ಮೈಸೂರು: ಮೈಸೂರು ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ, ಸ್ವಚ್ಛತೆ ಮತ್ತು ಶಿಸ್ತಿಗೆ ಹೆಸರಾದ ನಗರ. ಇಂತಹ ಐತಿಹಾಸಿಕ ನಗರದಲ್ಲಿ ನಡೆಯುವ ದಸರಾ ಮಹೋತ್ಸವದ ವೈಭವದ ಹಿಂದೆ ಸಾವಿರಾರು ಕಾಣದ ಕೈಗಳ ಪರಿಶ್ರಮವಿದೆ. ಒಂದು ಕಾಲದಲ್ಲಿ ದೊರೆಯ ಹಬ್ಬವಾಗಿದ್ದ ದಸರಾ ಇಂದು ಧರೆಯ ಹಬ್ಬವಾಗಿ ಜನಸಾಮಾನ್ಯರ ಉತ್ಸವವಾಗಿದೆ ಎಂದು ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ.

2026ರ ಮೈಸೂರು ದಸರಾ ಮಹೋತ್ಸವವನ್ನು ರವಿವಾರ ಉದ್ಘಾಟಿಸಿ ಮಾತನಾಡಿದ ಅವರು, “ನಾನು ದಸರಾ ಉದ್ಘಾಟಿಸುವಷ್ಟು ದೊಡ್ಡವನಲ್ಲ. ಮಹಾನುಭಾವರು ಹಚ್ಚಿದ ದೀಪ ಆರದಿರಲಿ ಎಂಬ ಪ್ರಾರ್ಥನೆಯೊಂದಿಗೆ ಚಾಮುಂಡೇಶ್ವರಿಯ ಸನ್ನಿಧಿಗೆ ಬಂದಿದ್ದೇನೆ. ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ರೈತರ ಮುಖದಲ್ಲಿ ನಗು ಮೂಡಲಿ, ಜನರು ಸುಖ-ಶಾಂತಿಯಿಂದ ಬದುಕಲಿ ಎಂದು ತಾಯಿಯಲ್ಲಿ ಪ್ರಾರ್ಥಿಸುತ್ತೇನೆ” ಎಂದರು.

ಜಾತಿಗಿಂತ ನೀತಿ ಮುಖ್ಯ

ಮೈಸೂರಿನ ದಸರಾ ಭೂತ, ವರ್ತಮಾನ ಮತ್ತು ಭವಿಷ್ಯಗಳ ತ್ರಿವೇಣಿ ಸಂಗಮವಾಗಿದೆ. ಜಾತಿಯನ್ನು ನೋಡಿ ಸಮಾಜವನ್ನು ಕಟ್ಟುವುದಕ್ಕಿಂತ ನೀತಿಯನ್ನು ಆಧಾರವಾಗಿಟ್ಟುಕೊಂಡು ಸಮಾಜವನ್ನು ನಿರ್ಮಿಸಬೇಕು. ಮನುಷ್ಯನನ್ನು ಮನುಷ್ಯನಂತೆ ಪ್ರೀತಿಸುವುದೇ ನಿಜವಾದ ಮಾನವ ಧರ್ಮ. ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಾರಿದ ‘ಕಾಯಕವೇ ಕೈಲಾಸ’ ಎಂಬ ತತ್ವ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.

ಮೈಸೂರು ರಾಜಮನೆತನದ ಕೊಡುಗೆ ಸ್ಮರಣೀಯ

ಮೈಸೂರು ರಾಜಮನೆತನದ ಕೊಡುಗೆಯನ್ನು ಸ್ಮರಿಸಿದ ಸ್ವಾಮೀಜಿ, ಮೈಸೂರು ದಸರಾ ಪರಂಪರೆಯನ್ನು ರಾಜಮನೆತನದ ಇತಿಹಾಸದಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಿದ ಹಾಗೂ ರೈತರ ಬದುಕು ಹಸನಾಗಲು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಮಹನೀಯರ ಕೊಡುಗೆ ನಾಡಿನ ಪ್ರಗತಿಗೆ ಮಹತ್ವದ್ದಾಗಿದೆ. ರಾಣಿ ಕೆಂಪರಾಜಮ್ಮ ತಮ್ಮ ಆಭರಣಗಳನ್ನು ಒತ್ತೆಯಿಟ್ಟು ಅಣೆಕಟ್ಟು ನಿರ್ಮಾಣಕ್ಕೆ ನೆರವು ನೀಡಿದ ತ್ಯಾಗದ ಪರಂಪರೆ ನಮಗೆಲ್ಲ ಪ್ರೇರಣೆಯಾಗಿದೆ ಎಂದರು.

ಶಿವಕುಮಾರ ಸ್ವಾಮೀಜಿಯ ಸೇವೆ ಮಾದರಿ

ಕನ್ನಡ ನಾಡಿನ ಜನರು ಸಾಧುಸಂತರಿಗೆ ಗೌರವ ನೀಡುವವರು, ವೀರರಿಗೆ ವೀರರಾಗಿರುವವರು ಹಾಗೂ ಪ್ರೀತಿಗೆ ಪ್ರೀತಿಯಿಂದಲೇ ಪ್ರತಿಕ್ರಿಯಿಸುವವರು. ಹತ್ತು ಮಕ್ಕಳನ್ನು ಸಾಕುವುದೇ ಕಷ್ಟವಾಗಿದ್ದ ಕಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನದಾಸೋಹ ನೀಡಿದ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಯ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಕರ್ನಾಟಕವನ್ನು ರೈತರ ಬೆವರು, ಕಾರ್ಮಿಕರ ದುಡಿಮೆ, ವಿಜ್ಞಾನಿಗಳ ಜ್ಞಾನ ಮತ್ತು ಸಾಧುಸಂತರ ಪ್ರಾರ್ಥನೆಗಳು ರೂಪಿಸಿವೆ ಎಂದು ತಿಳಿಸಿದರು.

ತಂತ್ರಜ್ಞಾನದಿಂದ ಅನ್ನವನ್ನು ಸೃಷ್ಟಿಸಲು ಸಾಧ್ಯವಿಲ್ಲ

ಇಂದು ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಎಲ್ಲವನ್ನೂ ಡೌನ್ ಲೋಡ್ ಮಾಡಬಹುದು; ಆದರೆ ಅನ್ನ ಮತ್ತು ಸಾರನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ರೈತರು ಬೆಳೆದ ಬೆಳೆಗಳಿಂದಲೇ ನಮಗೆ ಆಹಾರ ದೊರೆಯುತ್ತದೆ. ಹೀಗಾಗಿ ರೈತರ ಶ್ರಮವನ್ನು ಗೌರವಿಸಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ಕಾವೇರಿ, ಕೃಷ್ಣೆ, ತುಂಗಭದ್ರೆಯಂತಹ ನದಿಗಳು ಬತ್ತಿಹೋದರೆ ಜನಜೀವನ ಸಂಕಷ್ಟಕ್ಕೆ ಸಿಲುಕುತ್ತದೆ. ಆದ್ದರಿಂದ ಸರ್ಕಾರಗಳು ನದಿಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ನೆಲ, ಜಲ ಮತ್ತು ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದೇವರ ಮುಂದೆ ಲಕ್ಷ ದೀಪಗಳನ್ನು ಹಚ್ಚುವುದರ ಜೊತೆಗೆ ಒಂದು ವೃಕ್ಷವನ್ನು ನೆಟ್ಟು ಬೆಳೆಸಿದರೆ ಅದು ಪ್ರಕೃತಿಗೆ ಸಲ್ಲಿಸುವ ನಿಜವಾದ ಸೇವೆಯಾಗುತ್ತದೆ ಎಂದು ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸಿದರು.

ಮೈಸೂರು ದಸರಾ ಕೇವಲ ಉತ್ಸವವಲ್ಲ; ಅದು ನಾಡಿನ ಸಂಸ್ಕೃತಿ, ಪರಂಪರೆ, ಮಾನವೀಯತೆ ಮತ್ತು ಸಾಮರಸ್ಯದ ಸಂಕೇತವಾಗಿದೆ. ರೈತರ ಬದುಕು ಹಸನಾಗಬೇಕು, ಪರಿಸರ ಸಂರಕ್ಷಿಸಲ್ಪಡಬೇಕು, ಶಿಕ್ಷಣ ಎಲ್ಲರಿಗೂ ದೊರೆಯಬೇಕು ಹಾಗೂ ಸಮಾಜದಲ್ಲಿ ಪ್ರೀತಿ ಮತ್ತು ಸಹಬಾಳ್ವೆ ಬೆಳೆಯಬೇಕು. ಕರ್ನಾಟಕದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡುವ ಸಂಕಲ್ಪ ಮಾಡಬೇಕು ಎಂದು ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿ ಕರೆ ನೀಡಿದರು.

ಶಿಕ್ಷಣದ ಅಭಿವೃದ್ಧಿಗೆ ಹರೇಕಳ ಹಾಜಬ್ಬರ ಸಾಧನೆ ಪ್ರೇರಣೆಯಾಗಲಿ

ಹಣ್ಣು ಮಾರಾಟ ಮಾಡುತ್ತಲೇ ಶಾಲೆ ನಿರ್ಮಿಸಿ ಮಕ್ಕಳ ಶಿಕ್ಷಣಕ್ಕೆ ನೆರವಾದ ಪದ್ಮಶ್ರೀ ಹರೇಕಳ ಹಾಜಬ್ಬರ ಸಾಧನೆಯನ್ನು ಸ್ಮರಿಸಿದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ, ಅವರಿಂದ ಪ್ರೇರಣೆ ಪಡೆದು ಪ್ರತಿಯೊಬ್ಬರೂ ತಮ್ಮ ಊರಿನ ಶಾಲೆಗಳ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಶಿಕ್ಷಣದ ಬೆಳವಣಿಗೆಯೇ ಸಮಾಜದ ಪ್ರಗತಿಗೆ ಭದ್ರ ಬುನಾದಿಯಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor