ʼಮಾಹಿತಿ ಹಕ್ಕು ಕಾಯ್ದೆʼ ಪಠ್ಯವಾಗಿ ರೂಪಿಸುವಂತೆ ರಾಜ್ಯ ಮಾಹಿತಿ ಆಯೋಗ ಸರಕಾರಕ್ಕೆ ಶಿಫಾರಸು
ಬೆಂಗಳೂರು : ಮಾಹಿತಿ ಹಕ್ಕು ಕಾಯ್ದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಉದ್ದೇಶದಿಂದ ಪದವಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಪಠ್ಯವಾಗಿ ರೂಪಿಸುವಂತೆ ಕರ್ನಾಟಕ ಮಾಹಿತಿ ಆಯೋಗ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ ಅವರ ಅಧ್ಯಕ್ಷತೆಯಲ್ಲಿ ಜು.14ರಂದು ಮಾಹಿತಿ ಹಕ್ಕು ಅಧಿನಿಯಮ ಕುರಿತು ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆ ಮಾಡಬೇಕಾದ ಪ್ರಮುಖ ವಿಷಯಗಳ ಕುರಿತು ರಾಜ್ಯ ಮಾಹಿತಿ ಆಯುಕ್ತರು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಮಾಹಿತಿ ಹಕ್ಕು ಅಧಿನಿಯಮದ ಪರಿಣಾಮಕಾರಿ ಜಾರಿಗೆ ಅಗತ್ಯವಾದ ಶಿಫಾರಸುಗಳ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಪದವಿ ಹಾಗೂ ಪದವಿ ಪೂರ್ವ ಶಿಕ್ಷಣದಲ್ಲಿ ಪಠ್ಯವಾಗಿ ಅಳವಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ಅಧಿನಿಯಮದ ಬಗ್ಗೆ ಅರಿವು ಮೂಡುತ್ತದೆ. ಈ ಬಗ್ಗೆ ಪಠ್ಯ ಪರಿಷ್ಕರಣಾ ಮಂಡಳಿಗಳು ಹಾಗೂ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮಂಡಳಿಗಳಿಗೆ ಶಿಫಾರಸು ಮಾಡುವಂತೆ ಮಾಹಿತಿ ಆಯುಕ್ತರು ಕೋರಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು 20 ವರ್ಷಗಳಾಗಿದ್ದರೂ ಸರಕಾರಿ ಅಧಿಕಾರಿ ಮತ್ತು ನೌಕರರಲ್ಲಿ ಇನ್ನೂ ಅರಿವು ಮೂಡಿಸುವ ಅಗತ್ಯವಿದೆ. ಆದ್ದರಿಂದ ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳು ನೌಕರರಿಗಾಗಿ ನಡೆಸುವ ವಿವಿಧ ಪರೀಕ್ಷೆಗಳಲ್ಲಿಯೂ ಮಾಹಿತಿ ಹಕ್ಕು ಕಾಯ್ದೆಯನ್ನು ಒಂದು ವಿಷಯವನ್ನಾಗಿ ಸೇರಿಸಬೇಕು. ಪರೀಕ್ಷೆಯಲ್ಲಿ ಉತ್ತೀರ್ಣವಾದರೆ ಮಾತ್ರ ಬಡ್ತಿ, ವೇತನ ಪರಿಷ್ಕರಣೆಗೆ ಅರ್ಹತೆ ಎಂಬ ಅಧಿಸೂಚನೆ ಹೊರಡಿಸಬೇಕು ಎಂದು ಸಲಹೆ ನೀಡಿದ್ದಾರೆ.
ಸರಕಾರದ ಅಧಿಕಾರಿ, ನೌಕರರಿಗೆ ಈಗಾಗಲೇ ವಿವಿಧ ವಿಷಯಗಳಲ್ಲಿ ತರಬೇತಿ ನೀಡುತ್ತಿರುವ ರೀತಿಯಲ್ಲಿಯೇ ಮಾಹಿತಿ ಹಕ್ಕು ಅಧಿನಿಯಮದ ಬಗ್ಗೆಯೂ ತರಬೇತಿ ಅಗತ್ಯವಾಗಿದೆ. ಜಿಲ್ಲಾ ತರಬೇತಿ ಸಂಸ್ಥೆ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆ, ಬೆಂಗಳೂರಿನ ವಿತ್ತೀಯ ಕಾರ್ಯನೀತಿ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ನಡೆಯುವ ತರಬೇತಿಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯೂ ಸಹ ಒಂದು ವಿಷಯವಾಗಬೇಕು ಎಂದು ತಿಳಿಸಿದ್ದಾರೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ (ಎಆರ್) ಇಲಾಖೆಯ ವ್ಯಾಪ್ತಿಯಲ್ಲಿ ಆರ್‌ಟಿಐ ಡ್ಯಾಷ್‍ಬೋರ್ಡ್ ಇದೆ. ಆದರೆ ಅದು ಬಳಕೆಯಾಗುತ್ತಿಲ್ಲ. ಅದರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಮಾಹಿತಿ ಆಯೋಗಕ್ಕೆ ವಹಿಸಿಕೊಡಬೇಕು. ಸರಕಾರದ ಎಲ್ಲ ಸಾರ್ವಜನಿಕ ಪ್ರಾಧಿಕಾರಗಳಲ್ಲಿ ಮಾಹಿತಿ ಹಕ್ಕು ನಿಯಮಗಳ ಕುರಿತು 4(1)(ಎ) ಮತ್ತು 4(1)(ಬಿ)ಯನ್ನು ಕಡ್ಡಾಯವಾಗಿ ಅಳವಡಿಸುವಂತೆ ಹಾಗೂ ಕಾಲಕಾಲಕ್ಕೆ ಪರಿಷ್ಕರಣೆ ಮಾಡುವಂತೆ ಸುತ್ತೋಲೆ ಹೊರಡಿಸಬೇಕು ಎಂದು ಹೇಳಿದ್ದಾರೆ.
ಕರ್ನಾಟಕ ಮಾಹಿತಿ ಆಯೋಗದ ಬೆಂಗಳೂರು ಕಟ್ಟಡದಲ್ಲಿ ಮುಖ್ಯ ಆಯುಕ್ತರು ಹಾಗೂ ಆರು ಆಯುಕ್ತರಿಗೆ ಪೀಠಗಳಿವೆ. ಉಳಿದ ಎರಡು ಪೀಠಗಳು ಬಾಡಿಗೆ ಕಟ್ಟಡದಲ್ಲಿವೆ. ಪ್ರತಿ ವರ್ಷ 50 ಲಕ್ಷ ರೂ.ಗಳು ಬಾಡಿಗೆಗಾಗಿ ವ್ಯಯ ಮಾಡಲಾಗುತ್ತಿದೆ. ಈಗ ಇರುವ ಕಟ್ಟಡದಲ್ಲಿ 4ನೇ ಮಹಡಿ ಕಟ್ಟಿದರೆ ಬಾಡಿಗೆಗಾಗಿ ವ್ಯಯ ಮಾಡುವ ಹಣವನ್ನು ಉಳಿತಾಯ ಮಾಡಬಹುದಾಗಿದೆ. ಕಲಬುರಗಿ ಪೀಠವು ಅಲ್ಲಿನ ರೈಲ್ವೆ ನಿಲ್ದಾಣದ ಹಳೆಯ ಮನೆಯಲ್ಲಿದೆ. ಕರ್ನಾಟಕ ಆಡಳಿತ ನ್ಯಾಯಾಧೀಕರಣ ಪಕ್ಕದ ನಿವೇಶನವನ್ನು ಪಡೆದು ಪೀಠವನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ನ್ಯಾಯ ಪೀಠಗಳು ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲ. ಮಾಹಿತಿ ಆಯುಕ್ತರಿಗೂ ಗನ್‍ಮ್ಯಾನ್ ಸಹ ಒದಗಿಸಿಲ್ಲ. ಮುಖ್ಯ ಆಯುಕ್ತರ ಪೀಠಕ್ಕೆ ಮಾತ್ರ ಭದ್ರತೆ ಮತ್ತು ಅವರಿಗೆ ಮಾತ್ರ ಗನ್‍ಮ್ಯಾನ್ ಒದಗಿಸಲಾಗಿದೆ. ಆದ್ದರಿಂದ ನ್ಯಾಯಪೀಠಗಳಿಗೆ ಹಾಗೂ ಆಯುಕ್ತರಿಗೆ ಗನ್‍ಮ್ಯಾನ್ ಸೌಲಭ್ಯ ನೀಡಿಬೇಕು ಎಂದು ತಿಳಿಸಿದ್ದಾರೆ.