ಆರೋಗ್ಯ ಸಚಿವ ಯು.ಟಿ. ಖಾದರ್

ಬೆಂಗಳೂರು: ಜನಸಾಮಾನ್ಯರು ಹಾಗೂ ಮುಗ್ಧ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವ ಆಹಾರ ಅಥವಾ ಔಷಧ ಕ್ಷೇತ್ರದಲ್ಲಿ ಯಾವುದೇ ಅಕ್ರಮ ಜಾಲವನ್ನು ನಮ್ಮ ಸರಕಾರ ಸಹಿಸುವುದಿಲ್ಲ. ಅಕ್ರಮ ದಂಧೆಕೋರರ ವಿರುದ್ಧ ಸದಾ ಜಾಗೃತರಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಮಂಗಳವಾರ ನಗರದ ಆರೋಗ್ಯಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ಡಾರ್ಕ್ ಸ್ಟೋರ್ ಗಳಲ್ಲಿ ಅವಧಿ ಮುಗಿದ ಮತ್ತು ತಪ್ಪಾಗಿ ಬ್ರಾಂಡ್ ಮಾಡಲಾದ ಉತ್ಪನ್ನಗಳ ವಶಪಡಿಸಿಕೊಂಡು ಕ್ರಮವಹಿಸಿರುವ ಕುರಿತು ಮಾಹಿತಿ ನೀಡಿದರು. ಇತ್ತೀಚೆಗೆ ಪತ್ರಕರ್ತರೊಬ್ಬರು ನೀಡಿದ ಸುಳಿವು ಹಾಗೂ ಪ್ರಮುಖ ದಾಖಲೆಗಳ ಆಧಾರದ ಮೇಲೆ, ಇಲಾಖೆಯ ಅಧಿಕಾರಿಗಳು ಬೆಂಗಳೂರಿನ ಪ್ರಮುಖ ಇ-ಕಾಮರ್ಸ್ ವೇದಿಕೆಗಳು, ಡಾರ್ಕ್ ಸ್ಟೋರ್ ಗಳು ಹಾಗೂ ಇತರ ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ ಎಂದರು.

ಈ ಕಾರ್ಯಾಚರಣೆಯಲ್ಲಿ ಅಮೆಝಾನ್, ಇನ್‍ಸ್ಟಾಮಾರ್ಟ್, ಸಪ್ನ ಬಝಾರ್ ಹಾಗೂ ಲಿಯೋ 7 ಎಂಟರ್ ಪ್ರೈಸಸ್ ಮುಂತಾದ ಕಡೆಗಳಲ್ಲಿ ಜಪ್ತಿಯಾದ ವಸ್ತುಗಳನ್ನು ಕಂಡಾಗ ಆಘಾತವಾಗುತ್ತದೆ. ಒಟ್ಟಾರೆಯಾಗಿ ಸುಮಾರು 3 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಅವಧಿ ಮುಗಿದ ಆಹಾರ ಪದಾರ್ಥಗಳು, ತಪ್ಪು ಲೇಬಲ್ ಇದ್ದ ಉತ್ಪನ್ನಗಳು ಹಾಗೂ ಪರವಾನಗಿ ಇಲ್ಲದೆ ಸಂಗ್ರಹಿಸಿಟ್ಟಿದ್ದ ಔಷಧಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಯು.ಟಿ. ಖಾದರ್ ಮಾಹಿತಿ ನೀಡಿದರು.

ಈ ಪ್ರಕರಣದಲ್ಲಿ ಗುರುತರ ನಿಯಮ ಉಲ್ಲಂಘಿಸಿದ ಲಿಂಗರಾಜಪುರಂನ ಲಿಯೋ 7 ಎಂಟರ್ ಪ್ರೈಸಸ್ ಹಾಗೂ ಹೊಸಕೋಟೆಯ ಇನ್‍ಸ್ಟಾಮಾರ್ಟ್ ಘಟಕಗಳನ್ನು ತಕ್ಷಣವೇ ಬಂದ್ ಮಾಡಿಸಲಾಗಿದೆ. ಒಂದು ತಿಂಗಳಿನಿಂದ ಹೋಟೆಲ್, ರೆಸ್ಟೋರೆಂಟ್, ಕ್ಲಬ್‍ಗಳು ಹಾಗೂ ಫುಡ್ ಸೆಂಟರ್‍ಗಳ ಮೇಲೆ ಸತತ ಕಣ್ಣಿಟ್ಟು, ಪಾರದರ್ಶಕತೆ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ನಮ್ಮ ಆಯುಷ್, ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ವಿಭಾಗದ ಅಧಿಕಾರಿಗಳ ತಂಡದ ಕಾರ್ಯವೈಖರಿಗೆ ಅಭಿನಂದನೆಗಳನ್ನು ತಿಳಿಸಿದರು.

ಸ್ವಲ್ಪವೂ ಪಾಪ ಪ್ರಜ್ಞೆ ಇಲ್ಲದೆ ಇಂತಹ ಅಕ್ರಮಗಳನ್ನು ಎಸಗುವ ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ. ಇವರ ಮೇಲೆ ಕ್ರಿಮಿನಲ್ ‌ಪ್ರೊಸೀಜರ್ ಕೋಡ್ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಗುರಿಪಡಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಕಾನೂನು ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುವುದು.

ಅಲ್ಲದೆ, ಇಂತಹ ಅಕ್ರಮ ನಡೆಸುವವರ ಪರವಾನಗಿ ರದ್ದುಪಡಿಸುವ ಮತ್ತು ಅವರ ಮೇಲೆ ನೇರ ಶಿಕ್ಷೆ ವಿಧಿಸಲು ಕ್ರಮ ಜರುಗಿಸುವ ಪೂರ್ಣ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಬೇಕೆಂದು ಕೇಂದ್ರ ಆರೋಗ್ಯ ಸಚಿವರನ್ನು ಶೀಘ್ರವೇ ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇನೆ ಎಂದು ಖಾದರ್ ಅವರು ಹೇಳಿದರು.

ಆನ್‍ಲೈನ್‍ನಲ್ಲಿ ಲೇಬಲ್ ಇಲ್ಲದ ಹಾಗೂ ಎಕ್ಸ್‍ಪೈರಿ(ಅವಧಿ ಮುಗಿಯುವ) ದಿನಾಂಕವೇ ಇಲ್ಲದ ಔಷಧಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇವುಗಳಿಗೆ ಕಟ್ಟುನಿಟ್ಟಿನ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ದೊಡ್ಡ ಮಟ್ಟದ ಅವಧಿ ಮೀರಿದ ವಸ್ತುಗಳ ಅಕ್ರಮ ದಾಸ್ತಾನು ಮತ್ತು ಮಾರಾಟ ನಡೆಯುತ್ತಿದೆ ಎಂದರೆ ಖಂಡಿತವಾಗಿಯೂ ಸ್ಥಳೀಯರಿಗೆ, ಸಂಘ-ಸಂಸ್ಥೆಗಳಿಗೆ ಅನುಮಾನ ಬಂದಿರುತ್ತದೆ, ಕೆಲವೊಮ್ಮೆ ಅಲ್ಪಸ್ವಲ್ಪ ಮಾಹಿತಿಯು ತಿಳಿದಿರಬಹುದು. ಇಂತಹ ಸಂದರ್ಭದಲ್ಲಿ ದಯವಿಟ್ಟು ‘ನಮಗೇಕೆ ಬೇಕು' ಎಂದು ಸುಮ್ಮನಿರಬೇಡಿ. ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಇಂತಹ ಅಕ್ರಮಗಳು ಕಂಡುಬಂದಾಗ ಇಲಾಖೆಗೆ ಸಾಥ್ ನೀಡಿ, ನಮ್ಮ ಕ್ಯೂಆರ್/ಬಾರ್ ಕೋಡ್ ಬಳಸಿ ತಕ್ಷಣವೇ ದೂರು ಸಲ್ಲಿಸಬೇಕು ಎಂದು ಖಾದರ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

‘108 ಆ್ಯಂಬುಲೆನ್ಸ್ ಸಿಬ್ಬಂದಿಗಳಿಗೂ ಸರಕಾರಕ್ಕೂ ಯಾವುದೇ ಸಬಂಧವಿಲ್ಲ. ಅದು ಸಂಪೂರ್ಣವಾಗಿ ಸಂಬಂಧಪಟ್ಟ ಏಜೆನ್ಸಿಗೆ ಬಿಟ್ಟಿದ್ದು. ಅವರಿಗೆ ಏನೇ ಸಮಸ್ಯೆ ಇದ್ದರೂ, ಅವರು ಆ ಕಂಪೆನಿ ಜೊತೆಗೆ ಮಾತನಾಡಬೇಕು. ಕಂಪೆನಿಗೆ ನಮ್ಮಿಂದ ಏನಾದರೂ ಸಮಸ್ಯೆ ಆಗಿದ್ದರೆ ನಮ್ಮ ಜೊತೆಗೆ ಮಾತಾಡಲಿ, ನಾವು ಬಗೆಹರೆಸುತ್ತೇವೆ. ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳೂ ನಮ್ಮ ಸಹೋದರರೆ, ಅವರ ಬಗ್ಗೆ ನಮಗೆ ಕಾಳಜಿ ಇದೆ. ಅದಕ್ಕಿಂತ ನಮಗೆ ರೋಗಿಗಳು ಮುಖ್ಯ. ಇವರು ಏನೇ ಇದ್ದರೂ ಕಂಪೆನಿ ಜೊತೆಗೆ ಮಾತನಾಡಿ ಬಗೆಹರಿಸಿಕೊಳ್ಳಲಿ. ಅದು ಬಿಟ್ಟು, ಇವರೇನಾದರೂ, ಪ್ರತಿಭಟನೆಗೆ ಹೋಗಿ ರೋಗಿಗೇ ಏನಾದರೂ ತೊಂದರೆಯಾದರೆ, ಸಂಬಂಧಪಟ್ಟ ಚಾಲಕರು, ನರ್ಸ್‍ಗಳು ಮತ್ತು ಕಂಪೆನಿ ಮೇಲೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ’

-ಯು.ಟಿ.ಖಾದರ್, ಆರೋಗ್ಯ ಸಚಿವ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor