ಸಿಎಂ ಅನುಮತಿಸಿದರೆ ಡಾ. ಎಚ್.ಸಿ. ಮಹದೇವಪ್ಪ ಅದೇ ಮನೆಯಲ್ಲಿ ಇರಲಿ: ಸಚಿವ ಭೈರತಿ ಸುರೇಶ್
"ಡಾ.ಎಚ್.ಸಿ.ಮಹದೇವಪ್ಪ ಮತ್ತು ನನ್ನ ನಡುವೆ ಯಾವುದೇ ಗೊಂದಲವಿಲ್ಲ"
ಬೈರತಿ ಸುರೇಶ್ / ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತು ನನ್ನ ನಡುವೆ ಯಾವುದೇ ಗೊಂದಲವಿಲ್ಲ. ಸರಕಾರದ ವಸತಿ ಗೃಹದ ಹಂಚಿಕೆ ವಿಚಾರದಲ್ಲಿ ತಪ್ಪು ಮಾಹಿತಿ ಹೇಗೆ ಹೋಗಿದೆಯೋ ಗೊತ್ತಿಲ್ಲ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮಹದೇವಪ್ಪ ವಾಸವಿದ್ದ ಕ್ರೆಸೆಂಟ್ ರಸ್ತೆಯ ಸಂಖ್ಯೆ-2ರ ಮನೆಯನ್ನು ಸಿಎಂ ಡಿ.ಕೆ.ಶಿವಕುಮಾರ್ ನನಗೆ ಹಂಚಿಕೆ ಮಾಡಿದ್ದರು. ಅದರಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನವೀಕರಣ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಈ ನವೀಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಮತ್ತು ಮನೆ ಖಾಲಿ ಮಾಡುವಂತೆ ನಾನು ಡಾ.ಮಹದೇವಪ್ಪರಿಗೆ ಯಾವುದೇ ಒತ್ತಡವನ್ನೂ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವರಿಗೆ ಸರಕಾರಿ ಮನೆಗಳನ್ನು ಹಂಚಿಕೆ ಮಾಡುವ ವಿವೇಚನೆ ಸಿಎಂ ಅವರದ್ದು. ನನಗೆ ಮನೆ ಬೇಕು ಎಂದು ಕೇಳಿದಾಗ ಸ್ವತಃ ಸಿಎಂ ಅವರೇನನಗೆ ಕ್ರೆಸೆಂಟ್ ರಸ್ತೆಯಲ್ಲಿ ಖಾಲಿ ಇದ್ದ ಈ ಮನೆ ನೀಡಿದ್ದಾರೆ. ತಾವು ವಾಸವಿದ್ದ ಮನೆಯನ್ನು ಮಹದೇವಪ್ಪ ಸಚಿವ ಸ್ಥಾನದಿಂದ ನಿರ್ಗಮಿಸಿದ ನಂತರ ಕಳೆದ ತಿಂಗಳ 15ರಂದು ಮನೆ ಖಾಲಿ ಮಾಡಿರುವುದಾಗಿ ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿಗೆ ಪತ್ರ ಮುಖೇನ ತಿಳಿಸಿದ್ದಾರೆ. ಹೀಗಾಗಿ ಖಾಲಿ ಇದ್ದ ಮನೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನವೀಕರಣ ಆರಂಭಿಸಿದ್ದಾರೆ ಎಂದು ಹೇಳಿದರು.
ನನ್ನ ಸ್ವಂತ ಮನೆಯಾಗಿದ್ದರೆ ನಾನು ಒತ್ತಡ ಹೇರಬಹುದಿತ್ತು. ಆದರೆ, ಹಂಚಿಕೆ ಮಾಡಿರುವ ಮನೆಯು ಸರಕಾರಕ್ಕೆ ಸೇರಿದ್ದಾಗಿದೆ. ಸಂಬಂಧಪಟ್ಟ ಇಲಾಖೆಯವರು ಕೆಲಸ ಕಾರ್ಯಗಳನ್ನು ಆರಂಭಿಸಿದ್ದಾರೆ. ಯಾವುದೋ ತಪ್ಪು ಗ್ರಹಿಕೆಯಿಂದ ಈ ಗೊಂದಲ ಸೃಷ್ಟಿಯಾಗಿರಬಹುದು ಎಂದ ಅವರು, ಡಾ. ಎಚ್.ಸಿ. ಮಹದೇವಪ್ಪ ಅವರ ಮನೆಗೆ ನಾನು ನೂರಾರು ಬಾರಿ ಹೋಗಿದ್ದೇನೆ. ಅವರು ನನ್ನ ಸ್ನೇಹಿತರಿಗಿಂತ ಹೆಚ್ಚಾಗಿ ನನಗಿಂತ ದೊಡ್ಡವರು. ನಾನು ಅವರ ಮಗನ ಸಮಾನ. ಅವರು ನಮ್ಮ ನಾಯಕರು ಎಂದು ತಿಳಿಸಿದರು.
ಅದೇ ಮನೆಯಲ್ಲಿ ಇರಲಿ: ಸದರಿ ಮನೆಯನ್ನು ನನಗೆ ಹಂಚಿಕೆ ಮಾಡಲಾಗಿದೆ. ಸಿಎಂ ಅವರು ಅನುಮತಿ ನೀಡಿದರೆ ಮತ್ತು ಕಾನೂನಿನಲ್ಲಿ ಅವಕಾಶವಿದ್ದರೆ ಮಹದೇವಪ್ಪ ಅವರು ಇನ್ನೂ ಒಂದೂಮುಕ್ಕಾಲು ವರ್ಷ ಅದೇ ಮನೆಯಲ್ಲಿ ವಾಸವಾಗಿರಲಿ. ಇದಕ್ಕೆ ನನ್ನದೇನೂ ತಕರಾರಿಲ್ಲ ಎಂದು ಭೈರತಿ ಸುರೇಶ್ ಸ್ಪಷ್ಟಪಡಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹಿಂದುಳಿದ ಜಾತಿ ವರ್ಗದವರ ಕಾರ್ಯಕ್ರಮವನ್ನು ನಾವು ಆಯೋಜನೆ ಮಾಡಿದ್ದಲ್ಲ. ಹಿಂದುಳಿದ ಜಾತಿ ವರ್ಗಗಳ ಒಕ್ಕೂಟದಿಂದ ಆಯೋಜನೆ ಮಾಡಿದ್ದರು. ಅದಕ್ಕೆ ನನ್ನನ್ನು, ನಿಕಟಪೂರ್ವ ಸಿಎಂ ಸಿದ್ದರಾಮಯ್ಯರನ್ನೂ ಆಹ್ವಾನಿಸಿದ್ದರು. ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಅದಾಗಿತ್ತು. ಸಭೆಗೆ ಯಾರನ್ನು ಕರೆಯಬೇಕು? ಎಂಬುದನ್ನು ಒಕ್ಕೂಟದವರೇ ನಿರ್ಧರಿಸುತ್ತಾರೆ ಎಂದು ಸುರೇಶ್ ಹೇಳಿದರು.