×
Ad

ಮನೆ ಬಾಗಿಲಿಗೆ ಮೀನು ತಲುಪಿಸುವ ಇ-ಕಾಮರ್ಸ್ ಪೋರ್ಟಲ್ ಲೋಕಾರ್ಪಣೆಗೆ ಕೆಎಫ್‍ಡಿಸಿ ಸಜ್ಜು

Update: 2026-06-30 18:59 IST

ಸಾಂದರ್ಭಿಕ ಚಿತ್ರ | PC : Gemini AI

ಬೆಂಗಳೂರು : ಮೀನುಗಾರಿಕೆ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ಮಹತ್ವಾಕಾಂಕ್ಷಿ ಯೋಜನೆಯಾಗಿ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ‘ಸೀಫುಡ್ ಅಟ್ ಡೋರ್‌ ಸ್ಟೆಪ್ಸ್' ಡಿಜಿಟಲ್ ಇ-ಕಾಮರ್ಸ್ ವೇದಿಕೆಯನ್ನು ಲೋಕಾರ್ಪಣೆಗೊಳಿಸಲು ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಈ ವೇದಿಕೆಯ ಮೂಲಕ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಾಜಾ, ಸ್ವಚ್ಛ, ಗುಣಮಟ್ಟದ ಸಮುದ್ರದ ಆಹಾರ ಉತ್ಪನ್ನಗಳನ್ನು(ಸೀ-ಫುಡ್) ತಲುಪಿಸುವ ಯೋಜನೆ ಇದಾಗಿದೆ. ಈ ವೇದಿಕೆಯು ಮೀನುಗಾರರು ಹಾಗೂ ಗ್ರಾಹಕರ ನಡುವೆ ನೇರ ಮಾರುಕಟ್ಟೆ ಸಂಪರ್ಕವನ್ನು ಕಲ್ಪಿಸುವ ಮೂಲಕ ಮಧ್ಯವರ್ತಿಗಳ ಅವಲಂಬನೆ ಕಡಿಮೆ ಮಾಡಲಿದ್ದು, ಮೀನು ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲಿದೆ.

ಇದರಿಂದ ಮೀನುಗಾರರು, ಮೀನು ಕೃಷಿಕರು, ಸ್ವಸಹಾಯ ಸಂಘಗಳು ಹಾಗೂ ಮೀನು ಉತ್ಪಾದಕರ ಸಂಸ್ಥೆಗಳ ಆದಾಯವನ್ನು ಹೆಚ್ಚಿಸುವ ಗುರಿಯನ್ನು ನಿಗಮ ಹೊಂದಿದೆ. ಭಾರತವು ವಿಶ್ವದಲ್ಲೇ ಎರಡನೇ ಅತಿದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿದ್ದರೂ, ಸಣ್ಣ ಮೀನುಗಾರರು ಮತ್ತು ಮೀನು ಕೃಷಿಕರು- ಸಂಸ್ಕರಣೆ, ಬ್ರ್ಯಾಂಡಿಂಗ್, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಸಂಪರ್ಕದ ಕೊರತೆಯಿಂದಾಗಿ ಸಮರ್ಪಕ ಆದಾಯ ಗಳಿಸಲು ಸಾಧ್ಯವಾಗುತ್ತಿಲ್ಲ. ಈ ಸವಾಲುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೆಎಫ್‍ಡಿಸಿ ಸಮುದಾಯ ಆಧಾರಿತ ಉದ್ಯಮಗಳನ್ನು ಬಲಪಡಿಸಲು ಕೌಶಲ್ಯಾಭಿವೃದ್ಧಿ, ಪ್ರಾಯೋಗಿಕ ತರಬೇತಿ ಹಾಗೂ ಅತ್ಯಾಧುನಿಕ ಮೀನು ಸಂಸ್ಕರಣಾ ಸೌಲಭ್ಯಗಳನ್ನು ಒದಗಿಸುತ್ತಿದೆ. ಜೊತೆಗೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಮಾದರಿಯ ಮೌಲ್ಯವರ್ಧಿತ ಸಮುದ್ರಾಹಾರ ಉತ್ಪನ್ನಗಳ ಅಭಿವೃದ್ಧಿಗೂ ಉತ್ತೇಜನ ನೀಡುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೀನುಗಾರಿಕೆ ಇಲಾಖೆಯ ನಿರ್ದೇಶಕ ದಿನೇಶ್ ಕುಮಾರ್, ‘ರಾಜ್ಯದ ಮೀನುಗಾರಿಕೆ ಕ್ಷೇತ್ರದ ಪರಿವರ್ತನೆಯಲ್ಲಿ ‘ಸೀಫುಡ್ ಅಟ್ ಡೋರ್‌ ಸ್ಟೆಪ್ಸ್' ಮಹತ್ವದ ಮೈಲಿಗಲ್ಲಾಗಿದೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ಮೀನುಗಾರರನ್ನು ನೇರವಾಗಿ ಗ್ರಾಹಕರೊಂದಿಗೆ ಸಂಪರ್ಕಿಸುವುದರಿಂದ ಅವರಿಗೆ ಉತ್ತಮ ಆದಾಯ ದೊರೆಯಲಿದ್ದು, ನಾಗರಿಕರಿಗೆ ಗುಣಮಟ್ಟದ, ಸುರಕ್ಷಿತ ಹಾಗೂ ತಾಜಾ ಸಮುದ್ರಾಹಾರವನ್ನು ಸುಲಭವಾಗಿ ತಲುಪಿಸಲು ಸಾಧ್ಯವಾಗುತ್ತದೆ. ಸ್ವಸಹಾಯ ಸಂಘಗಳು ಹಾಗೂ ಉತ್ಪಾದಕರ ಸಂಸ್ಥೆಗಳನ್ನು ಆಧುನಿಕ ಸಂಸ್ಕರಣಾ ಸೌಲಭ್ಯಗಳು ಮತ್ತು ನೇರ ಮಾರುಕಟ್ಟೆ ಸಂಪರ್ಕದ ಮೂಲಕ ಸದೃಢಗೊಳಿಸುವುದು ಇಲಾಖೆಯ ದೀರ್ಘಾವಧಿಯ ಗುರಿಯಾಗಿದೆ’ ಎಂದು ತಿಳಿಸಿದರು.

ಶಾಪಿಫೈ (Shopify) ತಂತ್ರಜ್ಞಾನ ಆಧಾರದಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ಇ-ಕಾಮರ್ಸ್ ವೇದಿಕೆಯನ್ನು ಮೊಬೈಲ್ ಹಾಗೂ ಕಂಪ್ಯೂಟರ್‍ಗಳ ಮೂಲಕ ಯಾವುದೇ ಪ್ರತ್ಯೇಕ ಮೊಬೈಲ್ ಆಪ್ ಅಗತ್ಯವಿಲ್ಲದೆ ಬಳಸಬಹುದಾಗಿದೆ. ಗ್ರಾಹಕರು ತಾಜಾ ಹಾಗೂ ಸಿದ್ಧ-ಅಡುಗೆ ಸಮುದ್ರಾಹಾರದ ವಿವಿಧ ಉತ್ಪನ್ನಗಳ ಚಿತ್ರ, ತೂಕ, ಬೆಲೆ ಹಾಗೂ ವಿವರಗಳನ್ನು ವೀಕ್ಷಿಸಿ ನೇರವಾಗಿ ಆರ್ಡರ್ ಮಾಡಬಹುದಾಗಿದೆ.

ಗ್ರಾಹಕರ ಅನುಕೂಲಕ್ಕಾಗಿ ಉಚಿತ ಸ್ಟೋರ್ ಪಿಕಪ್ ಹಾಗೂ ಮನೆಬಾಗಿಲಿಗೆ ವಿತರಣೆ ಎಂಬ ಎರಡು ಸೇವಾ ಆಯ್ಕೆಗಳನ್ನು ಕಲ್ಪಿಸಲಾಗಿದೆ. 5 ಕಿ.ಮೀ.ವ್ಯಾಪ್ತಿಯೊಳಗೆ ಕೇವಲ 49 ರೂ. ಶುಲ್ಕದಲ್ಲಿ ಮನೆಬಾಗಿಲಿಗೆ ವಿತರಣೆಯ ಸೌಲಭ್ಯ ದೊರೆಯಲಿದೆ. ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆ ಅಳಡಿಸಲಾಗಿರುವುದರಿಂದ ಆನ್‍ಲೈನ್ ಮೂಲಕವೇ ಪಾವತಿ ಮಾಡಿ ಕ್ಷಣಾರ್ಧದಲ್ಲಿ ಆರ್ಡರ್ ದೃಢೀಕರಿಸಿಕೊಳ್ಳಬಹುದಾಗಿದೆ.

ಈ ಯೋಜನೆಯ ಪ್ರಾಯೋಗಿಕ ಹಂತವನ್ನು ಕೆಎಫ್‍ಡಿಸಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ ಡಿಜಿಟಲ್ ವೇದಿಕೆ, ವಿತರಣಾ ವ್ಯವಸ್ಥೆ, ಸಿಬ್ಬಂದಿಯ ಕಾರ್ಯನಿರ್ವಹಣೆ ಹಾಗೂ ಸಂಪೂರ್ಣ ಕಾರ್ಯಾಚರಣೆಯನ್ನು ನೈಜ ಪರಿಸ್ಥಿತಿಯಲ್ಲಿ ಪರೀಕ್ಷಿಸಲಾಗಿದ್ದು, ವಾಣಿಜ್ಯ ಮಟ್ಟದ ಆರಂಭಕ್ಕೆ ಅಗತ್ಯವಿರುವ ಎಲ್ಲಾ ತಾಂತ್ರಿಕ ಮತ್ತು ಕಾರ್ಯಾಚರಣಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.

ಪ್ರಾಯೋಗಿಕ ಹಂತದ ಯಶಸ್ಸಿನ ಬಳಿಕ, ಈಗ ಕೆಎಫ್‍ಡಿಸಿ ವಾಣಿಜ್ಯ ಮಟ್ಟದಲ್ಲಿ ಸೇವೆಯನ್ನು ಆರಂಭಿಸಲು ಅಂತಿಮ ಹಂತದ ಸಿದ್ಧತೆಗಳನ್ನು ಕೈಗೊಂಡಿದೆ. ಮುಂದಿನ ಹಂತದಲ್ಲಿ ಆಂಡ್ರಾಯ್ಡ್ ಹಾಗೂ ಐಒಎಸ್ ಮೊಬೈಲ್ ಆಪ್‍ಗಳನ್ನು ಬಿಡುಗಡೆ ಮಾಡುವುದರ ಜೊತೆಗೆ, ವಿತರಣಾ ವ್ಯಾಪ್ತಿಯನ್ನು ವಿಸ್ತರಿಸಿ, ವೃತ್ತಿಪರ ಲಾಜಿಸ್ಟಿಕ್ಸ್ ಸಂಸ್ಥೆಗಳ ಸಹಯೋಗದಲ್ಲಿ ತ್ವರಿತ ಹಾಗೂ ಒಂದೇ ದಿನದಲ್ಲಿ ವಿತರಣಾ ವ್ಯವಸ್ಥೆಯನ್ನು ಜಾರಿಗೊಳಿಸುವ ಯೋಜನೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News