×
Ad

ಲಿಂಗಾಯತ-ವೀರಶೈವ ಸಮುದಾಯಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ: ಸಚಿವ ಈಶ್ವರ್ ಖಂಡ್ರೆ

Update: 2025-10-07 22:23 IST

ಸಚಿವ ಈಶ್ವರ್ ಖಂಡ್ರೆ (Screengrab:X/@PTI_News)

ಬೆಂಗಳೂರು: ಕೆಲವರು ತಮ್ಮ ಸ್ವಾರ್ಥಕ್ಕಾಗಿ ‘ವೀರಶೈವ ಹಾಗೂ ಲಿಂಗಾಯತ’ ಸಮುದಾಯದವರನ್ನು ಬೇರೆ-ಬೇರೆ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ಈ ಎರಡೂ ಸಮುದಾಯಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾತೆ ಮಹಾದೇವಿ ಅವರು ‘ಲಿಂಗಾಯತ ಪ್ರತ್ಯೇಕ ಧರ್ಮ’ ಮಾನ್ಯತೆಗಾಗಿ ಹೊರಾಟಕ್ಕೆ ನಡೆಸಿದ್ದರು. ಆದರೆ, ಒಗ್ಗಟ್ಟಿನಲ್ಲಿ ಶಕ್ತಿ ಇದೆ ಎಂಬುದು ಅವರಿಗೆ ಗೊತ್ತಿಲ್ಲ. ನಾವು ಒಗ್ಗಟ್ಟಾಗಿದ್ದರೆ ಮಾತ್ರ ಅಸ್ತಿತ್ವವಿರಲು ಸಾಧ್ಯವಿದೆ. ನಾವೆಲ್ಲರೂ ಒಂದೇ ಎಂಬುದು ನನ್ನ ನಿಲುವು ಎಂದು ಸ್ಪಷ್ಟಪಡಿಸಿದರು.

ಲಿಂಗಾಯತ-ವೀರಶೈವ ಸಮುದಾಯದ ಸಾಮಾನ್ಯ ಜನರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ.ಯಾರು ಏನೇ ಹೇಳಿದರೂ ಯಾವುದೇ ಶಕ್ತಿ ವೀರಶೈವ ಮತ್ತು ಲಿಂಗಾಯತರನ್ನು ಬೇರೆ ಬೇರೆ ಮಾಡಲು ಸಾಧ್ಯವಿಲ್ಲ. ಒಡಕು ಎಂದರೆ ಕೆಡುಕು. ಮೊನ್ನೆ ಬಸವ ಸಂಸ್ಕೃತಿ ಅಭಿಯಾನ ನಡೆದಿದೆ. ಅಖಿಲ ಭಾರತ ವೀರಶೈವ ಮಹಾಸಭಾವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಎಂದು ಒತ್ತಡ ಹಾಕಿತ್ತು ಎಂದರು.

‘ಪ್ರತ್ಯೇಕ ಲಿಂಗಾಯತ ಧರ್ಮ’ಕ್ಕೆ ಮಾನ್ಯತೆ ನೀಡಲು ಅವಕಾಶವಿದೆ. ಕೇಂದ್ರ ಸರಕಾರವೇ ಇದನ್ನು ಮಾನ್ಯ ಮಾಡಬೇಕು. ಸಿಎಂ ಸಿದ್ದರಾಮಯ್ಯ ಯಾವ ಧರ್ಮದ ಜಾತಿಯ ವಿರೋಧಿಯೂ ಅಲ್ಲ. ಎಲ್ಲರಿಗೂ ಒಳ್ಳೆಯದನ್ನು ಮಾಡುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಒಂದು ಸಮುದಾಯ ಜಾತಿಗೆ ಸೀಮಿತವಲ್ಲ, ಕೆಲವರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡರೆ ತಪ್ಪು ಎಂದು ಅವರು ಆಕ್ಷೇಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News