ಎಸ್‍ಐಆರ್ : ಬೂತ್ ಮಟ್ಟದಲ್ಲಿಯೇ ಸಹಾಯ ಕೇಂದ್ರ ಆರಂಭಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ
ಬೆಂಗಳೂರು : ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‍ಐಆರ್)ಸಂಬಂಧ ಪ್ರತಿಯೊಂದು ಬೂತ್ ಮಟ್ಟದಲ್ಲಿ ಸಹಾಯ ಕೇಂದ್ರ ಆರಂಭ ಮಾಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಗುರುವಾರ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸರಕಾರದ ಎಲ್ಲ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ‘ಎಸ್‍ಐಆರ್ ಕಾರ್ಯ ಈಗಾಗಲೇ ನಮ್ಮ ರಾಜ್ಯದಲ್ಲಿ ಪ್ರಾರಂಭವಾಗಿದೆ. ಈ ಕಾರ್ಯವನ್ನು ಎಲ್ಲ ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ತಮ್ಮ ಕೆಳಹಂತದ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.
ಜನರಿಗೆ ನೆರವಾಗಲು ಬೂತ್ ಹಂತದಲ್ಲಿ ಸಹಾಯ ಕೇಂದ್ರ ಪ್ರಾರಂಭಿಸಬೇಕು. ಜನರು ಅಗತ್ಯ ದಾಖಲೆಗಳನ್ನು ಪಡೆಯಲು ಸೂಕ್ತ ನೆರವು ಒದಗಿಸಬೇಕು. ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಿವಕುಮಾರ್, ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಳಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರಕಾರಿ ಅಧಿಕಾರಿ, ಸಿಬ್ಬಂದಿ ಸರಕಾರವನ್ನು ಪ್ರತಿನಿಧಿಸುತ್ತಾರೆ. ಹಾಗಾಗಿ, ಜನರಲ್ಲಿ ವಿಶ್ವಾಸ ಮೂಡಿಸುವ ಕಾರ್ಯವನ್ನು ತಳಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮಾಡಬೇಕು. ನಾವೆಲ್ಲರೂ ಒಂದು ತಂಡವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯವಿದೆ. ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಮಾಡಬೇಕು. ಇದನ್ನು ಖಾತ್ರಿಪಡಿಸಲು ಯಾವ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬ ಬಗ್ಗೆ ಮುಖ್ಯ ಕಾರ್ಯದರ್ಶಿ ವರದಿ ಸಲ್ಲಿಸಬೇಕು ಎಂದು ಶಿವಕುಮಾರ್ ಸೂಚಿಸಿದರು.
ರಾಜ್ಯದ ಅಧಿಕಾರಿಗಳಿಗೆ ದೇಶದಲ್ಲಿಯೇ ಅತ್ಯುತ್ತಮ ಅಧಿಕಾರಿಗಳೆಂದು ಹೆಸರು ಇದೆ. ನಾವು ಅಧಿಕಾರದ ಅವಧಿಯಲ್ಲಿ ಏನು ಸಾಕ್ಷಿ ಗುಡ್ಡೆ ಉಳಿಸಿ ಹೋಗಿದ್ದೇವೆ ಎಂಬುವುದು ಮುಖ್ಯ. ಪ್ರತಿಯೊಬ್ಬರೂ ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಬೇಕು. ಯಾವುದೋ ಒತ್ತಡಗಳಿಗೆ ಮಣಿದು ಕಾನೂನು ಬಾಹಿರ ಕಾರ್ಯಗಳಿಗೆ ಒತ್ತಾಸೆ ನೀಡಬೇಡಿ. ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೆ ನೇರವಾಗಿ ನನಗೆ ಮತ್ತು ನನ್ನ ಸಚಿವರಿಗೆ ತಿಳಿಸಿ. ಆದರೆ, ಸಕಾರಾತ್ಮಕ ಧೋರಣೆಯನ್ನು ಹೊಂದುವ ಮೂಲಕ ಜನರ ಸಮಸ್ಯೆಗಳನ್ನು ಬಗೆಹರಿಸಲು ದಾರಿ ಕಂಡುಕೊಳ್ಳುವ ಮನೋಭಾವ ಮುಖ್ಯವಾಗಿದೆ ಎಂದು ಅವರು ಹೇಳಿದರು.
ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ತಾಲೂಕು ಮಟ್ಟಕ್ಕೆ ತೆರಳಿ ಜನರ ಅಹವಾಲುಗಳನ್ನು ಆಲಿಸುವ ಮತ್ತು ಪರಿಹರಿಸುವ ಕಾರ್ಯವನ್ನು ಮಾಡಬೇಕು. ಈ ಕುರಿತು ವರದಿಯನ್ನು ನೇರವಾಗಿ ನನ್ನ ಗಮನಕ್ಕೆ ತರಬೇಕು. ಜನರ ಮನೆ ಬಾಗಿಲಿಗೆ ಆಡಳಿತವನ್ನು ತಲುಪಿಸುವ ಕಾರ್ಯವನ್ನು ವ್ಯವಸ್ಥಿತವಾಗಿ ಕೈಗೊಳ್ಳಬೇಕು.ಎಲ್ಲ ಸಚಿವರು ಸಹ ತಾಲೂಕುಗಳಿಗೆ ನಿರಂತರ ಭೇಟಿ ನೀಡಿ ಜನರ ಅಹವಾಲುಗಳನ್ನು ನೇರವಾಗಿ ಸ್ವೀಕರಿಸಲಿದ್ದಾರೆ ಎಂದ ಅವರು, ಹೊಸದಿಲ್ಲಿಯಲ್ಲಿರುವ ನಮ್ಮ ರಾಜ್ಯದ ಅಧಿಕಾರಿಗಳು, ರಾಜ್ಯದ ಯೋಜನೆಗಳ ಅನುಷ್ಠಾನಕ್ಕೆ ಗರಿಷ್ಠ ಪ್ರಯತ್ನ ಮಾಡಬೇಕು ಎಂದು ಅವರು ಸೂಚನೆ ನೀಡಿದರು.
ಬಜೆಟ್‍ನ ಎಲ್ಲ ಅಂಶಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕಾರ್ಯ ಆಗಬೇಕು. ಗ್ರಾಮೀಣ ಆರ್ಥಿಕತೆ ಕಡಿಮೆಯಾಗುತ್ತಿದ್ದು, ನಗರದತ್ತ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಗಂಭೀರ ಬೆಳವಣಿಗೆಯಾಗಿದೆ. ಗ್ರಾಮೀಣ ಆರ್ಥಿಕತೆ ಹೆಚ್ಚಿಸಲು ಒತ್ತು ನೀಡುವುದು ನಮ್ಮ ಆದ್ಯತೆಯಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಸುಧಾರಿಸುವ ಕಾರ್ಯ ಮಾಡಬೇಕಾಗಿದೆ. ರಾಜ್ಯದಲ್ಲಿ ಪ್ರಸ್ತುತ 50 ಸಾವಿರ ಶಿಕ್ಷಕರ ಕೊರತೆಯಿದೆ. ಶಿಕ್ಷಕರನ್ನು ಹಂತ ಹಂತವಾಗಿ ನೇಮಕ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಬೆಂಗಳೂರಿನಲ್ಲಿ 26 ಲಕ್ಷ ಐಟಿ ವೃತ್ತಿಪರರು ಇದ್ದಾರೆ. ನಮ್ಮ ರಾಜ್ಯದಲ್ಲಿ 70 ವೈದ್ಯಕೀಯ ಕಾಲೇಜುಗಳಿವೆ. ಇಂದು ಹಲವು ವಿಷಯಗಳಲ್ಲಿ ಇಡೀ ವಿಶ್ವ ಬೆಂಗಳೂರಿನ ಕಡೆಗೆ ನೋಡುತ್ತಿದೆ. ನಮ್ಮಲ್ಲಿರುವ ಮಾನವ ಸಂಪನ್ಮೂಲ, ಇಲ್ಲಿನ ಹವಾಮಾನ ದೇಶದಲ್ಲಿಯೇ ಅತ್ಯುತ್ತಮವಾಗಿದೆ. ಇಂತಹ ಬೆಂಗಳೂರಿನ ಪ್ರಗತಿಗೆ ನಮ್ಮ ಕೊಡುಗೆ ಏನು ಎಂದು ಪ್ರತಿಯೊಬ್ಬರೂ ಆತ್ಮ ವಿಮರ್ಶೆ ಮಾಡಬೇಕು.
ಇದುವರೆಗೆ ವಿದ್ಯಾರ್ಥಿನಿಯರಿಗೆ ಮಾತ್ರ ಸೀಮಿತವಾಗಿ ಉಚಿತ ಬಸ್ ಪಾಸ್ ಸೌಲಭ್ಯವನ್ನು ಎಲ್ಲ ವಿದ್ಯಾರ್ಥಿಗಳಿಗೆ ವಿಸ್ತರಿಸುವ ನಿರ್ಣಯವನ್ನು ಈಗಾಗಲೇ ನಾವು ಕೈಗೊಂಡಿದ್ದೇವೆ. ಇದನ್ನು ಸಮಪರ್ಕವಾಗಿ ಅನುಷ್ಠಾ ನಗೊಳಿಸುವ ಕಾರ್ಯವನ್ನು ಪ್ರಾರಂಭಿಸಬೇಕು ಎಂದು ಶಿವಕುಮಾರ್ ತಿಳಿಸಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ರಾಮಲಿಂಗಾರೆಡ್ಡಿ, ಯು.ಟಿ.ಖಾದರ್, ಈಶ್ವರ್ ಖಂಡ್ರೆ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
‘ಎಸ್‍ಐಆರ್‌ನಿಂದ ಯಾರ ಮತದಾನದ ಹಕ್ಕು ಹೋಗಬಾರದು’: ‘ಇದೀಗ ಎಸ್‍ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಯಾವುದೇ ವ್ಯಕ್ತಿ ಎಸ್‍ಐಆರ್ ನಲ್ಲಿ ಮತದಾನದ ಹಕ್ಕು ಕಳೆದುಕೊಳ್ಳುವಂತೆ ಆಗಬಾರದು. ಸಿಎಂ ಹಾಗೂ ಡಿಸಿಎಂ ಸೇರಿದಂತೆ ಎಲ್ಲ ಮತದಾರರು ಎನ್ಯುಮರೇಷನ್ ಅರ್ಜಿ ತುಂಬಿ, ಸಹಿ ಹಾಕಿ, ದಾಖಲೆ ಸಮೇತ ಸಲ್ಲಿಕೆ ಮಾಡಬೇಕು. ಇಲ್ಲವಾದರೆ ಮತದಾನದ ಹಕ್ಕು ಕಳೆದುಕೊಳ್ಳುತ್ತಾರೆಂದು ಜಾಗೃತಿ ಮೂಡಿಸಬೇಕು. ಇದಕ್ಕೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲು ನಿರ್ದೇಶನ ನೀಡಿರುವೆ’
-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ