ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ : ‘ಕರ್ತವ್ಯ ಲೋಪ’ ಐವರು ಸಿಬ್ಬಂದಿಗಳ ಅಮಾನತು
ಬೆಂಗಳೂರು : ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಯನ್ನು ಕಲ್ಪಿಸುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ನಡೆಯುತ್ತಿದ್ದು, ನಿಗಧಿತ ಸಮಯಕ್ಕೆ ಸಮೀಕ್ಷೆಯನ್ನು ನಡೆಸದೆ ಯಾವುದೇ ರೀತಿ ಪ್ರಗತಿ ಸಾಧಿಸದ ಐವರ ನೌಕರರನ್ನು ಕರ್ತವ್ಯ ಲೋಪದಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಅಮಾನತುಗೊಳಿಸಿ, ಆದೇಶಿಸಿದೆ.
ಜಯನಗರದ ಹಿರಿಯ ಆರೋಗ್ಯ ಪರಿವೀಕ್ಷಕ ಶ್ರೀಜೇಶ್, ಮಹಾಲಕ್ಷ್ಮೀಪುರದ ಕಿರಿಯ ಆರೋಗ್ಯ ಪರಿವೀಕ್ಷಕ ವಿಜಯ್ ಕುಮಾರ್, ಅಂಜನಾಪುರದ ಕಂದಾಯ ವಸೂಲಿಗಾರ ಶಿವರಾಜ್ ಎಚ್.ಸಿ. ಹಾಗೂ ನಾಲ್ಕನೇ ದರ್ಜೆ ಸಹಾಯಕ ಶಂಕರ್, ಸಿ.ವಿ.ರಾಮನ್‍ನಗರದ ಕಂದಾಯ ವಸೂಲಿಗಾರ ಮಹದೇವ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ, ಅಮಾನತುಗೊಳಿಸಿದೆ.
ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆಯನ್ನು ನಡೆಸಲು ಗಣತಿದಾರರು ಪ್ರತಿದಿನವೂ ತಪ್ಪದೇ ಮೋಬೈಲ್ ಆ್ಯಪ್ ನಲ್ಲಿ ಲಾಗಿನ್ ಆಗಬೇಕು. ನಂತರ ಕಡ್ಡಾಯವಾಗಿ ತಮಗೆ ನಿಗಧಿಪಡಿಸಲಾದ ಸಮೀಕ್ಷಾ ಬ್ಲಾಕ್‍ನಲ್ಲಿರುವ ಎಲ್ಲ ಮನೆಗಳಿಗೂ ತಪ್ಪದೇ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಬೇಕು. ಹೀಗಾಗಿ ನಿಗಧಿತ ವೇಳೆಯಲ್ಲಿ ಸಮೀಕ್ಷಾ ಕಾರ್ಯವನ್ನು ನಡೆಸದ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.