ಬೆಂಗಳೂರು : ಕ್ಷೇತ್ರ ಮರು ವಿಂಗಡಣೆ ಜೊತೆಗಿನ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಬದಲಿಗೆ ಲಾಭವಾಗಲಿವೆ. ಈಗಾಗಲೇ ಇರುವ ಲೋಕಸಭಾ ಸ್ಥಾನಗಳ ಜೊತೆಗೆ ಶೇ.50 ರಷ್ಟು ಸ್ಥಾನಗಳು ಹೆಚ್ಚಳವಾಗಲಿವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಗಣತಿ ಪ್ರಕಾರ ಕ್ಷೇತ್ರ ಮರುವಿಂಗಡಣೆ ಮಾಡಿದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಲೋಕಸಭಾ ಸ್ಥಾನಗಳು ಕಡಿಮೆ ಆಗುತ್ತದೆ ಎಂಬ ಆತಂಕ ಉಂಟಾಗಿತ್ತು. ಆದರೆ ಈಗ ಶೇ.50ರಷ್ಟು ಸ್ಥಾನ ಹೆಚ್ಚಳಕ್ಕೆ ಮುಂದಾಗಿರುವ ಕಾರಣ ದಕ್ಷಿಣದ ರಾಜ್ಯಗಳು ಆತಂಕ ಪಡಬೇಕಾಗಿಲ್ಲ ಎಂದು ಹೇಳಿದರು.

ಕರ್ನಾಟಕದಲ್ಲಿ ಕ್ಷೇತ್ರ ವಿಂಗಡಣೆ ಜೊತೆಗೆ ಮಹಿಳಾ ಮೀಸಲಾತಿ ಬಂದರೆ 28 ಲೋಕಸಭಾ ಸ್ಥಾನಗಳು ಪುರುಷರಿಗೆ ಉಳಿಯಲಿವೆ. ಇನ್ನು 14 ಸ್ಥಾನ ಮಹಿಳೆಯರಿಗೆ ಸಿಗಲಿವೆ. ಇದರಿಂದ ಪುರುಷ ಅಭ್ಯರ್ಥಿಗಳು ಆತಂಕ ಪಡಬೇಕಿಲ್ಲ. ಈ ಬಾರಿಯ ಮಸೂದೆಗೆ ಬೆಂಬಲ ಸಿಗಲಿದೆ ಎಂಬ ವಿಶ್ವಾಸವಿದೆ. ಮಹಿಳಾ ಮೀಸಲಾತಿ ವಿಧೇಯಕ ಕಳೆದ ಮೂವತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ರಾಜಕೀಯ ಇಚ್ಛಾಶಕ್ತಿ ಕೊರತೆ ಮತ್ತು ಬೇರೆ ಬೇರೆ ಪಕ್ಷಗಳ ವಿರೋಧದಿಂದ ಅಂಗೀಕಾರವಾಗಿರಲಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.

1971 ರಲ್ಲಿ ದೇಶದ ಜನಸಂಖ್ಯೆ ಆಧಾರದ 550 ಸ್ಥಾನಗಳು ನಿಗದಿ ಮಾಡಲಾಗಿತ್ತು. ಆಗ ದೇಶದ ಜನಸಂಖ್ಯೆ 54 ಕೋಟಿ ಇತ್ತು. ಈಗ ಭಾರತದ ಜನಸಂಖ್ಯೆ 140 ಕೋಟಿ. ಅಂದರೆ ಮೂರುಪಟ್ಟು ಜಾಸ್ತಿ ಆಗಿದೆ. ಕೆಲವೊಂದು ಲೋಕಸಭಾ ಕ್ಷೇತ್ರದಲ್ಲಿ 30 ಲಕ್ಷದವರೆಗೆ ಮತದಾರರು ಇದ್ದಾರೆ. ಇಷ್ಟು ಸಂಖ್ಯೆಗೆ ಒಬ್ಬರು ಸಂಸದರು ಇದ್ದರೆ ನಿಭಾಯಿಸುವುದು ಕಷ್ಟ. ಈ ಎಲ್ಲ ಸಮಸ್ಯೆಗಳಿಗೆ ಕ್ಷೇತ್ರ ಮರುವಿಂಗಡಣೆ ಪರಿಹಾರ ಒದಗಿಸಲಿದೆ ಎಂದು ಅವರು ತಿಳಿಸಿದರು.

850 ಲೋಕಸಭಾ ಸ್ಥಾನಗಳಲ್ಲಿ ಮಹಿಳೆಯರಿಗೆ 269 ಸ್ಥಾನ ಸಿಗಲಿವೆ. ಅವರೂ ನೀತಿ ರೂಪಿಸುವುದರಲ್ಲಿ ಪಾಲ್ಗೊಳ್ಳಲಿದ್ದಾರೆ. ಎನ್‍ಡಿಎ ಮೈತ್ರಿಕೂಟದ ಸಂಸದರು ಈಗಾಗಲೇ ಬೆಂಬಲ ನೀಡಿದ್ದಾರೆ. ಮಹಿಳಾ ಹಕ್ಕು, ಸಮಾನತೆ ಕುರಿತ ಮಾತು ಮಹಿಳಾ ದಿನಕ್ಕೆ ಮಾತ್ರ ಸೀಮಿತವಾಗಬಾರದು ಎಂದು ಅವರು ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಮ್ಜದ್ ಖಾನ್ ಎಂ./ವಾರ್ತಾಭಾರತಿ

ಬೆಂಗಳೂರು ವರದಿಗಾರರು

ಅಮ್ಜದ್ ಖಾನ್ ಎಂ. ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, 2007ರಿಂದ ವಾರ್ತಾಭಾರತಿ ಕನ್ನಡ ದೈನಿಕ ಬೆಂಗಳೂರು ಆವೃತ್ತಿಯಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವಾಸಿ ಅನುಭವದ ವಿಶೇಷ ಲೇಖನಗಳನ್ನು ಬರೆಯುವುದು, ಪುಸ್ತಕ ಓದುವುದು‌, ಸಾಮಾಜಿಕ ಸೇವಾ ಕಾರ್ಯಗಳು ಇವರ ಹವ್ಯಾಸವಾಗಿವೆ.