ಪ್ರತಿದಿನದ ಇಂಧನ ಲೂಟಿಯಿಂದ ಸಾಮಾನ್ಯ ಜನರ ಜೇಬನ್ನು ಬಿಜೆಪಿ ʼಪಿಕ್‌ಪಾಕೆಟ್ʼ ಮಾಡುತ್ತಿದೆ : ಸಿಎಂ, ಡಿಸಿಎಂ, ಸುರ್ಜೇವಾಲ ಆಕ್ರೋಶ
"ಕಳೆದ 12 ವರ್ಷಗಳಲ್ಲಿ ಮೋದಿ ಸರಕಾರ ಇಂಧನದ ಮೇಲೆ ತೆರಿಗೆ ವಿಧಿಸುವ ಮೂಲಕ 43 ಲಕ್ಷ ಕೋಟಿ ರೂ. ಸಂಗ್ರಹಿಸಿದೆ"
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ (PC : PTI)
ಬೆಂಗಳೂರು : "ಕೇಂದ್ರದ ಬಿಜೆಪಿ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 7.52 ಹೆಚ್ಚಿಸುವ ಮೂಲಕ "ಇಂಧನ ಲೂಟಿ"ಯನ್ನು ಆರಂಭಿಸಿದೆ. ಕಳೆದ 11 ದಿನಗಳು ವೇತನ ವರ್ಗ, ರೈತರು, ಬಡವರು, ಗೃಹಿಣಿಯರು, ಸಣ್ಣ ಉದ್ಯಮಿಗಳು ಮತ್ತು ಜನಸಾಮಾನ್ಯರ ಜೇಬು ಹಾಗೂ ಬಜೆಟ್ ಪಾಲಿಗೆ ಅತ್ಯಂತ ವಿನಾಶಕಾರಿಯಾಗಿವೆ. ಬಿಜೆಪಿ ಸರಕಾರ ಕನ್ನಡಿಗರಿಗೆ ಮಾಡುತ್ತಿರುವ ವಂಚನೆ ಮತ್ತು ಸುಲಿಗೆ ಅಕ್ಷಮ್ಯ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಈ ಸಂಬಂಧ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಅತಿರೇಕದ ಲೂಟಿ ಮತ್ತು ಪಿಕ್‌ಪಾಕೆಟ್ ವಿರುದ್ಧ ಸಾಮಾನ್ಯ ಜನರು ವಿವಿಧ ರೂಪದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ಬಿಜೆಪಿ ನಾಯಕರು ಮತ್ತು ಮೋದಿ ಸರಕಾರವು ಜನರ ಸಂಕಷ್ಟವನ್ನು ಹಾಸ್ಯ ಮಾಡುತ್ತಾ, ಕನ್ನಡಿಗರು ಮತ್ತು ದೇಶದ ಜನರು ಎದುರಿಸುತ್ತಿರುವ ಜೀವನೋಪಾಯದ ಬಿಕ್ಕಟ್ಟಿಗೆ ಯಾವುದೇ ಸ್ಪಂದನೆ ನೀಡದೆ ಮೌನವಾಗಿದೆ ಎಂದು ಟೀಕಿಸಿದ್ದಾರೆ.
ಈ "ಜನರ ಲೂಟಿ" ಕೇವಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಗೃಹಬಳಕೆಯ ಗ್ಯಾಸ್, ವಾಣಿಜ್ಯ ಗ್ಯಾಸ್, ಸಣ್ಣ ಎಫ್‌ಟಿಎಲ್ ಸಿಲಿಂಡರ್ ಹಾಗೂ ಸಿಎನ್‌ಜಿ ಬೆಲೆಗಳ ಬಾರಿ ಏರಿಕೆ ಕಂಡಿದೆ. ಇದು ದೈನಂದಿನ ಬಳಕೆಯ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳ ಮೇಲೂ ತೀವ್ರ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಮೋದಿ ಸರಕಾರದ ಈ ಹಗಲು ದರೋಡೆಯು ಕೇವಲ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಮತ್ತು ಕಸ್ಟಮ್ಸ್ ಸುಂಕವನ್ನು ವಿಧಿಸುವ ಮೂಲಕ 43 ಲಕ್ಷ ಕೋಟಿ ಸಂಗ್ರಹಿಸಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ತುರ್ತು ಸಂದರ್ಭಗಳಲ್ಲಿ ದೇಶಕ್ಕೆ ನೆರವಾಗಲು ಇರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) "ತುರ್ತು ಮೀಸಲು ನಿಧಿ"ಯನ್ನು (Emergency Reserve Fund) ಲೂಟಿ ಮಾಡುವ ಹಂತಕ್ಕೂ ತಲುಪಿದೆ. ಮೇ 23 ರಂದು, ಅಂದರೆ 2 ದಿನಗಳ ಹಿಂದೆ, ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯವು ತೀವ್ರವಾಗಿ ಕುಸಿದಿರುವುದರ ಲಾಭವನ್ನು ಪಡೆದುಕೊಂಡು, ಆರ್‌ಬಿಐನ ಅಮೂಲ್ಯವಾದ "ವಿದೇಶಿ ವಿನಿಮಯ ಮೀಸಲು" ಅನ್ನು ಮಾರಾಟ ಮಾಡುವ ಮೂಲಕ ಮೋದಿ ಸರಕಾರವು ಆರ್‌ಬಿಐನಿಂದ 2.87 ಲಕ್ಷ ಕೋಟಿಯನ್ನು ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಕಳೆದ 12 ವರ್ಷಗಳಲ್ಲಿ, ಮೋದಿ ಸರಕಾರವು ಆರ್‌ಬಿಐನಿಂದಲೇ 14 ಲಕ್ಷ ಕೋಟಿಯನ್ನು ಸಂಗ್ರಹಿಸಿದೆ. ಇದು ಬಿಜೆಪಿ ಸರಕಾರ ನಡೆಸಿರುವ ಒಟ್ಟು 57 ಲಕ್ಷ ಕೋಟಿ (43 ಲಕ್ಷ ಕೋಟಿ + 14 ಲಕ್ಷ ಕೋಟಿ) ಲೂಟಿಯನ್ನು ಬಹಿರಂಗಪಡಿಸುತ್ತದೆ. ಕಳೆದ 12 ವರ್ಷಗಳಲ್ಲಿ ಮೋದಿ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಿರುವ ತೆರಿಗೆ ನೀತಿ ಹಾಗೂ ಸಾಮಾನ್ಯ ಜನರನ್ನು ವ್ಯವಸ್ಥಿತವಾಗಿ ಸುಲಿಗೆ ಮಾಡಿರುವುದು ಈ ಕೆಳಗಿನ ಅಂಶಗಳಿಂದ ಸ್ಪಷ್ಟವಾಗಿದೆ:-
► ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ವಿಧಿಸುವ ಮೂಲಕ 43 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಇದು 2014 ರಿಂದ ಪ್ರತಿದಿನ 1,000 ಕೋಟಿ ರೂಪಾಯಿಗಳ ಸಂಗ್ರಹಕ್ಕೆ ಸಮನಾಗಿರುತ್ತದೆ.
► ಮೇ 26, 2014 ರಂದು (ಕಾಂಗ್ರೆಸ್-ಯುಪಿಎ ಅವಧಿಯಲ್ಲಿ) ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 71.41 ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 56.71 ಆಗಿತ್ತು. ಆದರೆ ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 110.93 ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 98.89 ಕ್ಕೆ ಮಾರಾಟವಾಗುತ್ತಿದೆ. 2014 ರ ಕಚ್ಚಾ ತೈಲ ಬೆಲೆಗಳಿಗೆ (ಪ್ರತಿ ಬ್ಯಾರೆಲ್‌ಗೆ 108 ಯುಎಸ್‌ಡಿ) ಮತ್ತು ಪಶ್ಚಿಮ ಏಷ್ಯಾದಲ್ಲಿ ಯುದ್ಧ ಪ್ರಾರಂಭವಾಗುವ ಮುಂಚಿನ ಬೆಲೆಗೆ (ಪ್ರತಿ ಬ್ಯಾರೆಲ್‌ಗೆ 70 ಯುಎಸ್‌ಡಿ) ಹೋಲಿಸಿದರೆ, ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 61.60 ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 56.99 ಇರಬೇಕಾಗಿತ್ತು. ಉಳಿದ ಹೆಚ್ಚುವರಿ ಹಣವೆಲ್ಲವೂ ಬಿಜೆಪಿಯ ಸಂಪೂರ್ಣ ಲೂಟಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
► ಕಳೆದ 11 ದಿನಗಳಲ್ಲಿ ಬಿಜೆಪಿಯು ಸಾಮಾನ್ಯ ಜನರ ಮೇಲೆ 4 ಬಾರಿ ಬೆಲೆ ಏರಿಕೆಯ ದಾಳಿ ನಡೆಸಿದೆ:
• ಮೇ 15, 2026: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 3 ಹೆಚ್ಚಳ
• ಮೇ 19, 2026: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 90 ಪೈಸೆ ಹೆಚ್ಚಳ
• ಮೇ 23, 2026: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 91 ಪೈಸೆ ಹೆಚ್ಚಳ
• ಮೇ 25, 2026: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 2.71 ಹೆಚ್ಚಳ
• ಕಳೆದ 11 ದಿನಗಳಲ್ಲಿ ಪ್ರತಿ ಲೀಟರ್‌ಗೆ 7.52 ಹೆಚ್ಚಳವಾಗಿದೆ.
► ಮೇ 23, 2026 ರಂದು ಸಿಎನ್‌ಜಿ (CNG) ಬೆಲೆಯನ್ನು ಸಹ ಪ್ರತಿ ಕೆ.ಜಿಗೆ 1 ರಷ್ಟು ಹೆಚ್ಚಿಸಲಾಗಿದ್ದು, ಕಳೆದ 11 ದಿನಗಳಲ್ಲಿ ಒಟ್ಟು 4 ಹೆಚ್ಚಳವಾಗಿದೆ. ಇದರ ಪರಿಣಾಮವಾಗಿ ಇಂದು ಬೆಂಗಳೂರಿನಲ್ಲಿ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 90.10 ತಲುಪಿದೆ.
► 2014 ರಿಂದ 2025 ರವರೆಗೆ, ಮೋದಿ ಸರಕಾರವು ಪೆಟ್ರೋಲ್ ಮೇಲೆ ಸರಾಸರಿ 19.70 ಮತ್ತು ಡೀಸೆಲ್ ಮೇಲೆ 15.50 ಅಬಕಾರಿ ಸುಂಕವನ್ನು ವಿಧಿಸಿದೆ. ಇದು ಸಾಮಾನ್ಯ ಭಾರತೀಯರು ಪೆಟ್ರೋಲ್ ಬೆಲೆಯ 25% ಮತ್ತು ಡೀಸೆಲ್ ಬೆಲೆಯ 22.1% ರಷ್ಟನ್ನು ಮೋದಿ ಸರಕಾರದ ಖಜಾನೆಗೆ ತೆರಿಗೆ ರೂಪದಲ್ಲಿ ಸಂಗ್ರವಾಗುತ್ತಿದೆ. ಈ ಮೂಲಕ ಅತ್ಯಗತ್ಯ ಇಂಧನವನ್ನು ಲಾಭ ಗಳಿಸುವ ಸಾಧನವನ್ನಾಗಿ ಪರಿವರ್ತಿಸಲಾಗಿದೆ.
► ಮೋದಿ ಸರಕಾರವು ಅಬಕಾರಿ ಸುಂಕವನ್ನು 21 ಬಾರಿ ಪರಿಷ್ಕರಿಸಿದ್ದು, ಅದರಲ್ಲಿ 12 ಬಾರಿ ಬೆಲೆ ಹೆಚ್ಚಳ ಮಾಡಿದೆ. ಇದು "ಬೆಲೆಗಳನ್ನು ಕಡಿತಗೊಳಿಸುತ್ತೇವೆ" ಎಂದು ಹೇಳುತ್ತಲೇ ಸಾಮಾನ್ಯ ಜನರಿಂದ ಹಣವನ್ನು ದೋಚುವ ವ್ಯವಸ್ಥಿತ ಮಾದರಿಯನ್ನು ತೋರಿಸುತ್ತದೆ.
► ಮೇ 2014 ರಲ್ಲಿ (ಯುಪಿಎ ಅವಧಿಯಲ್ಲಿ) 412 ಇದ್ದ ಎಲ್‌ಪಿಜಿ ಸಿಲಿಂಡರ್ ಬೆಲೆ, ಮೇ 2026 ರಲ್ಲಿ (ಎನ್‌ಡಿಎ ಅವಧಿಯಲ್ಲಿ) 915.50 ಕ್ಕೆ ಏರಿಕೆಯಾಗಿದೆ. ಅಂದರೆ 12 ವರ್ಷಗಳಲ್ಲಿ 503.5 ರಷ್ಟು (ಸುಮಾರು 122.21%) ಭಾರಿ ಏರಿಕೆಯಾಗಿದೆ. 2013-14ರಲ್ಲಿ (ಯುಪಿಎ ಅವಧಿಯಲ್ಲಿ) ಅಂತರರಾಷ್ಟ್ರೀಯ ಎಲ್‌ಪಿಜಿ ಬೆಲೆ ಪ್ರತಿ ಮೆಟ್ರಿಕ್ ಟನ್‌ಗೆ ಸುಮಾರು 880.5 ಅಮೆರಿಕನ್ ಡಾಲರ್ ಆಗಿತ್ತು. ಆದರೆ ಮಾರ್ಚ್ 2026 ರಲ್ಲಿ (ಸೌದಿ ಸಿಪಿ ಪ್ರಕಾರ) ಇದು ಪ್ರತಿ ಮೆಟ್ರಿಕ್ ಟನ್‌ಗೆ ಸುಮಾರು 542.5 ಅಮೆರಿಕನ್ ಡಾಲರ್ ಆಗಿದೆ. ಅಂದರೆ ಈ ಅವಧಿಯಲ್ಲಿ ಬೆಲೆ 339 ಅಮೆರಿಕನ್ ಡಾಲರ್ ನಷ್ಟು (ಸುಮಾರು 38.5%) ಕಡಿಮೆಯಾಗಿದೆ.
► 2014 ರಲ್ಲಿ, ವಾಣಿಜ್ಯ ಸಿಲಿಂಡರ್ (Commercial LPG) ಬೆಲೆ 1,241 (ಪ್ರತಿ 19 ಕೆಜಿ ಸಿಲಿಂಡರ್‌ಗೆ) ಆಗಿತ್ತು. ಮೇ 2026 ರ ಪ್ರಸ್ತುತ ಬೆಲೆ ₹3,152 ಆಗಿದ್ದು, ಇದು ₹1,911 ರಷ್ಟು ಭಾರಿ ಏರಿಕೆಯಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿದ್ದರೂ, ಕಮರ್ಷಿಯಲ್ (ವಾಣಿಜ್ಯ) ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಮಾರ್ಚ್ 1 ರಿಂದ ಮೇ 25, 2026 ರ ನಡುವೆ 5 ಬಾರಿ ಹೆಚ್ಚಿಸಲಾಗಿದೆ:
• ಮಾರ್ಚ್ 1, 2026: ಸಿಲಿಂಡರ್ ಬೆಲೆಯಲ್ಲಿ 28 ಹೆಚ್ಚಳ
• ಮಾರ್ಚ್ 7, 2026: ಸಿಲಿಂಡರ್ ಬೆಲೆಯಲ್ಲಿ 114.50 ಹೆಚ್ಚಳ
• ಮಾರ್ಚ್ 23, 2026: ಸಿಲಿಂಡರ್ ಬೆಲೆಯಲ್ಲಿ 49 ಹೆಚ್ಚಳ
• ಏಪ್ರಿಲ್ 1, 2026: ಸಿಲಿಂಡರ್ ಬೆಲೆಯಲ್ಲಿ 195 ರಿಂದ 218 ರವರೆಗೆ ಹೆಚ್ಚಳ
• ಮೇ 1, 2026: ಸಿಲಿಂಡರ್ ಬೆಲೆಯಲ್ಲಿ 993 ರಷ್ಟು ಭಾರಿ ಹೆಚ್ಚಳ
ಮೋದಿ ಸರಕಾರ ಮತ್ತು ಬಿಜೆಪಿ ಈ ಇಂಧನ ಲೂಟಿಯನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಪೆಟ್ರೋಲ್, ಡೀಸೆಲ್, ಗೃಹಬಳಕೆಯ ಗ್ಯಾಸ್, ವಾಣಿಜ್ಯ ಗ್ಯಾಸ್, ಸಣ್ಣ ಸಿಲಿಂಡರ್, ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಗಳನ್ನು ಕೂಡಲೇ ಕಡಿತಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.