ಚಾಮರಾಜನಗರ : ನಗರದ 26ನೇ ವಾರ್ಡ್ ವ್ಯಾಪ್ತಿಯ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರು ಪೂರೈಕೆಯಾಗದೆ ನಿವಾಸಿಗಳು ಪರದಾಡುವಂತಾಗಿದೆ.

ಕಾವೇರಿ ನೀರು ಬಾರದಿರುವುದರ ಜೊತೆಗೆ ಬೋರ್‌ವೆಲ್‌ಗಳಲ್ಲೂ ನೀರು ಲಭ್ಯವಾಗದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ನಿವಾಸಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ನಿವಾಸಿಗಳು ಪಕ್ಕದಲ್ಲೇ ಇರುವ ಪೌರಾಯುಕ್ತ ಛಲವಾದಿ ಪರಶುರಾಮ್ ಅವರ ಸರಕಾರಿ ವಸತಿ ಗೃಹಕ್ಕೆ ಮುತ್ತಿಗೆ ಹಾಕಿ, ಕೂಡಲೇ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿದರು.

ಈ ವೇಳೆ ನೀರು ಪೂರೈಕೆ ಮಾಡುವ ವಾಟರ್‌ಮ್ಯಾನ್ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದರು. ವಾಟರ್‌ಮ್ಯಾನ್‌ರನ್ನು ಬದಲಾವಣೆ ಮಾಡಿ, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಸಿಬ್ಬಂದಿಯನ್ನು ನಿಯೋಜಿಸುವಂತೆ ಪೌರಾಯುಕ್ತರಿಗೆ ದೂರು ನೀಡಿದರು.

ಒಂದು ವಾರದಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವುದರಿಂದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ನೀರು ಪೂರೈಕೆ ಮಾಡಬೇಕು ಎಂದು ನಿವಾಸಿಗಳು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor