ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಆರೋಪ; ಬಿಜೆಪಿ ಶಾಸಕ ಬಿ.ಸುರೇಶ್‌ಗೌಡ ಪುತ್ರಿ ಐಶ್ವರ್ಯ ವಿರುದ್ಧ ಪ್ರಕರಣ ದಾಖಲು

Update: 2026-08-14 17:17 IST

ಶಾಸಕ ಬಿ.ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ

ಮಂಡ್ಯ : ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪಾಂಡವಪುರ ತಾಲೂಕಿನ ಆರತಿ ಉಕ್ಕಡದ ಮಾರಮ್ಮನ ದೇವಸ್ಥಾನದಲ್ಲಿ ಕರ್ತವ್ಯ ನಿರತ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಬಿಜೆಪಿ ಶಾಸಕರೊಬ್ಬರ ಪುತ್ರಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ತುಮಕೂರಿನ ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್‌ಗೌಡ ಅವರ ಪುತ್ರಿ ಹಾಗೂ ಡಿವೈಎಸ್ಪಿ ಗೌತಮ್ ಅವರ ಪತ್ನಿ ಐಶ್ವರ್ಯ ಅವರ ವಿರುದ್ಧ ಪಾಂಡವಪುರ ತಾಲೂಕು ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ ಸೆಕ್ಷನ್‌ 132, 115(2), 352 ಮತ್ತು 351(2) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಆ.12ರಂದು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಆರತಿ ಉಕ್ಕಡದಲ್ಲಿ ವಿಶೇಷ ಪೂಜೆ ಸಲ್ಲಿಸಲು ಐಶ್ವರ್ಯ ಅವರು ಇತರರೊಡನೆ ಆಗಮಿಸಿದ್ದಾಗ ದೇವಸ್ಥಾನದ ಭದ್ರತೆಗೆ ನಿಯೋಜನೆಗೊಂಡಿದ್ದ ಮಂಡ್ಯ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಸವಿತಾ ಬಿ. ಪಾಟೀಲ್ ಅವರ ಮೇಲೆ ಐಶ್ವರ್ಯ ಅವರು ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಂದು ಸಂಜೆ ಸುಮಾರು 4:30ರ ಸಮಯದಲ್ಲಿ ಐಶ್ವರ್ಯಾ ಅವರು ನಿಯಮ ಉಲ್ಲಂಘಿಸಿ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲು ಯತ್ನಿಸಿದಾಗ ಅವರನ್ನು ತಡೆದ ಸವಿತಾ ಬಿ.ಪಾಟೀಲ್ ಅವರನ್ನು ಐಶ್ವರ್ಯ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಕಾಪಾಳ ಮೋಕ್ಷ ಮಾಡಿ ಹಲ್ಲೆ ನಡೆಸಿದರು ಎಂದು ಸವಿತಾ ಬಿ.ಪಾಟೀಲ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News