ಕನಕಗಿರಿ ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಬನ್ನಿ: ಛಲವಾದಿ ನಾರಾಯಣಸ್ವಾಮಿಗೆ ಶಿವರಾಜ್ ತಂಗಡಗಿ ಸವಾಲು
ಛಲವಾದಿ ನಾರಾಯಣಸ್ವಾಮಿ, ಶಿವರಾಜ್ ತಂಗಡಗಿ
ಕೊಪ್ಪಳ: ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಸಚಿವ ಶಿವರಾಜ್ ತಂಗಡಗಿ ತೀವ್ರ ವಾಗ್ದಾಳಿ ನಡೆಸಿದ್ದು, ಗ್ಯಾರಂಟಿ ಯೋಜನೆಗಳ ಕುರಿತು ನೀಡಿರುವ ಹೇಳಿಕೆಗಳನ್ನು ಖಂಡಿಸಿದ್ದಾರೆ. ಅಲ್ಲದೆ, ಕನಕಗಿರಿ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಪ್ರಿಯ ಸ್ನೇಹಿತ ಛಲವಾದಿ ನಾರಾಯಣಸ್ವಾಮಿ ಸಾಹೇಬರಿಗೆ ನಮಸ್ಕಾರ. ಸದಾ ‘ನಾಯಿ ಜಪ’ದಲ್ಲೇ ಕಾಲ ಕಳೆಯುವ ನಾರಾಯಣಸ್ವಾಮಿಯವರೇ, ಕನಕಗಿರಿಗೆ ಬಂದು ಅಜೀರ್ಣ ಸಮಸ್ಯೆಯಿಂದ ವಾಂತಿ ಮಾಡಿ ಹೋಗಿದ್ದೀರಿ. ನಿಮ್ಮ ಮಾತುಗಳನ್ನು ಕೇಳಿ ಅಸಹ್ಯವಾದರೂ, ಅದೇ ನಿಮ್ಮ ರಾಜಕೀಯ ವೃತ್ತಿ ಎಂಬುದು ಗೊತ್ತಿರುವುದರಿಂದ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂದು ತಾನು ಹೇಳಿರುವುದಾಗಿ ನಾರಾಯಣಸ್ವಾಮಿ ಅಪ್ಪಟ ಸುಳ್ಳು ಹೇಳಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ಖಚಿತವಾಗಿ ನಿಲ್ಲಿಸುತ್ತಾರೆ ಎಂಬ ತಮ್ಮ ಹೇಳಿಕೆಯನ್ನು ತಿರುಚಿ ‘ಬ್ಲ್ಯಾಕ್‌ಮೇಲ್’ ಎಂದು ಬಿಂಬಿಸಿದ್ದಾರೆ ಎಂದು ತಂಗಡಗಿ ಆರೋಪಿಸಿದ್ದಾರೆ.
“ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿಲ್ಲ ಎಂದು ಹೇಳುವ ಮೂಲಕ ರಾಜಕೀಯ ಅಸಹಾಯಕತೆ ಪ್ರದರ್ಶಿಸಿದ್ದೀರಿ. ಗ್ಯಾರಂಟಿ ಕೊಡದಿದ್ದರೆ ಜನ ಸತ್ತು ಹೋಗುತ್ತಾರಾ ಎಂದು ಪ್ರಶ್ನಿಸಿ ವಿಕೃತಿ ತೋರಿಸಿದ್ದೀರಿ. ಬಿಜೆಪಿ ಆಡಳಿತಾವಧಿಯಲ್ಲಿ ಗ್ಯಾರಂಟಿ ಇರಲಿಲ್ಲ, ಆಗ ಜನ ಬದುಕಿರಲಿಲ್ಲವೇ ಎಂದಿದ್ದೀರಿ. ಬಡವರ ಯೋಜನೆಗಳ ಬಗ್ಗೆ ಯಾಕಿಷ್ಟು ಅಸೂಯೆ ಮತ್ತು ದ್ವೇಷ? ಗ್ಯಾರಂಟಿ ಇಲ್ಲದಿದ್ದರೂ ಜನರು ಆರಾಮಾಗಿರುತ್ತಿದ್ದರು ಎಂಬ ನಿಮ್ಮ ಮಾತಿನ ಅರ್ಥವೇನು? ನೀವು ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಸ್ಥಗಿತಗೊಳಿಸುತ್ತೀರಿ ಎಂದೇ ಅಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮತ್ತು ಎಥೆನಾಲ್ ಲೂಟಿಯ ಮೂಲಕ ರಾಜ್ಯದ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಿರುವ ಅವರು, ಅಕ್ಕಿ ಬೆಲೆ 90 ರೂ. ದಾಟಿದೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 100 ರೂ. ತಲುಪಿ ವರ್ಷಗಳೇ ಕಳೆದಿವೆ ಎಂದು ಹೇಳಿದ್ದಾರೆ. ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ, ಆದಾಯ ದ್ವಿಗುಣಗೊಳಿಸುವ ಭರವಸೆಯ ಬದಲಿಗೆ ರಸಗೊಬ್ಬರ, ಕೀಟನಾಶಕ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ರೈತರ ಖರ್ಚು ದುಪ್ಪಟ್ಟಾಗುವಂತೆ ಮಾಡಿದೆ ಎಂದು ಟೀಕಿಸಿದ್ದಾರೆ.
ತಾನು ನಾಲ್ಕು ಬಾರಿ ಸಚಿವನಾಗಿರುವುದಕ್ಕೂ ನಾರಾಯಣಸ್ವಾಮಿ ಹೊಟ್ಟೆಕಿಚ್ಚು ಪಟ್ಟಿದ್ದಾರೆ. ಕನಕಗಿರಿಗೆ ಏನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಆದರೆ, ತಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ನೀಡಲು ಸಿದ್ಧನಿದ್ದೇನೆ ಎಂದು ತಂಗಡಗಿ ತಿಳಿಸಿದ್ದಾರೆ.
“ಕನಕಗಿರಿಗೆ ಮೊದಲ ಬಾರಿಗೆ ಕೆರೆ ತುಂಬಿಸುವ ಯೋಜನೆ ಜಾರಿಗೆ ತಂದಿದ್ದು ನಾನು. ರೈಸ್ ಟೆಕ್ನಾಲಜಿ ಪಾರ್ಕ್, ರಸ್ತೆ, ಸೇತುವೆ, ಸಮುದಾಯ ಭವನ, ಶಾಲಾ ಕೊಠಡಿಗಳು, ಅಂಗನವಾಡಿಗಳು, ವಸತಿ ನಿಲಯಗಳು ಹಾಗೂ ಪ್ರಜಾಸೌಧ ಸೇರಿದಂತೆ ನನ್ನ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ವಿವರ ಮತ್ತು ಅನುದಾನದ ಲೆಕ್ಕವನ್ನು ಮುಂದಿಡುತ್ತೇನೆ. ಹಿಂದಿನ ಬಾರಿ ಗೆದ್ದ ನಿಮ್ಮ ಪಕ್ಷದ ಶಾಸಕ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಪಿಎಸ್‌ಐ ಕಮಿಷನ್ ಹಗರಣ, ದೇವದಾಸಿಯರ ಭೂ ಕಬಳಿಕೆ ಸೇರಿದಂತೆ ವಿವಿಧ ಆರೋಪಗಳ ಪಟ್ಟಿಯನ್ನೂ ನೀಡಿ. ಜನರ ಮುಂದೆ ಚರ್ಚೆಗೆ ಬನ್ನಿ” ಎಂದು ಸವಾಲು ಹಾಕಿದ್ದಾರೆ.
ಜನಪರ ಕೆಲಸಗಳ ಮೂಲಕ ನಾಲ್ಕು ಬಾರಿ ಸಚಿವರಾಗಿರುವವರಿಗೆ ನಾಯಕತ್ವದ ಬಗ್ಗೆ ಉಪದೇಶ ನೀಡುವ ಬದಲು, ಮೊದಲು ನೀವು ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ನಾಯಕರಾಗಿ ಬೆಳೆಯಿರಿ ಎಂದು ಹೇಳಿದ್ದಾರೆ. ರಾಜಕೀಯ ಟೀಕೆಗಳನ್ನೇ ಬಂಡವಾಳ ಮಾಡಿಕೊಂಡು ಎಷ್ಟು ದಿನ ಓಡಾಡುತ್ತೀರಿ? ಆರೆಸ್ಸೆಸ್ ನ ಬೆಂಬಲಿಗರಾಗಿಯೇ ಉಳಿಯುವ ಬದಲು ಸ್ವಂತ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವತ್ತ ಗಮನಹರಿಸಿ. ಒಂದು ಕ್ಷೇತ್ರದ ಟಿಕೆಟ್ ಪಡೆದು ಕೆಲಸ ಮಾಡಿ ಎಂದು ವ್ಯಂಗ್ಯವಾಡಿದ್ದಾರೆ.
ರಾಜಕೀಯ ಪುಂಡಾಟಿಕೆಯ ಹೇಳಿಕೆಗಳನ್ನು ಬಿಟ್ಟು ಆಶಾ ಕಾರ್ಯಕರ್ತೆಯರಿಗೆ ಕೇಂದ್ರದ ಪಾಲಿನ ಅನುದಾನ ಕೊಡಿಸುವುದು, ರಾಜ್ಯಕ್ಕೆ ಬರ ಪರಿಹಾರ ಒದಗಿಸುವುದು, ಮಹದಾಯಿ ಮತ್ತು ಮೇಕೆದಾಟು ಯೋಜನೆಗಳಿಗೆ ಒಪ್ಪಿಗೆ ಪಡೆಯುವುದು, ಮೆಟ್ರೋ ಯೋಜನೆಗೆ ರಾಜ್ಯಕ್ಕೆ ಬರಬೇಕಿರುವ ಪಾಲು, ಅನುದಾನ ಹಾಗೂ ತೆರಿಗೆ ಪಾಲಿನ ಕುರಿತು ಧ್ವನಿ ಎತ್ತುವಂತೆ ನಾರಾಯಣಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.
ಪ್ರಿಯ ಸ್ನೇಹಿತ ಛಲವಾದಿ ನಾರಾಯಣಸ್ವಾಮಿ ಸಾಹೇಬರಿಗೆ ನಮಸ್ಕಾರ.
ಸದಾ ‘ನಾಯಿ ಜಪ’ದಲ್ಲೇ ಕಾಲ ಕಳೆಯುವ ನಾರಾಯಣಸ್ವಾಮಿಯವರೇ,
ಕನಕಗಿರಿಗೆ ಬಂದು ಅಜೀರ್ಣ ಸಮಸ್ಯೆಯಿಂದ ಅಮೇದ್ಯದ ವಾಂತಿ ಮಾಡಿ ಹೋಗಿದ್ದೀರಿ.
ನಿಮ್ಮ ಮಾತುಗಳನ್ನು ಕೇಳಿ ಅಸಹ್ಯವಾದರೂ, ಅದೇ ನಿಮ್ಮ ರಾಜಕೀಯ ವೃತ್ತಿ ಎಂಬುದು ಗೊತ್ತಿರುವುದರಿಂದ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.
ನಾನು ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದರೆ ಗ್ಯಾರಂಟಿ ನಿಲ್ಲಿಸುತ್ತೇವೆ ಎಂದಿರುವುದಾಗಿ ಅಪ್ಪಟ ಸುಳ್ಳು ಹೇಳಿದ್ದೀರಿ.
ಬಿಜೆಪಿ ಅಧಿಕಾರಕ್ಕೆ ಬಂದರೆ ಖಚಿತವಾಗಿ ಗ್ಯಾರಂಟಿ ನಿಲ್ಲಿಸುತ್ತಾರೆ ಎಂಬ ನನ್ನ ಹೇಳಿಕೆ ತಿರುಚಿ 'ಬ್ಲಾಕ್ ಮೇಲ್' ಎಂದೆಲ್ಲಾ ಮಾತನಾಡಿದ್ದೀರಿ. ನಮ್ಮ ಸರ್ಕಾರ ಗ್ಯಾರಂಟಿಯೇ ಕೊಡುತ್ತಿಲ್ಲ ಎಂದು ಹೇಳಿ ರಾಜಕೀಯ ಅಸಹಾಯಕತೆ ಪ್ರದರ್ಶಿಸಿದ್ದೀರಿ.
ಗ್ಯಾರಂಟಿ ಕೊಡದಿದ್ದರೆ ಜನ ಸತ್ತೋಗಿ ಬಿಡ್ತಾರಾ? ಎಂದು ಪ್ರಶ್ನಿಸಿ ವಿಕೃತಿ ತೋರಿದ್ದೀರಿ. ನಮ್ಮ (ಬಿಜೆಪಿ) ಅವಧಿಯಲ್ಲಿ ಕೊಟ್ಟಿರಲಿಲ್ಲ ಜನ ಬದುಕಿರಲಿಲ್ಲವೇ? ಎಂದಿದ್ದೀರಿ. ಬಡವರ ಯೋಜನೆಗಳ ಬಗ್ಗೆ ಯಾಕಿಷ್ಟು ಅಸೂಯೆ? ಯಾಕಿಷ್ಟು ದ್ವೇಷ?
ಗ್ಯಾರಂಟಿ ಇಲ್ಲದಿದ್ದರೂ ಜನರು ಆರಾಮಾಗೇ ಇರ್ತಿದ್ದರು ಎಂಬ ನಿಮ್ಮ ಮಾತಿಗೆ ನಾಚಿಕೆಯಾಗಬೇಕು. ಇದರ ಅರ್ಥ ನೀವು ಬಂದರೆ ಗ್ಯಾರಂಟಿ ಸ್ಥಗಿತಗೊಳಿಸುತ್ತೀರಿ ಎಂದೇ ಅಲ್ಲವೇ?
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಅಗತ್ಯ ವಸ್ತುಗಳ ದರ ಹೆಚ್ಚಳ, ಎಥೆನಾಲ್ ಲೂಟಿ ಮೂಲಕ ನಮ್ಮ ರಾಜ್ಯದ ಜನರ ಜೇಬು ಕೊಳ್ಳೆ ಹೊಡೆಯುತ್ತಿದೆ.
ಅಕ್ಕಿ ಬೆಲೆ 90 ರು. ದಾಟಿದೆ, ಪೆಟ್ರೋಲ್ ಡೀಸೆಲ್ ಸೆಂಚುರಿ ಬಾರಿಸಿ ವರ್ಷ ಕಳೆದಿದೆ. ಉದ್ಯೋಗ ಸೃಷ್ಟಿ ಮಾಡಿಲ್ಲ, ಆದಾಯ ದ್ವಿಗುಣ ಮಾಡುತ್ತೇವೆ ಎಂದು ರಸಗೊಬ್ಬರ, ಕೀಟನಾಶಕ ಬೆಲೆ ಸೇರಿದಂತೆ ಎಲ್ಲಾ ಬೆಲೆ ಹೆಚ್ಚಿಸಿ ರೈತರ ಖರ್ಚು ದುಪ್ಪಟ್ಟು ಮಾಡಿದ್ದೀರಿ.
ಹೀಗಿರುವಾಗ ಗ್ಯಾರಂಟಿಗಳು ಇಲ್ಲದಿದ್ದರೆ ಜನ ನೆಮ್ಮದಿಯಾಗಿ ಇರುತ್ತಿದ್ದರು ಎಂದು ಹೇಗೆ ಹೇಳುತ್ತೀರಿ. ನಿಮಗೆ ನಾಚಿಕೆ ಎಂಬುದೇ ಆಗುವುದಿಲ್ಲವೇ?
ನಾನು ನಾಲ್ಕು ಬಾರಿ ಸಚಿವನಾಗಿರುವುದಕ್ಕೂ ಹೊಟ್ಟೆ ಕಿಚ್ಚು ಪಟ್ಟಿದ್ದೀರಿ. ಕನಕಗಿರಿಗೆ ಏನೂ ಮಾಡಿಲ್ಲ ಎಂದಿದ್ದೀರಿ.
ನನ್ನ ಅವಧಿಯಲ್ಲಿ ಏನೆಲ್ಲಾ ಕೆಲಸ ಮಾಡಿದ್ದೇನೆ ಎಂದು
ನನ್ನ ಸಾಧನೆಯ ಪಟ್ಟಿಯನ್ನು ನಾನು ನೀಡುತ್ತೇನೆ.
ಕನಕಗಿರಿಗೆ ಮೊದಲ ಬಾರಿಗೆ ಕೆರೆ ತುಂಬಿಸುವ ಯೋಜನೆ ಮಾಡಿದ್ದು ನಾನು. ರೈಸ್ ಟೆಕ್ನಾಲಜಿ ಪಾರ್ಕ್,
ರಸ್ತೆ, ಸೇತುವೆ, ಸಮುದಾಯ ಭವನ, ಶಾಲಾ ಕೊಠಡಿ, ಅಂಗನವಾಡಿ, ವಸತಿ ನಿಲಯ, ಪ್ರಜಾಸೌಧ ಸೇರಿದಂತೆ ನನ್ನ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಲೆಕ್ಕ, ಅನುದಾನ ವಿವರ ಮುಂದಿಡುತ್ತೇನೆ.
ಹಿಂದಿನ ಬಾರಿ ಗೆದ್ದ ನಿಮ್ಮ ಪಕ್ಷದ ಶಾಸಕ ಮಾಡಿರುವ ಅಭಿವೃದ್ದಿ, ಪಿಎಸ್‌ಐ ಕಮಿಷನ್ ಹಗರಣ, ದೇವದಾಸಿಯರ ಭೂ ಕಬಳಿಕೆ ಸೇರಿದಂತೆ ಅನಾಚಾರಗಳ ಪಟ್ಟಿ ನೀಡಿ. ಜನರ ಮುಂದೆ ಚರ್ಚೆಗೆ ಬನ್ನಿ.
ಜನಪರ ಕೆಲಸಗಳ ಮೂಲಕ ನಾಲ್ಕು ಬಾರಿ ಸಚಿವರಾದವರಿಗೆ ಲೀಡರ್ ಆಗೋದರ ಬಗ್ಗೆ ಉಪದೇಶ ಕೊಡುವುದು ಬಿಟ್ಟು ಒಂದು ಕ್ಷೇತ್ರ ಆಯ್ಕೆ ಮಾಡಿಕೊಂಡು ಮೊದಲು ನೀವು ಲೀಡರ್ ಆಗಿ.
ಬರೀ ಬಚ್ಚಲು ಬಾಯಿಯನ್ನೇ ಬಂಡವಾಳ ಮಾಡಿಕೊಂಡು ಎಷ್ಟು ದಿನ ಅಡ್ಡಾಡುತ್ತೀರಿ. ಆರ್ಎಸ್ಎಸ್ನ ಬಕೆಟ್ ಆಗಿ ಉಳಿಯುವುದಕ್ಕಿಂತ ಸ್ವಂತ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವತ್ತ ಗಮನಹರಿಸಿ. ಚಡ್ಡಿ ಹೊತ್ತ ಋಣಕ್ಕಾದರೂ ಒಂದು ಕ್ಷೇತ್ರದ ಟಿಕೆಟ್ ಪಡೆದು ಕೆಲಸ ಮಾಡಿ.
ಎಲ್ಲದಕ್ಕಿಂತಲೂ ಮೊದಲು, ರಾಜಕೀಯ ಪುಂಡಾಟಿಕೆಯ ಹೇಳಿಕೆಗಳನ್ನು ಬಿಟ್ಟು 'ಆಶಾ ಕಾರ್ಯಕರ್ತೆಯರಿಗೆ ಕೇಂದ್ರದ ಪಾಲು ಕೊಡಿಸಿ, ರಾಜ್ಯಕ್ಕೆ ಬರ ಪರಿಹಾರ ಕೊಡಿಸಿ, ಮಹದಾಯಿ, ಮೇಕೆದಾಟುಗೆ ಒಪ್ಪಿಗೆ ಕೊಡಿಸಿ, ಮೆಟ್ರೋ ಯೋಜನೆ
ಪಾಲು ಸೇರಿದಂತೆ ರಾಜ್ಯಕ್ಕೆ ಬರಬೇಕಿರುವ ಅನುದಾನ, ತೆರಿಗೆ ಪಾಲು, ಯೋಜನೆಗಳ ಬಗ್ಗೆ ಧ್ವನಿ ಎತ್ತಿ'
ಇದು ನಾರಾಯಸ್ವಾಮಿ ಸಾಹೇಬರಿಗೆ ನನ್ನ ವಿನಮ್ರ ಮನವಿ
@NswamyChalavadi
— Shivaraj S Tangadagi (@sstangadagi) November 29, 2026