ಸಾಂದರ್ಭಿಕ ಚಿತ್ರ

ಬೆಂಗಳೂರು : ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ-ಸೆಟ್ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವು ಅ.11ರಂದು ನಡೆಸಲಿದ್ದು, ಒಟ್ಟು 37 ವಿವಿಧ ವಿಷಯಗಳಿಗೆ ನಡೆಯುವ ಪರೀಕ್ಷೆಗೆ 1,29,212 ಮಂದಿ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದೆ.

ಶನಿವಾರ ಈ ಸಂಬಂಧ ಮಾಧ್ಯಮ ಪ್ರಕಟನೆ ನೀಡಿರುವ ಕೆಇಎ, ಬೆಂಗಳೂರು ಉತ್ತರ ಮತ್ತು ದಕ್ಷಿಣ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ ಸೇರಿ 11 ಜಿಲ್ಲೆಗಳ 326 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಎಲ್ಲ 37 ವಿಷಯಗಳ ಪರೀಕ್ಷೆ ನಡೆದರೆ, ಉಳಿದ ಜಿಲ್ಲೆಗಳಲ್ಲಿ 13 ವಿಷಯಗಳ ಪರೀಕ್ಷೆಗಳು ಮಾತ್ರ ನಡೆಯಲಿವೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಪರೀಕ್ಷೆ ನಡೆಯಲಿದ್ದು, ಒಮ್ಮೆಲೆ ಎರಡೂ ಪತ್ರಿಕೆಗಳ(ಪತ್ರಿಕೆ 1/2) ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಮೂರು ಗಂಟೆ ಅವಧಿಯಲ್ಲಿ 100 ಅಂಕಗಳ ಸಾಮಾನ್ಯ ಜ್ಞಾನ ಮತ್ತು 200 ಅಂಕಗಳ ವಿಷಯವಾರು ಪತ್ರಿಕೆಗಳಿಗೆ ಉತ್ತರಿಸಬೇಕಾಗುತ್ತದೆ. ಎರಡೂ ಪತ್ರಿಕೆಗಳಿಗೆ ಪ್ರತ್ಯೇಕ ಓಎಂಆರ್ ನೀಡುತ್ತಿದ್ದು, ಆಯಾ ಓಎಂಆರ್ ನಲ್ಲೇ ಅವುಗಳ ಉತ್ತರಗಳನ್ನು ಎಚ್ಚರಿಕೆಯಿಂದ ದಾಖಲಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಸಲಹೆ ನೀಡಿದ್ದಾರೆ.

ಪರೀಕ್ಷೆ ಬರೆಯುವವರು ವಸ್ತ್ರ ಸಂಹಿತೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರಗಳ ಪ್ರವೇಶಕ್ಕೂ ಮುನ್ನ ಅಭ್ಯರ್ಥಿಗಳನ್ನು ಮುಖ ಚಹರೆ ಪತ್ತೆ ಮೂಲಕ ಶೋಧ ನಡೆಸಿ ನಂತರ ಒಳಗೆ ಬಿಡಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪೊಲೀಸ್ ಮತ್ತು ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಲಿದೆ ಎಂದು ಎಚ್.ಪ್ರಸನ್ನ ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor