‘ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್’ ಬಗ್ಗೆ ಸಿಎಂ ಉತ್ತರ ಕೊಡಬೇಕು : ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ‘ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಸದಸ್ಯರ ಮೇಲೆ ನಡೆದಿರುವ ‘ಕುಟುಕು ಕಾರ್ಯಾಚರಣೆ’ಯ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉತ್ತರ ಕೊಡಬೇಕಾಗುತ್ತದೆ. ಅಲ್ಲದೆ, ಈ ಕುರಿತು ಸೂಕ್ತ ರೀತಿಯಲ್ಲಿ ತನಿಖೆ ಮಾಡಿಸಬೇಕಾಗುತ್ತದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರ ಅಧಿಕಾರದಲ್ಲಿದೆ. ಅವರದ್ದೇ ಪೊಲೀಸ್ ವ್ಯವಸ್ಥೆ ಇದೆ. 35ಲಕ್ಷ ರೂ. ಬಹುಮಾನ ಪಡೆದ ಅವರದ್ದೆ ಅತ್ಯಂತ ದಕ್ಷ ಎಸ್‍ಐಟಿ ತಂಡ ಇದೆ. ಹೀಗಿದ್ದರೂ ನೀವು ತನಿಖೆಗೆ ಏಕೆ ಹಿಂಜರಿಯುತ್ತಿದ್ದೀರಿ’ ಎಂದು ಪ್ರಶ್ನಿಸಿದರು.
‘ಒಂದು ವೇಳೆ ಆ ಐದು ಜನ ಮಂತ್ರಿಗಳ ಮೇಲೆ ಕುಟುಕು ಕಾರ್ಯಾಚರಣೆ ನಡೆದಿದ್ದರೆ ಅವರನ್ನು ಇನ್ನೂ ಸಂಪುಟದಲ್ಲಿ ಯಾಕೆ ಇಟ್ಟುಕೊಂಡಿದ್ದೀರಿ?. ಆ ಐವರು ಸಚಿವರನ್ನು ನಿಮ್ಮ ವಿರುದ್ಧ ಸ್ಟಿಂಗ್ ಆಗಿದೆ ಎಂದು ಬ್ಲಾಕ್‍ಮೇಲ್ ಮಾಡುವ ಮುನ್ನ ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜ್ ಪಕ್ಕದ ಪಂಚತಾರಾ ಹೋಟೆಲ್‍ನಲ್ಲಿ ಸ್ಟಿಂಗ್ ಮಾಡುವ ವ್ಯಕ್ತಿಯೊಂದಿಗೆ ಗಂಟೆಗಟ್ಟಲೆ ಚರ್ಚೆ ನಡೆಸಿದ್ದರು ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಆ ಹೋಟೆಲ್‍ನಲ್ಲಿ ಸಿಎಂ ಯಾರೊಂದಿಗೆ ಕೂತಿದ್ದರು? ಆ ವ್ಯಕ್ತಿ ಯಾರು? ಆ ವ್ಯಕ್ತಿಯ ಜತೆ ಈ ಸಿಎಂಗೆ ಏನು ಸಂಬಂಧ?. ಆ ವ್ಯಕ್ತಿಯನ್ನು ಇಟ್ಟುಕೊಂಡು ಸಿಎಂ ಯಾರ ಯಾರ ವಿರುದ್ಧ ಸ್ಟಿಂಗ್ ಮಾಡಿಸಿದ್ಧರು ಎಂಬುದನ್ನು ಡಿಕೆಶಿ ಅವರು ರಾಜ್ಯದ ಜನರಿಗೆ ಹೇಳಬೇಕಾಗುತ್ತದೆ. ‘ನನ್ನ ವಿರುದ್ಧವೇ ಸ್ಟಿಂಗ್ ನಡೆದಿದೆ’ ಎಂದು ಸಿಎಂ ಹೇಳಿದ್ದಾರೆ. ಅಲ್ಲಿಗೆ ರಾಜ್ಯದಲ್ಲಿ ಕಿಂಗ್ ಅಪರೇಷನ್ ನಡೆಯುತ್ತಿದೆ ಎಂದು ಸ್ವತಃ ಅವರೇ ಒಪ್ಪಿಕೊಂಡಂತೆ ಆಯಿತು ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯದಲ್ಲಿ ಏನು ನಡೆಯುತ್ತಿದೆ ಎನ್ನುವುದು ಜನತೆಯ ಮುಂದೆ ಸಿಎಂ ಇಡಬೇಕು. ಅಲ್ಲದೆ, ಕಾಂಗ್ರೆಸ್ ನಾಯಕರೊಬ್ಬರ ವಿರುದ್ಧ ನಡೆದಿರುವ ಸ್ಟಿಂಗ್ ಆಪರೇಷನ್ ಆಗಿದೆ ಎನ್ನುವ ವಿಚಾರ ಹಾಗೆಯೇ ಸೈಲೆಂಟ್ ಆಯಿತು?. ಆ ಸ್ಟಿಂಗ್‍ನಲ್ಲಿ ಸಿಎಂ ಕೂರಿಸಿಕೊಂಡು ಮಾತನಾಡಿರುವ ವ್ಯಕ್ತಿಯ ಪಾತ್ರವೇನು? ಎಂಬುದು ಹೊರಗೆ ಬರಬೇಕಲ್ಲವೇ? ಎಂದು ಅವರು ಕೇಳಿದರು.
ಗೃಹ ಸಚಿವರು ‘ಸ್ಟಿಂಗ್ ಆಪರೇಷನ್ ಬಗ್ಗೆ ದೂರು ಕೊಡಲಿ’ ಎಂದು ಬೇರೆ ಹೇಳಿದ್ದಾರೆ. ಎಷ್ಟು ಕೇಸ್‍ಗಳಲ್ಲಿ ದೂರನ್ನೇ ಕೊಡದೇ ತನಿಖೆಗೆ ಅವಕಾಶ ಆದೇಶ ನೀಡಿಲ್ಲವೇ?. ಜನತೆಗೆ ಅನುಮಾನ ಬರುವ ರೀತಿಯಲ್ಲಿ ಸಿಎಂ ಅವರೇ ವೇದಿಕೆ ಸಿದ್ದ ಮಾಡಿ ಕೊಟ್ಡಿದ್ದಾರೆ. ಸಂಪುಟದಲ್ಲಿ ಪ್ರಮುಖ ವಿಚಾರ ಪ್ರಸ್ತಾಪ ಮಾಡಿದ್ದಾರೆಂದು ಸುದ್ದಿವಾಹಿನಿಯಲ್ಲಿ ಸುದ್ದಿ ಹೊರಕ್ಕೆ ಬಂತು. ಸ್ಟಿಂಗ್ ಬಗ್ಗೆ ಸಚಿವರಿಗೆ ಹೆದರಿಸಿದ್ದು ಮಾತ್ರವಲ್ಲದೆ ಸಂಪುಟ ಸಭೆಗೆ ಹೋಗುವಾಗ ಸಿಎಂ ಆಪ್ತ ಸಹಾಯಕರು ಸ್ಟಿಂಗ್ ಆಪರೇಷನ್ ಬಗ್ಗೆ ಮಾಹಿತಿಗಳ ಫೈಲ್ ಹಿಡಿದುಕೊಂಡು ಹೋಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಜಿಲ್ಲಾಧಿಕಾರಿ ವಿರುದ್ಧ ಕಿಡಿ: ‘ಜಿಲ್ಲಾಧಿಕಾರಿಯಾದ ತಕ್ಷಣ ತಲೆಯ ಮೇಲೆ ಎರಡು ಕೊಂಬು ಇದೆಯಾ?. ಸ್ವಲ್ಪ ಎಚ್ಚರಿಕೆ ಇರಲಿ. ನಾನು ಸುಮ್ಮನೆ ಮಾತಾಡೋದಿಲ್ಲ. ಒಬ್ಬ ಎಸ್ಪಿಗೆ ನೋಟಿಸ್ ಕೊಡುತ್ತಾರೆ ಎಂದರೆ ಏನರ್ಥ? ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೂ ಒಬ್ಬ ಹೆಣ್ಣು ಮಗಳು. ಜಿಲ್ಲಾಧಿಕಾರಿ ಏನು ಪಾಳೆಗಾರರಾ?, ಪರಿಮಿತಿಯಲ್ಲಿ ಕೆಲಸ ಮಾಡಬೇಕು ಅಷ್ಟೇ’ ಎಂದು ಕುಮಾರಸ್ವಾಮಿ ಎಚ್ಚರಿಸಿದರು.