ಫ್ರಾನ್ಸ್ ಪ್ರವಾಸ: ಥೇಲ್ಸ್, ಸೋಮ್ಫಿ, ಸೆವೆನ್ಸಿಯಾ ಕಂಪನಿಗಳ ಜತೆ ಸಚಿವ ಎಂ.ಬಿ.ಪಾಟೀಲ್ ಮಾತುಕತೆ
ʼತಯಾರಿಕೆಗೆ ಒತ್ತು ಕೊಟ್ಟು ಹೂಡಿಕೆ ಮಾತುಕತೆʼ
ಬೆಂಗಳೂರು: ಬಂಡವಾಳ ಆಕರ್ಷಣೆಯ ಉದ್ದೇಶದಿಂದ ಉನ್ನತ ಮಟ್ಟದ ನಿಯೋಗದ ಜತೆ ಫ್ರಾನ್ಸ್‍ಗೆ ತೆರಳಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ತಮ್ಮ ಭೇಟಿಯ ಎರಡನೆಯ ದಿನವಾದ ಮಂಗಳವಾರ ಥೇಲ್ಸ್, ಸೋಮ್ಫಿ, ಮೆಕಾಕ್ರೋಮ್, ಸೆವೆನ್ಸಿಯಾ ಮತ್ತು ಡೆನೋನ್ ಕಂಪನಿಗಳ ಜತೆ ತಯಾರಿಕಾ ಚಟುವಟಿಕೆಗೆ ಒತ್ತು ಕೊಟ್ಟು ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಎಂ.ಬಿ.ಪಾಟೀಲ್, ಈ ಕಂಪನಿಗಳು ವೈಮಾಂತರಿಕ್ಷ, ರಕ್ಷಣೆ, ಬಾಹ್ಯಾಕಾಶ, ಹೈನೋದ್ಯಮ ಮತ್ತು ಆಟೋಮೋಟಿವ್ ಕ್ಷೇತ್ರಗಳಿಗೆ ಸಂಬಂಧಿಸಿವೆ. ಹೀಗಾಗಿ ಈ ಕಂಪನಿಗಳು ದಕ್ಷಿಣ ಭಾರತದ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ತಮ್ಮ ತಯಾರಿಕಾ ಘಟಕಗಳನ್ನು ಆರಂಭಿಸುವಂತೆ ಕೇಳಿಕೊಳ್ಳಲಾಗಿದೆ. ಇದಕ್ಕೆ ಕಂಪನಿಗಳು ಸಕಾರಾತ್ಮಕವಾಗಿ ಸ್ಪಂದಿಸುವ ಒಲವು ತೋರಿವೆ ಎಂದು ಹೇಳಿದ್ದಾರೆ.
ಆಟೋಮೇಷನ್ ವಲಯದಲ್ಲಿ ಹೆಸರು ಮಾಡಿರುವ ಸೋಮ್ಫಿ ಕಂಪನಿಯು ಈಗಾಗಲೇ ಬೆಂಗಳೂರಿನಲ್ಲಿ ನೆಲೆಯೂರಿದೆ. ಆದುದರಿಂದ, ರಾಜ್ಯದಲ್ಲಿ ತಯಾರಿಕಾ ಘಟಕ ಮತ್ತು ಬಿಡಿಭಾಗಗಳ ಪೂರೈಕೆ ವಹಿವಾಟು ಆರಂಭಿಸಲು ಮನವಿ ಮಾಡಿದ್ದೇವೆ ಎಂದು ಅವರು ನುಡಿದಿದ್ದಾರೆ.
ವೈಮಾಂತರಿಕ್ಷ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಥೇಲ್ಸ್ ಕಂಪನಿಗೆ ತನ್ನ ಭವಿಷ್ಯದ ಹೂಡಿಕೆಗೆ ರಾಜ್ಯವನ್ನೆ ಆಯ್ಕೆ ಮಾಡಿಕೊಳ್ಳುವಂತೆ ಗಮನ ಸೆಳೆಯಲಾಗಿದೆ. ಇದೇ ರೀತಿ ನಮ್ಮಲ್ಲೇ ತನ್ನ ಮೊದಲ ತಯಾರಿಕಾ ಘಟಕವನ್ನು ಆರಂಭಿಸುವಂತೆ ಹೇಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಗಿಣ್ಣು ಉತ್ಪಾದನೆ ಮಾಡುವ ಸೆವೆನ್ಸಿಯಾ ಮತ್ತು ಸಸ್ಯಮೂಲದ ಉತ್ಪನ್ನಗಳನ್ನು ತಯಾರಿಸುವ ಡೆನೋನ್ ಕಂಪನಿಗಳಿಗೆ ದಕ್ಷಿಣ ಭಾರತದ ಮಾರುಕಟ್ಟೆಯನ್ನು ಕೇಂದ್ರೀಕರಿಸಿ, ಕರ್ನಾಟಕದಲ್ಲಿ ಉತ್ಪಾದನಾ ಸ್ಥಾವರಗಳನ್ನು ಅಭಿವೃದ್ಧಿ ಪಡಿಸಲು ಆಹ್ವಾನಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಮಾತುಕತೆಯಲ್ಲಿ ಸೋಮ್ಫಿ ಕಂಪನಿಯ ಉಪಾಧ್ಯಕ್ಷೆ ಜೀನ್ ಫ್ರಾಂಜಿ, ವಹಿವಾಟು ಮುಖ್ಯಸ್ಥ ಯಾನ್ ಬರೌ, ಥೇಲ್ಸ್ ಕಂಪನಿಯ ಭಾರತೀಯ ವಿಭಾಗದ ಮುಖ್ಯಸ್ಥ ಎಲಾಯ್ ಲಿಯಾನ್ಹಾರ್ಟ್, ಉಪಾಧ್ಯಕ್ಷ ಜೀನ್ ನೋಯಲ್ ಬೋನ್ಯು, ಮೆಕಾಕ್ರೋಮ್ ಸಿಇಒ ಕ್ರಿಶ್ಚಿಯನ್ ಕಾರ್ನಿಲ್, ಸೆವೆನ್ಸಿಯಾ ಪರವಾಗಿ ಜೀನ್ ಬ್ಯಾಪ್ಟಿಸ್ಟ್ ವ್ಯಾನ್ ಎಸ್ಲಾಂಡ್, ಡನೋನ್ ಕಂಪನಿಯ ಉನ್ನತ ಮಟ್ಟದ ಅಧಿಕಾರಿಗಳಾದ ಫ್ಯಾಬ್ರಿಸ್ ಸಲಮಾಂಕ ಮತ್ತು ಏಂಜಲ್ ರಗೆರಿ ಭಾಗವಹಿಸಿದ್ದರು.
ರಾಜ್ಯ ಸರಕಾರದ ನಿಯೋಗದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯೆಲ್ ಮತ್ತು ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ ಇದ್ದರು.