ಮಹಿಳಾ ದಿನದಂದು ಸಿಲಿಂಡರ್ ಬೆಲೆ ಹೆಚ್ಚಳ; ಇದು ʼಅಚ್ಚೇದಿನ್ʼ ಎಂದು ಟೀಕಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಕಲಬುರಗಿ : ಇಂದು ವಿಶ್ವ ಮಹಿಳಾ ದಿನವಾಗಿದೆ. ಇದೇ ದಿನದಂದು ಕೇಂದ್ರ ಸರಕಾರ ಅಡುಗೆ ಅನಿಲದ ಬೆಲೆ ಏರಿಸಿದೆ. ಇದು ʼಅಚ್ಚೇದಿನ್ʼ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಚಿತ್ತಾಪುರ ಪಟ್ಟಣದಲ್ಲಿ ನಡೆದ 1069 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಅವರು ಭಾಷಣ ಮಾಡುತ್ತಿದ್ದರು.
ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿಯ ಹಾಗೂ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ನಿಮ್ಮ ದುಡ್ಡನ್ನು ಗ್ಯಾರಂಟಿ ಯೋಜನೆಗಳ ಮೂಲಕ ನಿಮಗೆ ವಾಪಸ್ ಕೊಟ್ಟರೆ, ಬಿಜೆಪಿಯವರು ಟೀಕಿಸುತ್ತಿದ್ದಾರೆ. ಅವರಿಗೆ ಜನರ ದುಡ್ಡು ಜನರಿಗೆ ಮರುಬಳಕೆಯಾಗುವುದು ಬೇಕಾಗಿಲ್ಲ ಎಂದು ಪ್ರಿಯಾಂಕ್ ಹರಿಹಾಯ್ದರು.
ಕಲಬುರಗಿ ಜಿಲ್ಲೆಯ ರೈತರಿಗೆ ಅತಿ ಹೆಚ್ಚಿನ ಪರಿಹಾರ ನೀಡಲಾಗಿದೆ. ಕಳೆದ ಎರಡೂವರೆ ವರ್ಷದಲ್ಲಿ 15.50 ಲಕ್ಷ ರೈತರಿಗೆ ಒಟ್ಟು 2590 ಕೋಟಿ ಅನುದಾನವನ್ನು ಪರಿಹಾರದ ರೂಪದಲ್ಲಿ ನೀಡಲಾಗಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ನಿಮ್ಮ ಸೇವೆ ಮಾಡುತ್ತಿದ್ದೇನೆ. ನೀವು ನನಗೆ ಹೆಚ್ಚಿನ ಆಶೀರ್ವಾದ ಮಾಡಬೇಕು. ನನಗೆ ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೇರೇಪಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದ ಮುಖ್ಯಮಂತ್ರಿ ಹೊರತುಪಡಿಸಿದರೆ ನಾನೇ ನಂತರದ ಟಾರ್ಗೆಟ್ ಆಗಿದ್ದೇನೆ ಎಂದು ಕೆಲವರು ಹೇಳುತ್ತಾರೆ. ಚಿತ್ತಾಪುರದ ಜನರ ಆಶೀರ್ವಾದ ಇರುವವರೆಗೆ ನನಗೆ ಏನು ಆಗುವುದಿಲ್ಲ ಎಂದರು.
ವೇದಿಕೆ ಮೇಲೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿದಂತೆ ಹಲವರಿದ್ದರು.