ಮೇವು, ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗಬಾರದು : ಡಿಸಿಎಂ ಜಿ.ಪರಮೇಶ್ವರ್
"ಜನರ ಸಮಸ್ಯೆಗಳನ್ನುಆಲಿಸಿದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ"
ತುಮಕೂರು: ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದರು.
ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣೆ ಕುರಿತು ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಆಗಮಿಸುವ ಎಲ್ಲಾ ಅಧಿಕಾರಿಗಳು ಸ್ಥಳೀಯ ಶಾಸಕರನ್ನು ಭೇಟಿ ಮಾಡಿ, ತಮ್ಮ ಸಂಪರ್ಕ ಸಂಖ್ಯೆಯನ್ನು ನೀಡಿ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.
ರೈತರಿಗೆ ವಾರದೊಳಗೆ ಮೇವಿನ ಬೀಜ ವಿತರಿಸಬೇಕು. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ, ಅಗತ್ಯವಿರುವ ಕಡೆಗಳಲ್ಲಿ ಬೋರ್‌ವೆಲ್ ಕೊರೆಸಿ ತ್ವರಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಈ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ವಿಳಂಬ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬರ ಪರಿಸ್ಥಿತಿಯಲ್ಲಿ ನಿಯಮಗಳ ನೆಪ ಹೇಳದೆ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ತಾಲೂಕು ಮತ್ತು ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಸಭೆಗಳನ್ನು ನಿರಂತರವಾಗಿ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳಿಗೆ ನಿರ್ದೇಶನ ನೀಡಿದರು.
ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ ಅವರು, ಡೆಂಗ್ಯೂ, ಚಿಕನ್ ಗುನ್ಯಾ ಹಾಗೂ ಗಡಿಭಾಗಗಳಲ್ಲಿ ವರದಿಯಾಗಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಸಜ್ಜುಗೊಳಿಸಬೇಕು ಎಂದರು.
ಇದೇ ವೇಳೆ, ಬೆಳೆ ವಿಮೆ ಪರಿಹಾರ ಕುರಿತು ರೈತರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ವಿಮೆ ಕಂಪನಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ಜೊತೆಗೆ, ಮೋಡ ಬಿತ್ತನೆ ಕುರಿತ ವರದಿಯನ್ನೂ ಸರ್ಕಾರ ಪರಿಶೀಲಿಸುತ್ತಿದ್ದು, ಜುಲೈ 25ರಂದು ಚಿತ್ರದುರ್ಗದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಬೆಂಗಳೂರು ಕಂದಾಯ ವಿಭಾಗದ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.