ಇನ್ನೆರಡು ದಿನದೊಳಗೆ ಖಾತೆ ಹಂಚಿಕೆ : ಸಚಿವ ಸತೀಶ್ ಜಾರಕಿಹೊಳಿ

Update: 2026-08-08 18:11 IST

ಬೆಂಗಳೂರು : ಇನ್ನೆರಡು ದಿನದೊಳಗೆ ಖಾತೆ ಹಂಚಿಕೆ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಅಥವಾ ನಾಳೆಯೊಳಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಾತೆ ಹಂಚಿಕೆ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ಸಂಪುಟದಲ್ಲಿ ಹಳಬರು ಹಾಗೂ ಆಡಳಿತದ ಬಗ್ಗೆ ಜ್ಞಾನ ಹೊಂದಿರುವವರು ಇದ್ದಾರೆ. ಹೀಗಾಗಿ ಖಾತೆ ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಂಪುಟದಿಂದ ಸಚಿವರನ್ನು ಕೈ ಬಿಡುವ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಕುರಿತು ಈಗಾಗಲೇ ಎಲ್ಲರೂ ಮಾತನಾಡಿದ್ದಾರೆ. ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿಕೆ ನೀಡಿದ್ದಾರೆ. ಅಸಮಾಧಾನಗೊಂಡಿರುವವರ ಮನೆಗೆ ಮುಖ್ಯಮಂತ್ರಿ ತೆರಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರೂ ಭೇಟಿ ನೀಡಿದ್ದಾರೆ. ಇತರ ಸಚಿವರೂ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಗೊಂದಲವನ್ನು ಸರಿಪಡಿಸುವ ಪ್ರಯತ್ನ ನಡೆದಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಬಸವರಾಜ ಹೊರಟ್ಟಿ ಅವರಿಗೆ ಬೆದರಿಕೆ ಹಾಕಿ ರಾಜೀನಾಮೆ ಕೊಡಿಸಲಾಗಿದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಹೊರಟ್ಟಿ ಅವರೇ ರಾಜೀನಾಮೆ ನೀಡಿದ್ದಾರೆ. ಅವರು ಹಿರಿಯ ರಾಜಕಾರಣಿ. ನಾನೇ ರಾಜೀನಾಮೆ ಕೊಟ್ಟಿದ್ದೇನೆ ಎಂದು ಅವರೇ ಹೇಳಿದ್ದಾರೆ. ನಾನೂ ಕೂಡ ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದಕ್ಕೆ ಬೇರೆ ಅರ್ಥ ನೀಡುವ ಅಗತ್ಯವಿಲ್ಲ. ಈ ವಿಚಾರ ಈಗಾಗಲೇ ಮುಗಿದಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News