ಡಿಸಿಆರ್‌ಇ ಘಟಕದ ಪೊಲೀಸ್ ಸಿಬ್ಬಂದಿಗೆ ವಾರದಲ್ಲಿ ಒಂದು ದಿನ ಕಡ್ಡಾಯ ರಜೆ
ಸಾಂದರ್ಭಿಕ ಚಿತ್ರ
ಬೆಂಗಳೂರು: ಡಿಸಿಆರ್‌ಇ (ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ) ಘಟಕದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್ (ಪಿ.ಸಿ.) ಹಾಗೂ ಹೆಡ್ ಕಾನ್ಸ್‌ಟೇಬಲ್ (ಹೆಚ್.ಸಿ.) ಸಿಬ್ಬಂದಿಗೆ ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ರಜೆ ನೀಡುವಂತೆ ಪೊಲೀಸ್ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಪೊಲೀಸ್ ಪ್ರಧಾನ ಕಚೇರಿಯ 2021ರ ಆ.3ರ ಸುತ್ತೋಲೆಯನ್ನು ಉಲ್ಲೇಖಿಸಿ ಹೊರಡಿಸಿರುವ ಆದೇಶದಲ್ಲಿ, ಎಲ್ಲಾ ಠಾಣಾಧಿಕಾರಿಗಳು ಪಾಳಿ ವ್ಯವಸ್ಥೆಯ ಮೂಲಕ ಪ್ರತಿಯೊಬ್ಬ ಸಿಬ್ಬಂದಿಗೂ ವಾರಕ್ಕೆ ಒಂದು ದಿನ ಕಡ್ಡಾಯ ರಜೆ ನೀಡುವಂತೆ ಸೂಚಿಸಲಾಗಿದೆ.
ಡಿಸಿಆರ್‌ಇ ಕಂಟ್ರೋಲ್ ರೂಮ್‌ನಿಂದ ಜು.16ರಂದು ಹೊರಬಿದ್ದ ಸಂದೇಶದ ಮೂಲಕ ಈ ಆದೇಶವನ್ನು ಸಂಬಂಧಿತ ಠಾಣೆಗಳಿಗೆ ರವಾನಿಸಲಾಗಿದೆ. ನಿರಂತರ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಅಗತ್ಯ ವಿಶ್ರಾಂತಿ ದೊರೆಯುವಂತೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ವಾರದ ರಜೆ ಜಾರಿಯಿಂದ ಪೊಲೀಸ್ ಸಿಬ್ಬಂದಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸುಧಾರಿಸುವುದರ ಜೊತೆಗೆ ಕರ್ತವ್ಯ ನಿರ್ವಹಣೆಯ ಕಾರ್ಯಕ್ಷಮತೆಯೂ ಹೆಚ್ಚುವ ನಿರೀಕ್ಷೆ ಇದೆ.
ಈ ಆದೇಶಕ್ಕೆ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಉಮೇಶ್ ಕುಮಾರ್, ಐಪಿಎಸ್ ಅವರು ಜುಲೈ 16ರಂದು ಸಹಿ ಹಾಕಿದ್ದು, ಡಿಸಿಆರ್‌ಇ ವಲಯದ ಎಲ್ಲಾ ಪೊಲೀಸ್ ಅಧೀಕ್ಷಕರು, ಆಡಳಿತಾಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಆದೇಶದ ಪ್ರತಿಗಳನ್ನು ಕಳುಹಿಸಲಾಗಿದೆ.