×
Ad

ಕೆಪಿಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ : ಅಭ್ಯರ್ಥಿಗಳಿಂದ ದೂರು

Update: 2025-05-05 22:09 IST

ಬೆಂಗಳೂರು : ಗೆಜೆಟೆಡ್‌ ಪ್ರೊಬೆಷನರಿ ಗ್ರೂಪ್  ʼಎʼ ಮತ್ತು ಗ್ರೂಪ್ ʼಬಿʼ ವೃಂದದ 384 ಹುದ್ದೆಗಳ ನೇಮಕಾತಿಗಾಗಿ ನಡೆದ ಮುಖ್ಯ ಪರೀಕ್ಷೆಯ ಸಾಮಾನ್ಯ ಅಧ್ಯಯನ-1 ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದಾಗಿ ಆರೋಪಿಸಿ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್ಸಿ) ಸೋಮವಾರ ದೂರು ನೀಡಿದ್ದಾರೆ.

ಬೆಂಗಳೂರಿನ ಕಸ್ತೂರಬಾ ನಗರದ ಬಿಬಿಎಂಪಿ ಸಂಯೋಜಿತ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಪ್ರಶ್ನೆಪತ್ರಿಕೆ ಸೋರಿಕೆಯಾಗಿವೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಪ್ರಶ್ನೆಪತ್ರಿಕೆಯ ಬಂಡಲ್ ಮೇಲ್ಬಾಗದಲ್ಲಿ ಮಾತ್ರ ಮುಚ್ಚಿದ್ದು, ಒಳ ಭಾಗದಲ್ಲಿ (ಎರಡನೇ ಶೀಲ್ಡ್) ತೆರೆದಿತ್ತು. ಈ ಕುರಿತು ಪರೀಕ್ಷಾ ಮೇಲ್ವಿಚಾರಕರು, ಅಲ್ಲಿನ ಪ್ರಾಂಶುಪಾಲರನ್ನು ಪ್ರಶ್ನಿಸಿದಾಗ, ಅದೇ ರೀತಿಯೇ ಕಳಹಿಸಿರುವುದಾಗಿ ಕೆಪಿಎಸ್‌ಸಿ ಹೇಳಿದೆ ಎಂದು ಉತ್ತರಿಸಿದ್ದರು. ಪರೀಕ್ಷೆಯ ನಂತರ ಕೇಂದ್ರಕ್ಕೆ ಬಂದ ಅಧಿಕಾರಿಗಳು, ಪ್ರಶ್ನೆ ಮಾಡಿದ ಅಭ್ಯರ್ಥಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ನಿಷೇಧವಿದ್ದರೂ ಘಟನೆಯನ್ನು ಚಿತ್ರೀಕರಿಸಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News