ಗೋವಾ ರಾಜ್ಯಕ್ಕೆ ಹೆದರಿ ಮಹದಾಯಿಗೆ ಅನುಮತಿ ಕೊಡದ ಮೋದಿ : ಸಿದ್ದರಾಮಯ್ಯ
Update: 2025-05-04 18:46 IST
ಮುಖ್ಯಮಂತ್ರಿ ಸಿದ್ದರಾಮಯ್ಯ
ಹುಬ್ಬಳ್ಳಿ : ಗೋವಾ ರಾಜ್ಯಕ್ಕೆ ಹೆದರಿಕೊಂಡು ಮಹದಾಯಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅನುಮತಿ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೆಪಿಎಸ್‍ಸಿ ಬದಲು ಮೊದಲು ಮಹದಾಯಿ ಬಗ್ಗೆ ಮಾತನಾಡಲಿ. ಮಹದಾಯಿ ಯೋಜನೆಗೆ ಕೇಂದ್ರ ಪರಿಸರ ಇಲಾಖೆಯ ಅನುಮತಿಯನ್ನು ಯಾಕೆ ಕೊಡಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಮಹದಾಯಿ ವಿಚಾರದಲ್ಲಿ ನರೇಂದ್ರ ಮೋದಿ ಎದುರು ಪ್ರಹ್ಲಾದ್ ಜೋಶಿ ಯಾಕೆ ಮಾತನಾಡುತ್ತಿಲ್ಲ. ನಾವು ಅನೇಕ ಬಾರಿ ಕೇಂದ್ರ ಸರಕಾರದ ಬಳಿ ಹೋಗಿ ಮಹದಾಯಿ ಯೋಜನೆಗೆ ಪರಿಸರ ಇಲಾಖೆಯ ಅನುಮತಿ ಕೊಡುವಂತೆ ಮನವಿ ಮಾಡಿದ್ದೇವೆ. ಆದರೂ, ಏನೂ ಪ್ರಯೋಜನವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.