ಅಮೆರಿಕ ಹಣದಲ್ಲಿ ಜಿರಳೆ ಪಾರ್ಟಿ ಆರಂಭಿಸಲಾಗಿದೆ : ಆರ್.ಅಶೋಕ್ ಆರೋಪ
ಬೆಂಗಳೂರು : ಅಮೆರಿಕ ದೇಶದಿಂದ ಹಣ ಪಡೆದು ದೇಶದಲ್ಲಿ ಜಿರಳೆ ಪಾರ್ಟಿ(ಸಿಜೆಪಿ) ಆರಂಭಿಸಲಾಗಿದೆ. ಇದರ ಮೂಲಕ ಕೇಂದ್ರ ಸರಕಾರದ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಬುಧವಾರ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ ವಿರುದ್ಧ ರಾಜಕೀಯ ಪ್ರತಿಭಟನೆ ನಡೆಯುತ್ತಿದೆ. ನೀಟ್ ಪರೀಕ್ಷೆ ನೆಪದಲ್ಲಿ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ ಹೋರಾಟ ಮಾಡಿ ವಿದ್ಯಾರ್ಥಿಗಳ ಬಗ್ಗೆ ಹುಸಿ ಕಾಳಜಿ ತೋರಿಸುತ್ತಿದೆ.ಅದರಲ್ಲೂ, ಲೋಕಸಭೆಯಲ್ಲಿ ಮಾತನಾಡಬೇಕಾದ ವಿಪಕ್ಷ ನಾಯಕ ರಾಹುಲ್ ಗಾಂಧಿ ಬೀದಿಗೆ ಹೋಗಿ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಜಿರಳೆ ಪಾರ್ಟಿಯ ಜೊತೆ ಕೈ ಜೋಡಿಸುತ್ತಾರೆ. ಆದರೆ ಬರಗಾಲ ಬಂದಿದ್ದರೂ ರೈತರ ಜೊತೆ ಕೈ ಜೋಡಿಸಿಲ್ಲ. ಅಂಡಮಾನ್‍ಗೆ ಹೋಗಿ ಪರಿಸರ ಉಳಿಸುವ ಪ್ರತಿಭಟನೆ ಮಾಡುವ ಇವರು ರೈತರ ಪರ ಮಾತಾಡಲ್ಲ. ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರಕಾರ ಘೋಷಣೆ ಮಾಡುವ ಮೊದಲು, ರಾಜ್ಯ ಸರಕಾರದಿಂದ ಬರ ಘೋಷಣೆ ಮಾಡಬೇಕಿತ್ತು ಎಂದು ಅಶೋಕ್ ವಾಗ್ದಾಳಿ ನಡೆಸಿದರು.