×
Ad

ಸಿನೆಮಾ ಟಿಕೆಟ್ ದರ 200 ರೂ. ನಿಗದಿಯಿಂದ ಪ್ರೇಕ್ಷಕರ ಸಂಖ್ಯೆ ದ್ವಿಗುಣ : ಸಾಧು ಕೋಕಿಲ

Update: 2025-03-08 17:23 IST

ಸಾಧು ಕೋಕಿಲ

ಬೆಂಗಳೂರು : ರಾಜ್ಯದ ಬಜೆಟ್‍ನಲ್ಲಿ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವ ಪ್ರತಿ ಪ್ರದರ್ಶನಕ್ಕೆ ಪ್ರವೇಶ ದರ 200 ರೂ. ನಿಗದಿಪಡಿಸಿರುವುದು ಒಳ್ಳೆಯ ಬೆಳವಣಿಗೆ ಆಗಿದ್ದು, ಇದರಿಂದ ಪ್ರೇಕ್ಷಕರ ಸಂಖ್ಯೆ ದ್ವಿಗುಣ ಆಗಲಿದೆ ಎಂದು ಕನಾರ್ಟಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಹೇಳಿದ್ದಾರೆ.

ಶನಿವಾರ ಓರಾಯನ್ ಮಾಲ್‍ನ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಚಲನಚಿತ್ರಗಳ ಪ್ರೋತ್ಸಾಹಕ್ಕಾಗಿ ಓಟಿಟಿ ವೇದಿಕೆಯನ್ನು ಸೃಜಿಸಲು ಬಜೆಟ್‍ನಲ್ಲಿ ಕ್ರಮ ವಹಿಸಿರುವುದು ಎಲ್ಲರೂ ಸ್ವಾಗತಿಸಿದ್ದಾರೆ.ಇದರಿಂದ ಕನ್ನಡ ಚಿತ್ರರಂಗದ ವ್ಯಾಪ್ತಿ ಹೆಚ್ಚಾಗಲಿದೆ. ಕಲಾವಿದರು, ತಾಂತ್ರಿಕ ಸಿಬ್ಬಂದಿಗಳು ಬೆಳೆಯಲು ಓಟಿಟಿ ಸಹಾಯ ಆಗಲಿದೆ ಎಂದರು.

ಅದೇ ರೀತಿ, ಬೆಂಗಳೂರಿನ ನಂದಿನಿ ಲೇಔಟ್‍ನಲ್ಲಿ ಚಲನಚಿತ್ರ ಅಕಾಡೆಮಿಯು ಹೊಂದಿರುವ 2.5 ಎಕರೆ ನಿವೇಶನದಲ್ಲಿ ಬಹುಪರದೆಗಳಿರುವ ಚಿತ್ರಮಂದಿರ ಸಮುಚ್ಛಯವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಇದರಿಂದ ಮುಂದಿನ ದಿನಗಳಲ್ಲಿಯೇ ಅಲ್ಲಿಯೇ ಅಂತಾರಾಷ್ಟ್ರೀಯ ಸಿನೆಮೋತ್ಸವ ಮಾಡಬಹುದಾಗಿದೆ ಎಂದು ಹೇಳಿದರು.

ಸಾಮಾಜಿಕ, ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುವ ಕನ್ನಡ ಚಲನಚಿತ್ರಗಳನ್ನು ಡಿಜಿಟಲ್ ಹಾಗೂ ನಾನ್-ಡಿಜಿಟಲ್ ಮಾದರಿಯಲ್ಲಿ ಸಂರಕ್ಷಿಸಲು 3 ಕೋಟಿ ರೂ. ವೆಚ್ಚದಲ್ಲಿ ಚಲನಚಿತ್ರ ಭಂಡಾರವನ್ನು ಸ್ಥಾಪಿಸಲಾಗುವುದು ಎಂದು ಸರಕಾರ ಪ್ರಕಟಿಸಿದೆ. ಅದೇ ರೀತಿ, ಅಂತಾರಾಷ್ಟ್ರೀಯ ದರ್ಜೆಯ ಚಿತ್ರನಗರಿಯನ್ನು ಪಿಪಿಪಿ ಮಾದರಿಯಲ್ಲಿ ಅಂದಾಜು 500 ಕೋಟಿ ರೂ. ವೆಚ್ಚದಲ್ಲಿ ಮೈಸೂರಿನಲ್ಲಿ ಸ್ಥಾಪಿಸಲು 150 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಚಿತ್ರನಗರಿಯನ್ನು ಸ್ಥಾಪಿಸಲು ಸರಕಾರ ಬದ್ಧವಾಗಿದೆ. ಒಟ್ಟಾರೆ ಕನ್ನಡ ಚಿತ್ರರಂಗ ಪ್ರಗತಿಗೆ ಈ ಬಾರಿಯ ಬಜೆಟ್‍ನಲ್ಲಿ ಆದ್ಯತೆ ನೀಡಲಾಗಿದೆ ಎಂದು ಅವರು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News