Kushalnagar | ಉರುಳಿಗೆ ಸಿಲುಕಿ ಹುಲಿ ಸಾವು
ಮಡಿಕೇರಿ : ಉರುಳಿಗೆ ಸಿಲುಕಿ 5 ವರ್ಷದ ಗಂಡು ಹುಲಿಯೊಂದು ಮೃತಪಟ್ಟಿರುವ ಘಟನೆ ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯಲ್ಲಿ ನಡೆದಿದೆ.
ಅರಣ್ಯದಿಂದ ಬಂದು ಚೆಟ್ಟಳ್ಳಿ ಗ್ರಾಮವನ್ನು ಪ್ರವೇಶಿಸಿದ್ದ ಹುಲಿ ಉರುಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಡಿಎಫ್‍ಓ ಅಭಿಷೇಕ್, ಎಸಿಎಫ್ ಎ.ಎ.ಗೋಪಾಲ್, ವಲಯ ಅರಣ್ಯಾಧಿಕಾರಿ ರಕ್ಷಿತ್, ವೈದ್ಯಾಧಿಕಾರಿಗಳಾದ ಡಾ.ಮುಜೀಬ್, ಡಾ.ಸಂಜೀವ್ ಆರ್.ಸಿಂಧೆ, ಮೀನುಕೊಲ್ಲಿ ಉಪವಲಯದ ಉಪವಲಯಾಧಿಕಾರಿ ಸಚಿನ್ ಲಿಂಬಾಳ್‍ಕರ್, ಗಸ್ತುವನ ಪಾಲಕ ನಾಗರಾಜು, ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಮತ್ತು ಆರ್‌ಆರ್‌ಟಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚೆಟ್ಟಳ್ಳಿ ಪೊಲೀಸ್ ಠಾಣಾ ಎಎಸ್‍ಐ ದಿನೇಶ್ ಮತ್ತು ಪೊಲೀಸ್ ಶ್ವಾನ ದಳ ತಂಡ ಕೂಡ ಸ್ಥಳ ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಹುಲಿ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾನೂನು ಕ್ರಮ
ಅರಣ್ಯದ ಎಲ್ಲಾ ವಲಯಗಳಲ್ಲಿ ಸಿಬ್ಬಂದಿಗಳ ತಂಡಗಳನ್ನು ರಚಿಸಿ ಕಾಡಂಚಿನ ಗ್ರಾಮಗಳಲ್ಲಿ ಉರುಳಿನ ಶೋಧವನ್ನು ನಿಯಮಿತವಾಗಿ ನಡೆಸಬೇಕು ಮತ್ತು ಹುಲಿ ಸಾವಿಗೆ ಕಾರಣವಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಬೆಳಗಾವಿಯಲ್ಲಿ ಸೂಚಿಸಿದ್ದಾರೆ.