SIR | ʼಭಾರತ ರತ್ನʼ ಪ್ರೊ.ಸಿ.ಎನ್.ಆರ್ ರಾವ್ ಅವರಿಗೆ ಯಾವುದೇ ನೋಟಿಸ್ ಜಾರಿ ಮಾಡಿಲ್ಲ : ಚುನಾವಣಾಧಿಕಾರಿ ಸ್ಪಷ್ಟನೆ
ಸಿಎನ್ಆರ್ ರಾವ್ (Photo credit: PTI)
ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಜಿಲ್ಲೆ, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ʼಭಾರತ ರತ್ನʼ ಪ್ರೊಫೆಸರ್ ಸಿ.ಎನ್.ಆರ್ ರಾವ್ ಅವರಿಗೆ ಯಾವುದೇ ನೋಟಿಸ್ ಜಾರಿ ಮಾಡಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಸ್ಪಷ್ಟಪಡಿಸಿದ್ದಾರೆ.
ಪ್ರೊಫೆಸರ್ ಸಿ.ಎನ್.ಆರ್ ರಾವ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಅಂಗವಾಗಿ ಸಿ.ಎನ್.ಆರ್ ರಾವ್ ಹಾಗೂ ಅವರ ಕುಟುಂಬದ ಸದಸ್ಯರಿಗೆ Enumeration Forms (ಗಣತಿ ನಮೂನೆ)ಗಳನ್ನು ರಾಜ್ಯದ SVEEP ನೋಡಲ್ ಅಧಿಕಾರಿ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರೊಂದಿಗೆ ಮನೆಗೆ ತೆರಳಿ ಗೌರವಪೂರ್ವಕವಾಗಿ ನೀಡಿ, ಅಗತ್ಯ ಮಾಹಿತಿಯನ್ನು ಭರ್ತಿ ಮಾಡಲಾಗಿದೆ.
ಪ್ರೊ.ಸಿ.ಎನ್.ಆರ್ ರಾವ್ ಅವರು 2002ನೇ ಸಾಲಿನ 76-ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ಭಾಗ ಸಂಖ್ಯೆ 129ರಲ್ಲಿ ಕ್ರಮ ಸಂಖ್ಯೆ 431ರ ಮತದಾರರಾಗಿರುತ್ತಾರೆ. ಆಗ ಮಾನ್ಯರ ಹೆಸರು ‘ರಾಮ’ ಎಂದು ನಮೂದಾಗಿತ್ತು. ಪ್ರಸ್ತುತ 157-ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 59ರಲ್ಲಿ ಕ್ರಮ ಸಂಖ್ಯೆ 187ರಲ್ಲಿ ‘ಪ್ರೊಫೆಸರ್ ಸಿ.ಎನ್. ರಾವ್ ಎಂ’ ಎಂಬ ಹೆಸರಿನೊಂದಿಗೆ ಮತದಾರರಾಗಿ ನೋಂದಾಯಿತರಾಗಿದ್ದಾರೆ. ಅದರಂತೆ, ಕರಡು ಮತದಾರರ ಪಟ್ಟಿಯಲ್ಲಿಯೂ ಸಹ ಮಾನ್ಯರ ಹೆಸರು ಸೇರ್ಪಡೆಯಾಗಿದೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಅಂಗವಾಗಿ ನಡೆಯುವ ವಿಚಾರಣೆಗೆ ಸಂಬಂಧಿಸಿದಂತೆ, ಮತದಾರರ ಪಟ್ಟಿಯಲ್ಲಿ ಪ್ರೊ.ಸಿ.ಎನ್.ಆರ್ ರಾವ್ ಅವರ ಹೆಸರಿನಲ್ಲಿ ವ್ಯತ್ಯಾಸವಿರುವ ಹಿನ್ನೆಲೆಯಲ್ಲಿ, ಬೂತ್ ಮಟ್ಟದ ಅಧಿಕಾರಿ (BLO) ಅವರು ಯಾವುದೇ ನೋಟಿಸ್ ಜಾರಿ ಮಾಡದೆ, ಗೌರವಾನ್ವಿತ ವ್ಯಕ್ತಿಯಾಗಿರುವ ಹಿನ್ನೆಲೆಯಲ್ಲಿ ಅಂತಿಮ ಮತದಾರರ ಪಟ್ಟಿಗೆ ಅವರ ಹೆಸರನ್ನು ಸೇರಿಸಲು ಶಿಫಾರಸು ಮಾಡಿದ್ದಾರೆ. ಅದರಂತೆ, ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.