ಬೆಂಗಳೂರು : ಯುಎಪಿಎ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರು ಓರ್ವ ರಾಷ್ಟ್ರೀಯವಾದಿ, ದೇಶಭಕ್ತ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಉಮರ್ ಖಾಲಿದ್ ಅವರ ಕುರಿತ ಸಾಕ್ಷ್ಮಚಿತ್ರ ಪ್ರದರ್ಶನಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉದ್ದೇಶ ಪೂರಕವಾಗಿಯೇ ವಿರೋಧ ವ್ಯಕ್ತಪಡಿಸಿದೆ. ಆದರೆ, ಉಮರ್ ಖಾಲಿದ್ ಒಬ್ಬ ರಾಷ್ಟ್ರೀಯವಾದಿ, ರಾಷ್ಟ್ರಭಕ್ತ. ಅವರ ಬಗ್ಗೆ ಮಾತನಾಡಲು ಎಬಿವಿಪಿಗೆ ಯಾವುದೇ ಹಕ್ಕು ಅಥವಾ ನೈತಿಕತೆಯಿಲ್ಲ ಎಂದು ಟೀಕಿಸಿದರು.

ಭಾರತ ದೇಶದ ಮೊಟ್ಟ ಮೊದಲ ಭಯೋತ್ಪಾದಕ ಮತ್ತು ದೇಶದ್ರೋಹಿ ಎಂದರೆ ಅದು ನಾಥೂರಾಮ್ ಗೋಡ್ಸೆ ಮಾತ್ರ. ಈತನನ್ನು ಆರಾಧಿಸುವವರು, ಪೂಜಿಸುವವರಿಗೆ ಉಮರ್ ಖಾಲಿದ್ ಬಗ್ಗೆ ವಿಮರ್ಶೆ ಮಾಡಲು ಯಾವ ಅರ್ಹತೆಯಿದೆ? ಎಂದು ಹರಿಪ್ರಸಾದ್ ಕೇಳಿದರು.

ಏನಿದು ವಿವಾದ?: ರಾಜಕೀಯ ಕೈದಿಗಳ ದಿನವಾದ ಸೆ.13 ಹಾಗೂ ಉಮರ್ ಖಾಲಿದ್ ಬಂಧನದ ಆರನೇ ವರ್ಷದ ಅಂಗವಾಗಿ, ಲಲಿತ್ ವಚಾನಿ ನಿರ್ದೇಶನದ ‘ಪ್ರಿಸನರ್ ನಂ. 626710 ಈಸ್ ಪ್ರೆಸೆಂಟ್’ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಕಾನೂನು ಮತ್ತು ಸಮಾಜ ಸಮಿತಿ ನಿರ್ಧರಿಸಿತ್ತು. ಆದರೆ, ಈ ಪ್ರದರ್ಶನವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿತ್ತು. ಈ ಕುರಿತು ಪರ-ವಿರೋಧ ಚರ್ಚೆಗಳು ನಡೆದಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor