ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹೆಚ್ಚಿನ ಆದ್ಯತೆ : ಯತೀಂದ್ರ ಸಿದ್ದರಾಮಯ್ಯ

Update: 2026-07-23 00:17 IST

ಬೆಂಗಳೂರು : ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ತಂತ್ರಜ್ಞಾನ ಮತ್ತು ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಬುಧವಾರ ನಗರದಲ್ಲಿರುವ ತಮ್ಮ ಗೃಹ ಕಚೇರಿ ‘ಕಾವೇರಿ’ಯಲ್ಲಿ ನಡೆದ ಸ್ವಚ್ಛ ಭಾರತ ಮಿಷನ್ 2.0 ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ತಂತ್ರಜ್ಞಾನ ಮತ್ತು ಯೋಜನೆಗಳ ಸಾಧ್ಯತೆಗಳನ್ನು ವಿಸ್ತೃತವಾಗಿ ಪರಿಶೀಲಿಸಬೇಕು. ಪ್ರಸ್ತುತ ಬಿಡದಿಯಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಯೋಜನೆ ಮಾದರಿಯಲ್ಲೇ, ಮುಂದಿನ ಹಂತಗಳಲ್ಲಿ ಇತರ ದೊಡ್ಡ ನಗರಗಳಿಗೂ ಇದನ್ನು ವಿಸ್ತರಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು ಎಂದು ತಿಳಿಸಿದರು.

ರಾಜ್ಯದ ಪ್ರತಿಯೊಂದು ನಗರ ಪ್ರದೇಶದಲ್ಲೂ ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಕೈಗೊಳ್ಳಲು ದಾವಣಗೆರೆ ಮಾದರಿಯನ್ನು ಅನುಸರಿಸಿ, ಮನೆ ಮನೆಗಳಲ್ಲೇ ಶೇ.100ರಷ್ಟು ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸುವುದನ್ನು ಕಡ್ಡಾಯಗೊಳಿಸಬೇಕು. ದಾವಣಗೆರೆಯಲ್ಲಿ ಇದು ಸಾಧ್ಯವಾಗುತ್ತದೆ ಎಂದಾದರೆ, ರಾಜ್ಯದ ಇತರ ನಗರಗಳಲ್ಲಿ ಏಕೆ ಸಾಧ್ಯವಿಲ್ಲ? ಪ್ರತಿಯೊಂದು ನಗರದಲ್ಲೂ ಈ ಮಾದರಿಯನ್ನು ತಕ್ಷಣದಿಂದಲೇ ಜಾರಿಗೆ ತರಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.

ನಗರಗಳಲ್ಲಿ ವರ್ಷಗಳಿಂದ ಬಿದ್ದಿರುವ ಹಳೆಯ ತ್ಯಾಜ್ಯ ವಿಲೇವಾರಿ ಮಾಡುವುದು ಎಷ್ಟು ಮುಖ್ಯವೋ, ಪ್ರತಿದಿನ ಹೊಸದಾಗಿ ಸಂಗ್ರಹವಾಗುವ ಕಸವು ವಿಂಗಡಣೆಯಾಗದೆ ಮತ್ತೆ ಕಸದ ರಾಶಿಯಾಗಿ ಮಾರ್ಪಡಾಗದಂತೆ ತಡೆಯುವುದು ಅಷ್ಟೇ ಮುಖ್ಯ. ಇದಕ್ಕಾಗಿ ಶೇ.100ರಷ್ಟು ಮೂಲದಲ್ಲೇ ವಿಂಗಡಣೆ ಹಾಗೂ ಸಂಸ್ಕರಣಾ ಸಾಮರ್ಥ್ಯವನ್ನು ತುರ್ತಾಗಿ ಹೆಚ್ಚಿಸಬೇಕು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News