾವರಣ ಮತ್ತು ಶಿಕ್ಷಣ ಸಂಸ್ಥೆಗಳ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುವ ವ್ಯವಸ್ಥೆಯನ್ನು ರೂಪಿಸುವುದು ಸೂಕ್ತವೆಂದು ಸರ್ಕಾರ ಭಾವಿಸಿದೆ. ಈ ಹಿನ್ನೆಲೆಯಲ್ಲಿ, ಸಮವಸ್ತ್ರ ಮತ್ತು ಶಿಸ್ತನ್ನು ಕಾಪಾಡುವ ಜೊತೆಗೆ, ತಾರತಮ್ಯವಿಲ್ಲದ ಮತ್ತು ಸಾಂವಿಧಾನಿಕವಾಗಿ ಸಮತೋಲಿತವಾದ ರೀತಿಯಲ್ಲಿ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ಧರಿಸಲು ಅನುಮತಿಸುವ ಉದ್ದೇಶದಿಂದ 2022ರ ಆದೇಶವನ್ನು ಹಿಂಪಡೆದು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಹೊಸ ನಿರ್ದೇಶನಗಳನ್ನು ನೀಡುವುದು ಅಗತ್ಯವೆಂದು ಸರ್ಕಾರವು ತೀರ್ಮಾನಿಸಿದೆ. ಈ ಹಿನ್ನೆಲೆ 2022 ರ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹೊಸ ನಿಯಮಗಳೇನು?

ರಾಜ್ಯದ ಎಲ್ಲಾ ಸರ್ಕಾರಿ ಶಾಲೆ, ಅನುದಾನಿತ ಶಿಕ್ಷಣ ಸಂಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಪದವಿಪೂರ್ವ ಕಾಲೇಜುಗಳು, ಸಂಸ್ಥೆಯ ಅಗತ್ಯಗಳು ಮತ್ತು ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ನಿಯಮಾನುಸಾರ ಸಮವಸ್ತ್ರವನ್ನು ನಿಗದಿಪಡಿಸಿ ಕಡ್ಡಾಯಗೊಳಿಸುವುದನ್ನು ಮುಂದುವರಿಸಬೇಕು. ವಿದ್ಯಾರ್ಥಿಗಳು ನಿಗದಿಪಡಿಸಲಾದ ಸಮವಸ್ತ್ರದೊಂದಿಗೆ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ಧರಿಸಲು ಅನುಮತಿಸಲಾಗಿದೆ. ಆದರೆ, ಇಂತಹ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ಸಮವಸ್ತ್ರಕ್ಕೆ ಪೂರಕವಾಗಿರಬೇಕು ಮತ್ತು ನಿಗದಿತ ಸಮವಸ್ತ್ರವನ್ನು ಬದಲಿಸುವ, ಮಾರ್ಪಡಿಸುವ ಅಥವಾ ವಿಫಲಗೊಳಿಸುವಂತಿರಬಾರದು.

ವಿದ್ಯಾರ್ಥಿಗಳು ಸಾಮಾನ್ಯವಾಗಿ ಧರಿಸುವ ಪೇಟ/ಟರ್ಬನ್, ಜನಿವಾರ/ಪವಿತ್ರ ದಾರ, ಶಿವದಾರ, ರುದ್ರಾಕ್ಷಿ, ತಲೆವಸ್ತ್ರ/ಹಿಜಾಬ್ (Headscarf) ಅಥವಾ ಇತರೆ ಯಾವುದೇ ಸಮಾನ ಸ್ವರೂಪದ ಸಾಂಪುದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ಅನುಮತಿಸಬಹುದಾದ ಸಂಕೇತಗಳಾಗಿವೆ. ಆದರೆ ಇವು ಶಿಸ್ತು, ಸುರಕ್ಷತೆ ಮತ್ತು ವಿದ್ಯಾರ್ಥಿಯ ಗುರುತಿಸುವಿಕೆಗೆ ಅಡ್ಡಿಯಾಗಬಾರದು ಎಂದು ಆದೇಶದಲ್ಲಿ ತಿಳಿಸಿದೆ.

ನಿಗದಿತ ಸಮವಸ್ತ್ರದೊಂದಿಗೆ ಇಂತಹ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ಧರಿಸಿರುವ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಸಂಸ್ಥೆ, ತರಗತಿ, ಪರೀಕ್ಷಾ ಕೊಠಡಿ ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರವೇಶವನ್ನು ನಿರಾಕರಿಸುವಂತಿಲ್ಲ.

ಇಂತಹ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ಧರಿಸುವಂತೆ ಯಾವುದೇ ವಿದ್ಯಾರ್ಥಿಯನ್ನು ಒತ್ತಾಯಿಸುವಂತಿಲ್ಲ. ಅದೇ ರೀತಿ ಸರ್ಕಾರವು ಅನುಮತಿಸಿರುವ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ದತಿ ಆಧಾರಿತವಾದ ಸಂಕೇತಗಳನ್ನು ಬಲವಂತವಾಗಿ ತೆಗೆಯುವಂತೆಯೂ ಒತ್ತಾಯಿಸುವಂತಿಲ್ಲ. ಆದರೆ, ಪರೀಕ್ಷಾ ಸಂದರ್ಭಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ವಸ್ತ್ರ, ಸಂಹಿತೆಯ ನಿಯಮಗಳನ್ನು ಸಂದರ್ಭೋಚಿತವಾಗಿ ಸಂಬಂಧಿಸಿದ ಪ್ರಾಧಿಕಾರಗಳು ಅಳವಡಿಸಿಕೊಳ್ಳಬೇಕು.

ಈ ಆದೇಶದ ಅನುಷ್ಠಾನವು ಏಕರೂಪವಾಗಿರಬೇಕು. ಧಾರ್ಮಿಕ, ಸಾಂಪ್ರದಾಯಿಕ ನಿಷ್ಪಕ್ಷಪಾತತೆಯಿಂದ ಕೂಡಿರಬೇಕು ಮತ್ತು ತಾರತಮ್ಯರಹಿತವಾಗಿರಬೇಕು. ಸಮಾನತೆ, ಘನತೆ, ಭ್ರಾತೃತ್ವ, ಜಾತ್ಯತೀತತೆ, ವೈಜ್ಞಾನಿಕತೆ, ವೈಚಾರಿಕತೆ ಮತ್ತು ಶಿಕ್ಷಣದ ಹಕ್ಕು ಎಂಬ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿರಬೇಕು. ಈ ಆದೇಶಕ್ಕೆ ವಿರುದ್ಧವಾಗಿರುವ ಯಾವುದೇ ಸುತ್ತೋಲೆ, ನಿರ್ಣಯ, ಸೂಚನೆ, ರೂಢಿ ಅಥವಾ ಸಂಸ್ಥೆಯ ನಿರ್ದೇಶನಗಳು ಅನೂರ್ಜಿತವಾಗಲಿದೆ.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು (SDMC), ಕಾಲೇಜು ಅಭಿವೃದ್ಧಿ ಸಮಿತಿಗಳು (CDC), ಆಡಳಿತ ಮಂಡಳಿಗಳು, ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಯಾವುದೇ ವಿದ್ಯಾರ್ಥಿಯನ್ನು ತಾರತಮ್ಯ ಧೋರಣೆಯಿಂದ, ಅವಮಾನಕಾರಿ ವರ್ತನೆಯ ಮೂಲಕ ಬಳಲುವಂತೆ ಮಾಡಬಾರದು. ಈ ಎಲ್ಲ ಸಂಸ್ಥೆಗಳು ಬಸವಣ್ಣನವರು ಹೇಳಿದಂತೆ "ಇವ ನಮ್ಮವ" ಎಂಬ ಉದಾತ್ತವಾದ ಒಳಗೊಳ್ಳುವ ನಿಲುವನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ಯಾವುದೇ ವಿದ್ಯಾರ್ಥಿಯ ಶಿಕ್ಷಣವು ನಿರಾಕರಣೆ ಆಗದ ರೀತಿಯಲ್ಲಿ ಸಂಸ್ಥೆಯು ಶಿಸ್ತು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು, ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಈ ಆದೇಶದ ಅನುಷ್ಠಾನಕ್ಕಾಗಿ ಅಗತ್ಯ ನಿರ್ದೇಶನಗಳನ್ನು ಹೊರಡಿಸಬೇಕು ಎಂದು ಸರಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News