×
Ad

ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಿರುವ ವಿದ್ಯಾರ್ಥಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ನಿರಾಕರಿಸುವಂತಿಲ್ಲ: ಸಚಿವ ಎಸ್.ಮಧು ಬಂಗಾರಪ್ಪ

"ಜನಿವಾರ ತೆಗೆಸಿದ ಪ್ರಕರಣದಿಂದ ನೋವಾಗಿದೆ"

Update: 2026-05-13 21:34 IST

ಸಚಿವ ಎಸ್. ಮಧು ಬಂಗಾರಪ್ಪ

ಬೆಂಗಳೂರು: ‘ಯಾವುದೇ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತರಾಗಬಾರದು. ಹಾಗೆಯೇ ವಿದ್ಯಾರ್ಥಿಗಳ ಅವಮಾನ, ನೋವು, ಆತ್ಮಸ್ಥೈರ್ಯಕ್ಕೆ ಧಕ್ಕೆ ಉಂಟಾಗುವುದನ್ನು ತಡೆಯಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಲಾ-ಕಾಲೇಜುಗಳು ನಿಗದಿಪಡಿಸಿರುವ ಸಮವಸ್ತ್ರದೊಂದಿಗೆ ಹಿಜಾಬ್, ಜನಿವಾರ ಸೇರಿ ಯಾವುದೇ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಿರುವ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಸಂಸ್ಥೆ, ತರಗತಿ, ಪರೀಕ್ಷಾ ಕೊಠಡಿ ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ನಿರಾಕರಿಸುವಂತಿಲ್ಲ. ಈ ಬಗ್ಗೆ ಆದೇಶ ಹೊರಡಿಸಲಾಗಿದೆ ಎಂದರು.

ಈಗ ಹೊರಡಿಸಿರುವ ಆದೇಶವು 12ನೇ ತಗತಿಯವರೆಗೆ ಅನ್ವಯವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಸೇರಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದೇವೆ. ಯಾವ ಧಾರ್ಮಿಕ ಮುಖಂಡರೊಂದಿಗೆ ಈ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

2022ರ ಫೆ.5ರಂದು ಹೊರಡಸಿದ್ದ ಆದೇಶದಿಂದ ನಮ್ಮ ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಲಿದೆ. ಜನಿವಾರ ತೆಗೆಸಿದ ಪ್ರಕರಣದಿಂದ ನೋವಾಗಿದೆ. ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ ರಾಜ್ಯ ಸರಕಾರವು ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿದೆ. ಸಂವಿಧಾನ ಪೀಠಿಕೆ ಓದುವುದು ರಾಜ್ಯಾದ್ಯಂತ ಜಾರಿಮಾಡಿದ್ದೇವೆ. ಹಾಗೆ ಸರಕಾರಿ ಮತ್ತು ಖಾಸಗಿ ಶಾಲೆಯಲ್ಲಿ ನೀತಿ ವಿಜ್ಞಾನವನ್ನು ಅಳವಡಿಸಲು ಮುಂದಾಗುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಜನಿವಾರದ ವಿಷಯದಲ್ಲಿ ವಿದ್ಯಾರ್ಥಿಗೆ ಅವಹೇಳನ ಆಗಿದ್ದಕ್ಕೆ ನಾನು ಪ್ರಕ್ರಿಯೆಕೊಟ್ಟಿದ್ದೇನೆ. ಮಕ್ಕಳಿಗೆ ಜನಿವಾರ, ಹಿಜಾಬ್, ರುದ್ರಾಕ್ಷಿ ತೆಗೆಯಲು ಹೇಳಿದಾಗ ಅವರಲ್ಲಿ ಉಂಟಾಗುವ ನೋವನ್ನು ತಡೆಯಲು ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ. ಇಂತಹ ಘಟನೆ ಮತ್ತೆ ಮರುಕಳಿಸಬಾರದು. ಹೀಗಾಗಿ ನಿರ್ಧಾರ ಸಾಮರಸ್ಯ ಮೂಡಿಸುತ್ತದೆ’ ಎಂದರು.

ಶಾಸಕ ರಿಝ್ವಾನ್ ಅರ್ಶದ್ ಮಾತನಾಡಿ, ಸಮಾಜದ ಎಲ್ಲ ವರ್ಗದ ವಿದ್ಯಾರ್ಥಿಗಳು ಯಾವುದೇ ಅಡಚಣೆ ಇಲ್ಲದೆ ಮುಕ್ತವಾಗಿ ವಿದ್ಯಾಭ್ಯಾಸವನ್ನು ಪಡೆಯುವುದಕ್ಕಾಗಿ ಈ ನಿರ್ಧಾರ ತೆಗೆದು ಕೊಂಡಿದ್ದೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News