×
Ad

Tumakur | ಎರಡು ಕಾರುಗಳ ನಡುವೆ ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತ್ಯು

Update: 2026-06-04 19:22 IST

ಹುಳಿಯಾರು : ಇನ್ನೋವಾ ಮತ್ತು ಓಮ್ನಿ ಕಾರಿನ ನಡುವೆ ಅಪಘಾತವಾಗಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ  ಮೃತಪಟ್ಟಿರುವ ಘಟನೆ ಹುಳಿಯಾರು ಸಮೀಪದ ಕೆಂಕೆರೆ ಗೊಲ್ಲರಹಟ್ಟಿ ಗೇಟ್ ಬಳಿ ಗುರುವಾರ ನಡೆದಿದೆ.

ಮೃತರನ್ನು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೆಂಗೆರಿಪಾಳ್ಯದ ನಿವಾಸಿಗಳಾದ ಸೌಮ್ಯ (39), ಗಂಗೇಶ್ವರ ರೆಡ್ಡಿ (68) ಹಾಗೂ ಇಂದಿರಮ್ಮ (65) ಎಂದು ಗುರುತಿಸಲಾಗಿದೆ.

ಸಾಫ್ಟವೇರ್ ಎಂಜಿನಿಯರ್ ರವಿಕುಮಾರ್ ತನ್ನ ಪತ್ನಿ ಸೌಮ್ಯ, ಮಾವ ಗಂಗೇಶ್ವರ ರೆಡ್ಡಿ, ಅತ್ತೆ ಇಂದಿರಮ್ಮ ಅವರನ್ನು ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡು ಮೈಸೂರಿನಿಂದ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದರು. ಹುಳಿಯಾರಿನಿಂದ ಪುರದಮಠದ ಕಡೆ ಹೋಗುತ್ತಿದ್ದ ಓಮ್ನಿ ಕಾರು ಇದ್ದಕ್ಕಿದ್ದ ಹಾಗೆ ಹುಳಿಯಾರಿಗೆ ವಾಪಸ್ ಆಗಲು ತಿರುಗಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಹಿಂಭಾಗದಲ್ಲೇ ವೇಗವಾಗಿ ಬರುತ್ತಿದ್ದ ಇನ್ನೋವಾ ಕಾರು ಓಮ್ನಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ನಿಯಂತ್ರಣ ತಪ್ಪಿದ ಇನ್ನೋವಾ ಕಾರು ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಓಮ್ನಿ ಮತ್ತು ಇನ್ನೋವಾ ಎರಡು ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕುಟುಂಬದ ಮಕ್ಕಳಾದ ಚರಿತ (6) ಮತ್ತು ಚಾರ್ವಿ (10) ಅವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ನಿಮ್ಹಾನ್ಸ್ ರವಾನಿಸಲಾಗಿದೆ. ವಾಹನ ಚಲಾಯಿಸುತ್ತಿದ್ದ ಕುಟುಂಬದ  ರವಿ ಕುಮಾರ್ ರೆಡ್ಡಿ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓಮ್ನಿ ಚಾಲಕ ಯಳನಾಡು ಸಿದ್ದು ಅವರಿಗೆ ಕಾಲು ಮುರಿದಿದ್ದು ತುಮಕೂರು ಆಸ್ಪತ್ರೆಗೆ ರವಾನಿಸಲಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಡಿಷನಲ್‍ಎಸ್‍ಪಿ ಗೋಪಾಲ್, ಡಿವೈಎಸ್‍ಪಿ ಉಮೇಶ್, ಇನ್ಸ್‌ ಪೆಕ್ಟರ್ ಜನಾರ್ಧನ್ ಹಾಗೂ ಹಂದನಕೆರೆ ಪಿಎಸ್‍ಐ ಚಿತ್ತರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News