SIR ನೋಟಿಸ್ | ಹಿರಿಯರು, ಅಂಗವಿಕಲರು, ವಿದೇಶದಲ್ಲಿರುವವರ ಪರ ಕುಟುಂಬದ ವಯಸ್ಕರು ಹಾಜರಾಗಬಹುದು : ಮುಖ್ಯ ಚುನಾವಣಾಧಿಕಾರಿಗಳ ಕಚೇರಿ
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: SIR–2026ರಡಿ ನೋಟಿಸ್ ಪಡೆದಿರುವ ಹಿರಿಯ ನಾಗರಿಕರು, ಅಂಗವಿಕಲರು, ಅನಾರೋಗ್ಯಪೀಡಿತರು ಹಾಗೂ ವಿದೇಶದಲ್ಲಿರುವ ಮತದಾರರು ಸ್ವತಃ ಚುನಾವಣಾ ಕಚೇರಿಗೆ ಹಾಜರಾಗಲು ಸಾಧ್ಯವಾಗದಿದ್ದರೆ, ಅವರ ಪರವಾಗಿ ಕುಟುಂಬದ ಯಾವುದೇ ವಯಸ್ಕ ಸದಸ್ಯರು ಚುನಾವಣಾ ನೋಂದಣಿ ಅಧಿಕಾರಿ (ERO) ಅಥವಾ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ (AERO) ಮುಂದೆ ಹಾಜರಾಗಬಹುದು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.
ಕುಟುಂಬದ ವಯಸ್ಕ ಸದಸ್ಯರು ಸಂಬಂಧಿತ ಮತದಾರರ ಪರವಾಗಿ ಹಾಜರಾಗಿ, ಮತದಾರರಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಸಲ್ಲಿಸಬಹುದು. ಈ ಅವಕಾಶವನ್ನು ನೋಟಿಸ್ ಗಳ ವಿಲೇವಾರಿ ಪ್ರಕ್ರಿಯೆಯಲ್ಲಿ ಕಲ್ಪಿಸುವಂತೆ EROಗಳು ಮತ್ತು AEROಗಳಿಗೆ ಅಗತ್ಯ ಸೂಚನೆ ನೀಡಬೇಕು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಸುತ್ತೋಲೆ ಹೊರಡಿಸಿದೆ.
ಭಾರತೀಯ ಚುನಾವಣಾ ಆಯೋಗದ ಮೇ 14, 2026ರ ಪತ್ರ ಸಂಖ್ಯೆ 23/2025-ERS (Vol.II) ಉಲ್ಲೇಖಿಸಿ, ಕರ್ನಾಟಕದ ಜಂಟಿ ಮುಖ್ಯ ಚುನಾವಣಾಧಿಕಾರಿಯವರು ಸೆ.11ರಂದು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ.
ಬೆಂಗಳೂರಿನ ಜಿಲ್ಲಾ ಚುನಾವಣಾಧಿಕಾರಿ, GBAಯ ಮುಖ್ಯ ಆಯುಕ್ತರು, ಎಲ್ಲ ಜಿಲ್ಲೆಗಳ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು, BBMP ಕೇಂದ್ರ, ಉತ್ತರ ಮತ್ತು ದಕ್ಷಿಣ ಚುನಾವಣಾ ಜಿಲ್ಲೆಗಳ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳು, ಬೆಂಗಳೂರು ನಗರ ಪಾಲಿಕೆಗಳ ಉತ್ತರ, ದಕ್ಷಿಣ ಮತ್ತು ಕೇಂದ್ರ ವಲಯಗಳ ಆಯುಕ್ತರು ಹಾಗೂ ಬೆಂಗಳೂರು ನಗರ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.
ರಾಜಕೀಯ ಪಕ್ಷಗಳಿಗೆ ವಿವರಿಸಲು ಸೂಚನೆ
SIR–2026ರಡಿ ನೋಟೀಸ್ ಗಳನ್ನು ಹೇಗೆ ಜಾರಿಗೊಳಿಸಲಾಗುತ್ತಿದೆ ಮತ್ತು ಅವುಗಳನ್ನು ಹೇಗೆ ವಿಲೇವಾರಿ ಮಾಡಲಾಗುತ್ತಿದೆ ಎಂಬುದನ್ನು ರಾಜಕೀಯ ಪಕ್ಷಗಳಿಗೆ ವಿವರಿಸಬೇಕು. ತಮ್ಮ ಮಟ್ಟದಲ್ಲಿ ವಾರಕ್ಕೊಮ್ಮೆ ನಡೆಯುವ ರಾಜಕೀಯ ಪಕ್ಷಗಳ ಸಭೆಗಳಲ್ಲಿ ಈ ಪ್ರಕ್ರಿಯೆಯ ಕುರಿತು ಮಾಹಿತಿ ನೀಡುವಂತೆ EROಗಳು ಮತ್ತು AEROಗಳಿಗೆ ಸೂಚಿಸಬೇಕು ಎಂದು ಸಂಬಂಧಿತ ಅಧಿಕಾರಿಗಳನ್ನು ಕೋರಲಾಗಿದೆ.