2ನೇ ದಿನದ ಕಲಾಪಕ್ಕೆ ಹಾಜರಾದ ಸಿದ್ದರಾಮಯ್ಯ; ಕೊನೆಯ ಸಾಲಿನ ಆಸನದಲ್ಲಿ ಕುಳಿತ ಮಾಜಿ ಸಿಎಂ!

Update: 2026-08-14 17:46 IST

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ರಚನೆ ಬಳಿಕ ಆರಂಭವಾದ ಮೊದಲ ದಿನದ ಅಧಿವೇಶನ ಕಲಾಪದಿಂದ ದೂರ ಉಳಿದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ಸದನದ ಕಲಾಪಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆದರು.

ಶುಕ್ರವಾರ ವಿಧಾನಸಭೆಯ ಎರಡನೇ ದಿನದ ಕಲಾಪಕ್ಕೆ ಹಾಜರಾದ ಸಿದ್ದರಾಮಯ್ಯ, ಆಡಳಿತ ಪಕ್ಷದ ಆಸನದ ಕೊನೆಯ ಸಾಲಿನಲ್ಲಿ ಆಸೀನರಾದರು. ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ವೇಳೆಯೂ ಅವರು ಹಿಂದಿನ ಸಾಲಿನ ಅದೇ ಆಸನದಲ್ಲಿ ಕುಳಿತಿದ್ದರು. ಇದೀಗ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಹಿಂದಿನ ಸಾಲಿನಲ್ಲಿ ಆಸೀನರಾಗಿದ್ದರು.

ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ವಿಧಾನಸಭೆಯ ಸಭಾನಾಯಕನಾಗಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಪ್ರತಿಪಕ್ಷ ನಾಯಕರಾಗಿದ್ದಾಗಲೂ ಮುಂದೆ ಕೂರುತ್ತಿದ್ದರು. ಇದೀಗ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಆಡಳಿತ ಪಕ್ಷದ ಕೊನೆಯ ಸಾಲಿನಲ್ಲಿ ಸಾಮಾನ್ಯ ಶಾಸಕರಾಗಿ ಕೂತಿದ್ದು ವಿಶೇಷವಾಗಿತ್ತು.

ಮೊದಲ ದಿನದ ಅಧಿವೇಶನ ಕಲಾಪಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು ಹಾಜರಿ ಆಡಳಿತ ಪಕ್ಷ ಸೇರಿದಂತೆ ರಾಜಕೀಯ ವಲಯದಲ್ಲಿ ವಿವಿಧ ರೀತಿಯ ಚರ್ಚೆಗಳಿಗೆ ಕಾರಣವಾಗಿತ್ತು. ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟ ವಿಸ್ತರಣೆಯಿಂದ ಅಸಮಾಧಾನಗೊಂಡಿರುವ ಸಿದ್ದರಾಮಯ್ಯ ಸದನಕ್ಕೆ ಸಂಪೂರ್ಣ ಗೈರು ಹಾಜರಾಗಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು.

ಮೊದಲ ದಿನದ ಕಲಾಪಕ್ಕೆ ಸಿದ್ದರಾಮಯ್ಯ ಗೈರು ಹಾಜರಾಗಿದ್ದು, ಈ ಚರ್ಚೆಗೆ ಇನ್ನಷ್ಟು ಪುಷ್ಠಿ ನೀಡುವಂತೆಯೇ ಇತ್ತು. ಆದರೆ, ಎರಡನೇ ದಿನವಾದ ಇಂದು ಸದನಕ್ಕೆ ಹಾಜರಾಗುವ ಮೂಲಕ ಗೊಂದಲಕ್ಕೆ ಇತಿಶ್ರೀ ಹಾಡಿದರು. ಸದಸ್ಯ ಅಶೋಕ್ ಪಟ್ಟಣ್ ಪಕ್ಕದ ಆಸನದಲ್ಲಿ ಕೂತಿದ್ದ ಸಿದ್ದರಾಮಯ್ಯನವರು ಸದನಕ್ಕೆ ಆಗಮಿಸುತ್ತಿದ್ದ ಸಚಿವರು, ಶಾಸಕರು ಅವರ ಬಳಿ ಬಂದು ಕುಶಲೋಪರಿ ವಿಚಾರಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News