ಹಿರಿಯ ನಟಿ ಲೀಲಾವತಿ ನಿಧನಕ್ಕೆ ಗಣ್ಯರ ಸಂತಾಪ
ಬೆಂಗಳುರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕನ್ನಡದ ಖ್ಯಾತ ನಟರಾದ ದರ್ಶನ್ , ಶಿವರಾಜ್ ಕುಮಾರ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟುಮಾಡಿದೆ. ಕಳೆದ ವಾರವಷ್ಟೇ ಅವರು ಅನಾರೋಗ್ಯಕ್ಕೀಡಾದ ವಿಚಾರ ತಿಳಿದು ಅವರ ಮನೆಗೆ ಭೇಟಿನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಕುಮಾರ್ ಅವರೊಂದಿಗೆ ಮಾತನಾಡಿದ್ದೆ. ಹಲವು ದಶಕಗಳ ಕಾಲ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಲೀಲಾವತಿ ಅವರು ಗುಣಮುಖರಾಗಿ ಇನ್ನಷ್ಟು ಕಾಲ ನಮ್ಮ ನಡುವೆ ಇರುತ್ತಾರೆಂಬ ನನ್ನ ನಂಬಿಕೆ ಹುಸಿಯಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’
-ಸಿದ್ದರಾಮಯ್ಯ, ಮುಖ್ಯಮಂತ್ರಿ
‘ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ಅತೀವ ದುಃಖ ಉಂಟುಮಾಡಿದೆ. ಇತ್ತೀಚೆಗಷ್ಟೇ ಅವರು ನೆಲಮಂಗಲ ಬಳಿಯ ಸೋಲದೇವನಹಳ್ಳಿಯಲ್ಲಿ ನಿರ್ಮಿಸಿದ್ದ ಪಶು ಆಸ್ಪತ್ರೆಯನ್ನು ಉದ್ಘಾಟಿಸಿದ್ದೆ. ಸಂಕಷ್ಟದಲ್ಲಿದ್ದರೂ ಸಮಾಜ ಸೇವೆ ಮಾಡಬೇಕೆನ್ನುವ ಅವರ ಕಳಕಳಿ ನನ್ನ ಹೃದಯ ಮುಟ್ಟಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಪುತ್ರ ವಿನೋದ್ ರಾಜ್ ಕುಟುಂಬವರ್ಗದವರು ಹಾಗೂ ಅಭಿಮಾನಿಗಳ ನೋವಿನಲ್ಲಿ ನಾನೂ ಕೂಡ ಭಾಗಿ. ಓಂ ಶಾಂತಿ’
- ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
‘ಕನ್ನಡ ಚಿತ್ರರಂಗದ ಶ್ರೇಷ್ಠ ನಟಿಯರಲ್ಲಿ ಒಬ್ಬರು, ಬಹುಭಾಷೆ ಕಲಾವಿದರಾದ ಲೀಲಾವತಿ ಅವರ ನಿಧನದ ವಾರ್ತೆ ಕೇಳಿ ಬಹಳ ನೋವುಂಟಾಯಿತು. ನಾಯಕಿಯಾಗಿ ಮಾತ್ರವಲ್ಲದೆ, ಪೋಷಕ ಪಾತ್ರಗಳಿಗೂ ಜೀವ ತುಂಬಿ ಬೆಳ್ಳಿತೆರೆಯ ಮೇಲೆ ಅವುಗಳ ಹೆಜ್ಜೆಗುರುತುಗಳು ಮೂಡುವಂತೆ ಮಾಡಿದವರು ಅವರು. ಅಮ್ಮ, ಅಕ್ಕ, ಅತ್ತೆ ಸೇರಿ ಅನೇಕ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ನಟಿಸುತ್ತಿದ್ದರು. ಭಕ್ತ ಕುಂಬಾರ, ವೀರ ಕೇಸರಿ, ಭಾಗ್ಯದೇವತೆ, ಸೋತು ಗೆದ್ದವಳು, ನಂದಾದೀಪ, ವಿಧಿ ವಿಲಾಸ, ಸಂತ ತುಕಾರಾಂ, ರಣಧೀರ ಕಂಠೀರವ ಸೇರಿ ಅವರು ನಟಿಸಿದ್ದ ಅನೇಕ ಚಿತ್ರಗಳು ಕನ್ನಡಿಗರ ಮನೆ ಮನಗಳನ್ನು ತುಂಬಿರುತ್ತವೆ. ಲೀಲಾವತಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಪುತ್ರ ವಿನೋದ್ ರಾಜ್ ಅವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ.
‘ಮನಸ್ಸಿಗೆ ಬಹಳ ಬೇಸರ ಆಗಿದೆ. ಲೀಲಾವತಿ ಅವರ ಅಗಲಿಕೆ ನಮ್ಮ ಚಿತ್ರರಂಗಕ್ಕೆ ದೊಡ್ಡ ನಷ್ಟ. ನಾವೆಲ್ಲರೂ ಜೊತೆಯಲ್ಲಿ ಇದ್ದೇವೆ ಎಂದು ವಿನೋದ್‍ಗೆ ನಾನು ಯಾವಾಗಲೂ ಹೇಳುತ್ತಿದ್ದೆ. ತಾಯಿಯನ್ನು ಅವರು ತುಂಬ ಹಚ್ಚಿಕೊಂಡಿದ್ದರು. ಅವರಿಬ್ಬರ ನಡುವಿನ ಬಾಂಧವ್ಯ ಬೇರೆ ರೀತಿಯಿತ್ತು. ವಿನೋದ್ ಈಗ ಧೈರ್ಯ ತಂದುಕೊಳ್ಳಬೇಕು. ಅವರ ಜೊತೆ ನಾನು ಈಗಾಗಲೇ ಮಾತನಾಡಿದ್ದೇನೆ. ಲೀಲಾವತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ವಿನೋದ್ ಅವರನ್ನು ಮತ್ತೆ ಭೇಟಿ ಮಾಡುತ್ತೇನೆ’.
- ಶಿವರಾಜ್‍ಕುಮಾರ್, ಕನ್ನಡ ಚಲನಚಿತ್ರ ನಟ
ನಮ್ಮ ಕರುನಾಡಿನ ಹೆಸರಾಂತ ಕಲಾವಿದೆ ಲೀಲಾವತಿ ಅಮ್ಮನವರು ಇಂದು ಸಾವನ್ನಪ್ಪಿರುವುದು ಇಡೀ ರಾಜ್ಯಕ್ಕೆ ಒಂದು ದುಃಖಕರ ಸಂಗತಿ. ಈ ಮಹಾನ್ ಚೇತನಕ್ಕೆ ಶಾಂತಿ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ. ವಿನೋದ್ ರಾಜ್ ರವರ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ಸಿಗಲಿ.
ದರ್ಶನ್ ತೂಗುದೀಪ, ಕನ್ನಡ ಚಲನಚಿತ್ರ ನಟ
‘ಲೀಲಾವತಿ ಅವರು ಕೇವಲ ನಟಿಯಲ್ಲ, ಅವರು ದಂತಕತೆ. ನಟಿಯಾಗಿ ಮಾತ್ರವೇ ಅಲ್ಲದೆ, ತಮ್ಮ ಮಾನವೀಯ ಗುಣಗಳಿಂದ, ಸಾಮಾಜಿಕ ದೃಷ್ಟಿಕೋನದಿಂದಲೂ ಗುರುತಿಸಿಕೊಂಡವರು. ಒಬ್ಬ ನಟಿ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟವರು. ಹಲವಾರು ಮಂದಿಗೆ ಮಾದರಿಯಾಗಿ ಬದುಕಿದವರು ಲೀಲಾವತಿ. ನಟಿಯಾಗಿ ತಾನು ದುಡಿದಿದ್ದನ್ನು ಸಮಾಜಕ್ಕೆ ಅರ್ಪಿಸಿದರು. ದುಡಿದಿದ್ದೆಲ್ಲವನ್ನೂ ಮಗನಿಗಾಗಿ ನೀಡದೆ ಸಮಾಜಕ್ಕೆ ಪಾಲು ನೀಡಿದ ಮಹಾನ್ ಮಹಿಳೆ ಲೀಲಾವತಿ. ನಟಿಯಾಗಿ ಮೆರೆದರೂ ರೈತ ಮಹಿಳೆಯಾಗಿ ಜೀವನ ನಡೆಸಿದರು. ತಮ್ಮ ತೋಟದಲ್ಲಿ ತಾನೇ ಗುದ್ದಲಿ, ಸಲಿಕೆ ಹಿಡಿದು ಕೆಲಸ ಮಾಡುತ್ತಿದ್ದರು. ಅವರನ್ನು ಹತ್ತಿರದಿಂದ ನೋಡಿದವರು ಮಾತ್ರವೇ ಇದನ್ನೆಲ್ಲ ಬಲ್ಲರು. ಕನ್ನಡ ಚಿತ್ರರಂಗಕ್ಕೆ ಲೀಲಾವತಿ ಅವರು ಕೊಟ್ಟಿರುವ ಕೊಡುಗೆ ಅಪಾರವಾದುದು, ಮಾತ್ರವಲ್ಲದೆ ಬದುಕಿನ ಮಾದರಿಯನ್ನು ನೀಡಿದ್ದಾರೆ.
-ಉಮಾಶ್ರೀ, ಹಿರಿಯ ನಟಿ, ಮಾಜಿ ಸಚಿವೆ.