×
Ad

ಶಾಲಾ ಪಠ್ಯಕ್ರಮದಲ್ಲಿ ‘ಅಂತರ್ಜಲ' ಕುರಿತ ಪ್ರತ್ಯೇಕ ಅಧ್ಯಾಯ ಅಳವಡಿಸಲು ಕೇಂದ್ರ ಸರಕಾರಕ್ಕೆ ಪತ್ರ: ಸಚಿವ ಭೋಸರಾಜು

Update: 2026-05-22 18:54 IST

ಬೆಂಗಳೂರು: ಹವಾಮಾನ ಬದಲಾವಣೆ ಮತ್ತು ಅಂತರ್ಜಲದ ಅತಿಯಾದ ಬಳಕೆಯಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಜಲಕ್ಷಾಮವನ್ನು ತಪ್ಪಿಸಲು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಪಠ್ಯಕ್ರಮದಲ್ಲಿ ‘ಅಂತರ್ಜಲ' ಕುರಿತ ಪ್ರತ್ಯೇಕ ಅಧ್ಯಾಯ ಅಳವಡಿಸಲು ಕೋರಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.

ಶುಕ್ರವಾರ ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಸ್ತುತ NCERT 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ಜಲ ಸಂಪನ್ಮೂಲಗಳು' ಎಂಬ ಅಧ್ಯಾಯವಿದ್ದರೂ, ಅದರಲ್ಲಿ ಕೇವಲ ಮೇಲ್ಮೈ ಜಲಕ್ಕೆ ಮಾತ್ರ ಒತ್ತು ನೀಡಲಾಗಿದೆ. ಭೂಮಿಯ ಮೇಲಿರುವ ಒಟ್ಟು ದ್ರವರೂಪದ ಸಿಹಿನೀರಿನಲ್ಲಿ ಶೇ.97ರಷ್ಟು ಪಾಲು ಅಂತರ್ಜಲದ ರೂಪದಲ್ಲಿದೆ.

ದೇಶದ ಶೇ.50ರಷ್ಟು ಗೃಹಬಳಕೆ ಹಾಗೂ ಶೇ.25ರಷ್ಟು ಕೃಷಿಯು ನೀರಿಗಾಗಿ ಅಂತರ್ಜಲವನ್ನೇ ಅವಲಂಬಿಸಿದೆ. ಪ್ರತಿವರ್ಷ ನೀರಿನ ಬಳಕೆಯು ಶೇ.1ರಷ್ಟು ಹೆಚ್ಚಾಗುತ್ತಿದ್ದು, ಹವಾಮಾನ ಬದಲಾವಣೆಯಿಂದಾಗಿ ಮೇಲ್ಮೈ ಜಲದ ಲಭ್ಯತೆ ಕಡಿಮೆಯಾಗುತ್ತಿರುವುದರಿಂದ ಅಂತರ್ಜಲದ ಮೇಲಿನ ಅವಲಂಬನೆ ಇನ್ನಷ್ಟು ತೀವ್ರವಾಗಲಿದೆ. ಅಲ್ಲದೆ, ಎರಡು ದಶಕಗಳಲ್ಲಿ ಅತಿ-ಬಳಕೆಯ ಮತ್ತು ಅಪಾಯಕಾರಿ ಮಟ್ಟದಲ್ಲಿರುವ ಅಂತರ್ಜಲ ಪ್ರದೇಶಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಜೊತೆಗೆ, ಅಂತರ್ಜಲ ಕಲುಷಿತಗೊಳ್ಳುತ್ತಿರುವ ಬೆನ್ನಲ್ಲೇ ಅಂತರ್ಜಲದ ಗುಣಮಟ್ಟವೂ ನಿರಂತರವಾಗಿ ಕುಸಿಯುತ್ತಿದೆ.

ವಿಶ್ವಸಂಸ್ಥೆಯ 169 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ 53 ಗುರಿಗಳು ನೇರವಾಗಿ ಅಂತರ್ಜಲಕ್ಕೆ ಸಂಬಂಧಿಸಿದಂತಾಗಿವೆ (ವಿಶೇಷವಾಗಿ ಗುರಿ 6 ಮತ್ತು 13). ಅಮೆರಿಕದ ಶಾಲಾ ಪಠ್ಯದಲ್ಲಿಯೇ ಅಂತರ್ಜಲ, ಅದರ ಇಂಗುವಿಕೆ, ಅಂತರ್ಜಲ ಹರಿವು ಹಾಗೂ ಕಲುಷಿತಗೊಳ್ಳುವಿಕೆ ಕುರಿತು ವಿವರಿಸುವ ಪ್ರತ್ಯೇಕ ಅಧ್ಯಾಯವನ್ನು ಅಳವಡಿಸಲಾಗಿದೆ. ಇದೇ ಮಾದರಿಯಲ್ಲಿ ನಮ್ಮ ದೇಶದಲ್ಲೂ ಭವಿಷ್ಯದ ಪೀಳಿಗೆಗೆ ಅಂತರ್ಜಲ ಸಂಪನ್ಮೂಲದ ಲಭ್ಯತೆ ಹಾಗೂ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಪ್ರೌಢಶಾಲಾ ಹಂತದಲ್ಲಿಯೇ ಈ ವಿಷಯಗಳ ಸೇರ್ಪಡೆ ಅಗತ್ಯ ಎಂದು ಪತ್ರದಲ್ಲಿ ಮನವರಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪಠ್ಯದಲ್ಲಿ ಏನೇನು ಇರಬೇಕು?: ರಾಷ್ಟ್ರೀಯ ಶಿಕ್ಷಣ ನೀತಿ-2020 ಹಾಗೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಅಡಿಯಲ್ಲಿ ಎನ್‍ಸಿಇಆರ್‍ಟಿ 2027-28ನೇ ಸಾಲಿಗೆ 10ನೆ ತರಗತಿಯ ಹೊಸ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುತ್ತಿದೆ. ಈ ಹೊಸ ಪಠ್ಯದಲ್ಲಿ ಈ ಕೆಳಗಿನ ಪ್ರಮುಖ ವಿಷಯಗಳನ್ನು ಒಳಗೊಂಡ ‘ಅಂತರ್ಜಲ' ಅಧ್ಯಾಯವನ್ನು ಸೇರಿಸಲು ಎನ್‍ಸಿಇಆರ್‍ಟಿ ಜೊತೆ ವ್ಯವಹರಿಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ.

‘ಭವಿಷ್ಯದ ಜಲಕ್ಷಾಮವನ್ನು ಪರಿಣಾಮಕಾರಿಯಾಗಿ ಎದುರಿಸಲು ಕೇವಲ ಯೋಜನೆಗಳನ್ನು ರೂಪಿಸಿದರೆ ಸಾಲದು, ನಮ್ಮ ಮುಂದಿನ ಪೀಳಿಗೆಗೆ ಜಲ ಸಂರಕ್ಷಣೆಯ ನೈಜ ಮಹತ್ವವನ್ನು ಶಾಲಾ ಹಂತದಲ್ಲಿಯೇ ತಿಳಿಸಿಕೊಡಬೇಕಿದೆ. ಹವಾಮಾನ ಬದಲಾವಣೆಯಿಂದಾಗಿ ಮೇಲ್ಮೈ ಜಲಮೂಲಗಳು ಬತ್ತಿಹೋಗುತ್ತಿದ್ದು, ನಾವಿಂದು ಬಹುತೇಕ ಅಂತರ್ಜಲವನ್ನೇ ಅವಲಂಬಿಸುವಂತಾಗಿದೆ. ಈ ನಿಟ್ಟಿನಲ್ಲಿ, ಜಾಗತಿಕ ಮಾದರಿಯಲ್ಲಿ ನಮ್ಮ ದೇಶದ ಎನ್‍ಸಿಇಆರ್ಇ ಪಠ್ಯಕ್ರಮದಲ್ಲಿ ‘ಅಂತರ್ಜಲ' ಕುರಿತ ಪ್ರತ್ಯೇಕ ಅಧ್ಯಾಯವನ್ನು ಅಳವಡಿಸುವುದು ಇಂದಿನ ತುರ್ತು ಅಗತ್ಯ. ರಾಜ್ಯ ಸರಕಾರದ ಈ ಮಹತ್ವದ ಹಾಗೂ ದೂರದೃಷ್ಟಿಯ ಬೇಡಿಕೆಗೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ’

-ಎನ್.ಎಸ್.ಭೋಸರಾಜು, ಸಣ್ಣ ನೀರಾವರಿ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News