×
Ad

ವೈಯುಕ್ತಿಕ ಮಾಹಿತಿ ಸೋರಿಕೆ, ಕೊಲೆ ಬೆದರಿಕೆ ; ದೂರು ದಾಖಲಿಸಿದ ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮುಹಮ್ಮದ್‌ ಝುಬೈರ್

Update: 2025-05-13 09:03 IST

PC: @zoo_bear/X

ಬೆಂಗಳೂರು : ತಮ್ಮ ವಾಸದ ವಿಳಾಸ, ಫೋನ್ ನಂಬರ್ ಮತ್ತು ಇತರ ವೈಯಕ್ತಿಕ ವಿವರಗಳನ್ನು ಆನ್‍ ಲೈನ್‍ನಲ್ಲಿ ಬಹಿರಂಗಪಡಿಸಿದ ಸಾಮಾಜಿಕ ಜಾಲತಾಣ ಬಳಕೆದಾರರ ವಿರುದ್ಧ ತಕ್ಷಣ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮತ್ತು ಫ್ಯಾಕ್ಟ್ ಚೆಕ್ಕರ್ ಮುಹಮ್ಮದ್‌ ಝುಬೈರ್ ಅವರು ದೂರು ದಾಖಲಿಸಿದ್ದಾರೆ. ಕೊಲೆ ಬೆದರಿಕೆ, ಗುಂಪು ಹಿಂಸೆಯನ್ನು ಪ್ರಚೋದಿಸುವುದು ಮತ್ತು ಕೋಮು ಆಧಾರದಲ್ಲಿ ತಮ್ಮನ್ನು ಗುರಿ ಮಾಡಿರುವ ಬಗ್ಗೆಯೂ ದೂರಿನಲ್ಲಿ ವಿವರಿಸಲಾಗಿದೆ.

@Cyber-hunts ಹೆಸರಿನ ಹ್ಯಾಂಡಲ್‍ ನಿಂದ ಮೇ 12 ರಂದು ಮಧ್ಯಾಹ್ನ 12.27ಕ್ಕೆ ಮಾಡಿರುವ ಟ್ವೀಟ್‍ನಲ್ಲಿ ತಮ್ಮ ಮನೆಗೆ ಹಂದಿಮಾಂಸವನ್ನು ವಿತರಿಸುವಂತೆ ಸೂಚಿಸಲಾಗಿದೆ. ಇದು ಧರ್ಮವನ್ನು ಗುರುತಿಸುವುದಕ್ಕೆ ಕುಮ್ಮಕ್ಕು ನೀಡುವ ಪ್ರಯತ್ನ. ಕೆಲ ಹೊತ್ತಿನ ಬಳಿಕ ಈ ಟ್ವೀಟ್ ಡಿಲೀಟ್ ಮಾಡಲಾಗಿದೆ ಎಂದು ಸುಳ್ಳು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ಪತ್ತೆ ಮಾಡಿ ಬಹಿರಂಗಗೊಳಿಸುವಲ್ಲಿ ಹೆಸರು ಮಾಡಿರುವ ಫ್ಯಾಕ್ಟ್ ಚೆಕರ್ ಝುಬೈರ್ ಆಪಾದಿಸಿದ್ದಾರೆ. ಇದರ ಸ್ಕ್ರೀನ್‍ ಶಾಟ್ ಸಹಿತ ಬೆಂಗಳೂರು ಪೂರ್ವ ಡಿಸಿಪಿಗೆ ದೂರು ಸಲ್ಲಿಸಲಾಗಿದೆ.

@Amir Lakadka ಮತ್ತು @Nation First123 ಹೆಸರಿನ ಎರಡು ಖಾತೆಗಳನ್ನೂ ಝುಬೈರ್ ಹೆಸರಿಸಿದ್ದು, ತಮ್ಮ ಪಾನ್‍ ಕಾರ್ಡ್ ನಂಬರ್, ಫೋನ್‍ ನಂಬರ್ ಮತ್ತು ವಿಳಾಸವನ್ನು ಬಹಿರಂಗಪಡಿಸಿದ್ದಾಗಿ ದೂರಲಾಗಿದೆ. ಈ ಮೂಲಕ ತಮ್ಮ ವೈಯಕ್ತಿಕ ಸುರಕ್ಷೆಗೆ ಅಪಾಯ ಒಡ್ಡಿದ್ದಾಗಿ ವಿವರಿಸಿದ್ದಾರೆ. ಈ ಎರಡೂ ಟ್ವೀಟ್‍ಗಳ ಸ್ಕ್ರೀನ್‍ ಶಾಟ್‍ಗಳನ್ನು ಕೂಡಾ ಲಗತ್ತಿಸಲಾಗಿದೆ. ಇದನ್ನು ಡಿಲೀಟ್ ಮಾಡುವ ಮುನ್ನ ಬಳಕೆದಾರರು ಈ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಪದೇ ಪದೇ ಸೂಚಿಸಲಾಗಿದ್ದು, ಇದು ಉದ್ದೇಶಪೂರ್ವಕ ಮತ್ತು ಸಂಯೋಜಿತ ಕೃತ್ಯ ಎಂದು ಹೇಳಿದ್ದಾರೆ.

ಎರಡನೇ ಬಾರಿಗೆ ಇಂಥ ಘಟನೆ ನಡೆಯುತ್ತಿದೆ. 2023ರ ಏಪ್ರಿಲ್‍ನಲ್ಲೂ ಇಂಥ ಕೃತ್ಯ ನಡೆದಿದ್ದು, ಈ ಬಗ್ಗೆ ದೂರು ನೀಡಲಾಗಿತ್ತು. ಆದರೆ ಪೊಲೀಸರು ಸಿ ರಿಪೋರ್ಟ್ ಸಲ್ಲಿಸಿರುವುದು ನ್ಯಾಯಸಮ್ಮತವಲ್ಲ ಎಂದು ಪ್ರತಿಪಾದಿಸಿದ್ದಾರೆ.

ತಮ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿರುವುದು ತಮ್ಮ ವಿರುದ್ಧ ಹಿಂಸೆಯನ್ನು ಪ್ರಚೋದಿಸುವ ವ್ಯವಸ್ಥಿತ ಪಿತೂರಿ ಎಂದು ಅವರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News