×
Ad

ನಾಳೆ ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಸಲಹಾ ಮಂಡಳಿ ಸಭೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಆತಿಥ್ಯ

Update: 2025-07-14 21:33 IST

ಬೆಂಗಳೂರು : ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ)ಯ ಹಿಂದುಳಿದ ವರ್ಗಗಳ ವಿಭಾಗದ ಸಲಹಾ ಮಂಡಳಿಯ ಸಭೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಆತಿಥ್ಯದಲ್ಲಿ ನಾಳೆ(ಜು.15) ಸಂಜೆ 6 ಗಂಟೆಗೆ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ(ಇಂದಿರಾ ಭವನ)ಯಲ್ಲಿ ನಡೆಯಲಿದೆ.

ಎರಡು ದಿನ ನಡೆಯಲಿರುವ ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಸಲಹಾ ಮಂಡಳಿಯ ಸಭೆಯಲ್ಲಿ ದೇಶದಲ್ಲಿನ ಹಿಂದುಳಿದ ವರ್ಗಗಳ ಸ್ಥಿತಿಗತಿ ಹಾಗೂ ಕೇಂದ್ರ ಸರಕಾರ ನಡೆಸಲು ಉದ್ದೇಶಿಸಿರುವ ಜಾತಿ ಜನಗಣತಿಯ ಕುರಿತು ಚರ್ಚೆಗಳು ನಡೆಯಲಿವೆ.

ಡಾ.ಅನಿಲ್ ಜೈಹಿಂದ್ ಸಂಚಾಲಕರಾಗಿರುವ ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಸಲಹಾ ಮಂಡಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿದ ಬಳಿಕ ನಡೆಯುತ್ತಿರುವ ಮೊದಲನೆ ಸಭೆ ಇದಾಗಿದೆ.

ಜು.16ರಂದು ನಗರದ ಖಾಸಗಿ ಹೊಟೇಲ್‍ನಲ್ಲಿ ಬೆಳಗ್ಗೆ 10ರಿಂದ 11 ಗಂಟೆಯ ವರೆಗೆ ಹಿಂದುಳಿದ ವರ್ಗಗಳ ವಿಭಾಗದ ಸಲಹಾ ಮಂಡಳಿಯ ಪರಿಶೀಲನಾ ಸಭೆ ನಡೆಯಲಿದೆ. ಬೆಳಗ್ಗೆ 11.15ರಿಂದ ಮಧ್ಯಾಹ್ನ 12.30ರ ವರೆಗೆ ಸಂವಿಧಾನದ ಕಲಂ 164(1)(ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಛತ್ತೀಸ್‍ಗಡ) ಹಾಗೂ ಜಾತಿ ಜನಗಣತಿಯ ಕುರಿತು ಚರ್ಚೆ ನಡೆಯಲಿದೆ.

24 ಮಂದಿ ಸದಸ್ಯರಿರುವ ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಸಲಹಾ ಮಂಡಳಿಯ ಸಭೆಯಲ್ಲಿ ಡಾ.ಅನಿಲ್ ಜೈಹಿಂದ್, ಸಲಹಾ ಮಂಡಳಿಯ ಕಾರ್ಯದರ್ಶಿ ಜಿತೇಂದ್ರ ಬಘೇಲ್, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‍ಗಡದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಮಾಜಿ ಕೇಂದ್ರ ಸಚಿವ ವಿ.ನಾರಾಯಣಸ್ವಾಮಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಸಚಿನ್ ಪೈಲಟ್, ಕಮಲೇಶ್ವರ್ ಪಟೇಲ್, ಗುರುದೀಪ್ ಸಿಂಗ್ ಸಪ್ಪಾಲ್, ಡಾ.ಎಂ.ವೀರಪ್ಪ ಮೊಯ್ಲಿ ಸೇರಿದಂತೆ ಎಲ್ಲ ಸದಸ್ಯರು ಭಾಗವಹಿಸಲಿದ್ದಾರೆ.

ಅಲ್ಲದೇ, ವಿಶೇಷ ಆಹ್ವಾನಿತರಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು, ಜಾರ್ಖಂಡ್, ದಿಲ್ಲಿ, ಆಸ್ಸಾಂ, ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಸಂಸದರು, ವಿರೋಧ ಪಕ್ಷದ ನಾಯಕರು, ಎನ್‍ಎಸ್‍ಯುಐ ಅಧ್ಯಕ್ಷ, ತೆಲಂಗಾಣ ರಾಜ್ಯದ ಸಚಿವರು ಸೇರಿದಂತೆ 31 ಮಂದಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News