ತಪ್ಪಾಗಿ ಸುದ್ದಿ ಹಂಚಿಕೊಂಡಿದ್ದಕ್ಕೆ ಪ್ರಿಯಾಂಕ್ ಖರ್ಗೆ ಅವರಲ್ಲಿ ಕ್ಷಮೆಯಾಚಿಸಿದ PTI

'ಹಾನಿ ಈಗಾಗಲೇ ಆಗಿದೆ; ಕ್ಷಮೆಯಾಚನೆಯಿಂದ ಏನು ಪ್ರಯೋಜನ?' ಎಂದ ಗೃಹ ಸಚಿವ

Update: 2026-08-04 23:44 IST

 ಪ್ರಿಯಾಂಕ್ ಖರ್ಗೆ 

ಬೆಂಗಳೂರು : ತಮ್ಮ ಹೇಳಿಕೆಯನ್ನು ತಪ್ಪಾಗಿ ಪ್ರಸಾರ ಮಾಡಿದ್ದ ಪ್ರಕರಣದಲ್ಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI) ಅಧಿಕೃತವಾಗಿ ಕ್ಷಮೆಯಾಚಿಸಿದರೂ, ಅದರಿಂದ ಈಗಾಗಲೇ ಉಂಟಾಗಿರುವ ಹಾನಿ ಸರಿಪಡಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಆ. 3ರಂದು ಮಾಧ್ಯಮಗಳಿಗೆ ಖರ್ಗೆ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ PTI ದೃಶ್ಯ ಮಾಧ್ಯಮ ವಿಭಾಗದ ಸಂಪಾದಕ ಶಾಝಿ ಝಮಾನ್ ಅವರು ಆಗಸ್ಟ್ 4ರಂದು ಖರ್ಗೆ ಅವರಿಗೆ ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ.

ಪತ್ರದಲ್ಲಿ, "ನಮ್ಮ ಕಡೆಯಿಂದ ಸಂಭವಿಸಿದ ಮಾನವ ದೋಷದಿಂದ ನಿಮ್ಮ ಹೇಳಿಕೆಗೆ ಸಂಬಂಧಿಸಿ ತಪ್ಪು ಅರ್ಥೈಸುವಿಕೆ ಉಂಟಾಗಿದೆ. ತಪ್ಪನ್ನು ಸರಿಪಡಿಸುವುದು ಮತ್ತು ಸಂಬಂಧಪಟ್ಟ ಸಿಬ್ಬಂದಿಯಿಂದ ವಿವರಣೆ ಪಡೆಯುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಈ ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ" ಎಂದು ತಿಳಿಸಿದ್ದಾರೆ.

ಈ ಪತ್ರವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಖರ್ಗೆ, "ಹಾನಿ ಈಗಾಗಲೇ ಆಗಿದೆ. ನಿಮ್ಮ ಕ್ಷಮೆಯಾಚನೆಯಿಂದ ಏನು ಪ್ರಯೋಜನ? ಈ ತಪ್ಪು ಮಾಹಿತಿಯನ್ನು ರಾಜಕೀಯ ಪಕ್ಷಗಳು ಮಾತ್ರವಲ್ಲ, ಸಾಮಾಜಿಕ ಮಾಧ್ಯಮದಲ್ಲಿನ ಕಂಟೆಂಟ್‌ ಕ್ರಿಯೆಟರ್‌ ಗಳು ವ್ಯಾಪಕವಾಗಿ ವೈರಲ್‌ ಮಾಡಿದ್ದಾರೆ. ತಪ್ಪು ಮಾಹಿತಿ ವೈರಲ್ ಆದ ಬಳಿಕ ಉಂಟಾದ ಹಾನಿಯನ್ನು ಯಾರು ಸರಿಪಡಿಸಲಿದ್ದಾರೆ? ಎಷ್ಟು ಮಂದಿಯನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯ? ಭಾರತದಲ್ಲಿ ಜವಾಬ್ದಾರಿಯುತ ಪತ್ರಿಕೋದ್ಯಮವು ಹೆಚ್ಚಾಗಿ ಪುರಾಣವಾಗುತ್ತಿದೆ" ಎಂದು ಪೋಸ್ಟ್‌ ಮಾಡಿದ್ದಾರೆ.

ಇದರೊಂದಿಗೆ ಇಂಗ್ಲಿಷ್ ಸಾಹಿತಿ ಜೋನಾಥನ್ ಸ್ವಿಫ್ಟ್ ಅವರ, "ಸುಳ್ಳು ವೇಗವಾಗಿ ಹರಡುತ್ತದೆ; ಸತ್ಯ ಅದರ ಹಿಂದೆ ಬರುತ್ತದೆ. ಸತ್ಯ ತಲುಪುವಷ್ಟರಲ್ಲಿ ಸುಳ್ಳು ತನ್ನ ಪರಿಣಾಮ ಬೀರಿರುತ್ತದೆ" ಎಂಬ ಉಲ್ಲೇಖವನ್ನೂ ಅವರು ಹಂಚಿಕೊಂಡಿದ್ದಾರೆ.

►ವಿವಾದವೇನು?

ವಿಜಯಪುರ ಘಟನೆಯ ಸಂಬಂಧ ಬಿಜೆಪಿ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ ತಮ್ಮ ರಾಜೀನಾಮೆಗೆ ಆಗ್ರಹಿಸುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಖರ್ಗೆ, "ನನ್ನ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ 25 ದಿನಗಳ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧವಿದ್ದರೆ ಅದನ್ನು ಪರಿಗಣಿಸುತ್ತೇನೆ" ಎಂದು ಹೇಳಿದ್ದರು.

ಆದರೆ, ಈ ಹೇಳಿಕೆಯನ್ನು PTI ತಪ್ಪಾಗಿ ಅರ್ಥೈಸಿ, ಅದು ಉದ್ಯೋಗಾಕಾಂಕ್ಷಿಗಳನ್ನು ಉದ್ದೇಶಿಸಿ ನೀಡಿದ ಹೇಳಿಕೆ ಎಂಬ ಅರ್ಥ ಬರುವ ರೀತಿಯಲ್ಲಿ ವರದಿ ಹಾಗೂ ಎಕ್ಸ್ ನಲ್ಲಿ ಪೋಸ್ಟ್ ಪ್ರಕಟಿಸಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಿಯಾಂಕ್ ಖರ್ಗೆ, ತಮ್ಮ ಹೇಳಿಕೆ ಬಿಜೆಪಿಯ ರಾಜಕೀಯವನ್ನು ಉದ್ದೇಶಿಸಿದ್ದೇ ಹೊರತು ವಿದ್ಯಾರ್ಥಿಗಳು ಅಥವಾ ಉದ್ಯೋಗಾಕಾಂಕ್ಷಿಗಳನ್ನು ಉದ್ದೇಶಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ತಪ್ಪು ಮಾಹಿತಿ ಹರಡಿದ ಸುದ್ದಿ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿಯೂ ಅವರು ತಿಳಿಸಿದ್ದರು. ಸುಳ್ಳು ಸುದ್ದಿ ಲಕ್ಷಾಂತರ ಸರ್ಕಾರಿ ಉದ್ಯೋಗಾಕಾಂಕ್ಷಿಗಳಲ್ಲಿ ಅನಗತ್ಯ ಆತಂಕ ಸೃಷ್ಟಿಸುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದ್ದರು.

►PTI ತಿದ್ದುಪಡಿ

ವಿವಾದದ ಬಳಿಕ PTI ತನ್ನ ಎಕ್ಸ್ ಖಾತೆಯಲ್ಲಿ ಮತ್ತೆ ಪ್ರತಿಕ್ರಿಯಿಸಿ, "ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿತ್ತು. ಆ. 3ರಂದು ಪ್ರಕಟಿಸಿದ್ದ ತಮ್ಮ ಹಿಂದಿನ ಎಕ್ಸ್ ಪೋಸ್ಟ್ ಅನ್ನು ಹಿಂತೆಗೆದುಕೊಳ್ಳಲಾಗಿದೆ. ಈ ತಪ್ಪಿಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ" ಎಂದು ಸ್ಪಷ್ಟಪಡಿಸಿತ್ತು.

ಈ ತಿದ್ದುಪಡಿಯ ಮರುದಿನವೇ PTI ಖರ್ಗೆ ಅವರಿಗೆ ಅಧಿಕೃತ ಪತ್ರ ಬರೆದು ಕ್ಷಮೆಯಾಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News