ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿ ಬಿಡುಗಡೆಗೊಳಿಸುವಂತೆ ಹಿಂದುಳಿದ ಜಾತಿಗಳ ಒಕ್ಕೂಟ ಆಗ್ರಹ
ಬೆಂಗಳೂರು : ರಾಜ್ಯ ಸರಕಾರವು ಸುಮಾರು 165 ಕೋಟಿ ರೂ.ಗಳನ್ನು ಖರ್ಚು ಮಾಡಿ, ರಾಜ್ಯದ ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಈಗಾಗಲೇ ಆಯೋಗವು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದು, ದಮನಿತ ಸಮುದಾಯಗಳ ಬಗ್ಗೆ ಅಪಾರವಾದ ಕಾಳಜಿ ಮತ್ತು ಸಾಮಾಜಿಕ ನ್ಯಾಯದ ಪರ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿಯನ್ನು ಒಪ್ಪಿ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಆಗ್ರಹಿಸಿವೆ.
ಗರುವಾರ ನಗರದ ಮೌರ್ಯ ಹೋಟೇಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್, ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿ ಜನಗಣತಿ ನಡೆಸಿ ರಾಜ್ಯದಲ್ಲಿ ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿತ್ತು ಅದನ್ನು ಮರೆಯಬಾರದು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಒಪ್ಪಿ ಶೀಘ್ರ ಬಿಡುಗಡೆ ಮಾಡಿ ‘ನಾವು ನುಡಿದಂತೆ ನಡೆಯುವವರು’ ಎನ್ನುವುದನ್ನು ಸಾಬೀತು ಮಾಡಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಪ್ರಭಲ ಸಮುದಾಯಗಳು ಇತ್ತೀಚಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ-2ಎ ಮೀಸಲಾತಿ ಪಟ್ಟಿಗೆ ಸೇರಲು ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸುತ್ತಿದ್ದು, ಯಾವುದೇ ಕಾರಣಕ್ಕೂ ಮುಂದುವರಿದ ಜಾತಿಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ-2ಎ ಮೀಸಲಾತಿ ಪಟ್ಟಿಗೆ ಸೇರಿಸಬಾರದು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಎಣ್ಣಿಗೆರೆ ಆರ್.ವೆಂಕಟರಾಮಯ್ಯ ಮಾತನಾಡಿ, ಪ್ರವರ್ಗ-2ಎ ಮೀಸಲಾತಿ ಕೋರಿ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸುತ್ತಿರುವ ಪ್ರಬಲ ಸಮುದಾಯಗಳು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಬಗ್ಗೆ ಯಾವುದೇ ಅಂಕಿ–ಅಂಶಗಳು ಮತ್ತು ದತ್ತಾಂಶಗಳನ್ನು ಈ ಹಿಂದಿನ ಯಾವ ಆಯೋಗಗಳು ನೀಡಿಲ್ಲ. ಹಾಗೂ ಆಯೋಗದ ವರದಿಗಳಲ್ಲೂ ಇದರ ಬಗ್ಗೆ ಉಲ್ಲೇಖವಾಗಿರುವುದಿಲ್ಲ. ಒಂದು ವೇಳೆ ಮುಂದುವರೆದ ಜಾತಿಗಳು ಹಿಂದುಳಿದ ವರ್ಗಗಳ ಪ್ರವರ್ಗ-2ಎ ಮೀಸಲಾತಿ ಪಟ್ಟಿಗೆ ಸೇರಿದ್ದೇ ಆದಲ್ಲಿ ಈಗಾಗಲೇ ಹಿಂದುಳಿದ ವರ್ಗಗಳ ಪ್ರವರ್ಗ-2ಎ ಮೀಸಲಾತಿ ಪಟ್ಟಿಯಲ್ಲಿರುವ ಸುಮಾರು 102 ಹಿಂದುಳಿದ, ಅತಿ ಹಿಂದುಳಿದ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಸಂವಿಧಾನಬದ್ದ ಹಕ್ಕನ್ನು ಕಸಿದುಕೊಂಡಂತ್ತಾಗುತ್ತದೆ ಎಂದು ತಿಳಿಸಿದರು.
ಶೋಷಿತ ಸಮುದಾಯಗಳ ಬಗ್ಗೆ ರಾಜ್ಯ ಸರಕಾರವು ಯಾವ ನಿಲುವನ್ನು ಹೊಂದಿದೆ. ಎಂಬುದರ ಬಗ್ಗೆ ಶೀಘ್ರವೇ ರಾಜ್ಯ ಸರಕಾರವು ಸ್ಪಷ್ಟವಾಗಿ ತಿಳಿಸಬೇಕು. ಇಲ್ಲವಾದರೆ ಡಿ.18ರಂದು ಬುಧವಾರ ಬೆಳಗಾವಿ ಚಲೋ ಮತ್ತು ಸುವರ್ಣ ವಿಧಾನಸೌಧ ಎದುರು ಪ್ರತಿಭಟನೆ ನಡೆಸಲಾಗುವುದು. ಹಾಗೂ ರಾಜ್ಯದ್ಯಾಂತ ಉಗ್ರವಾದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ್, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಉಪಾಧ್ಯಕ್ಷ ವೆಂಕಟಸುಬ್ಬರಾಜು, ಆಂತರಿಕ ಲೆಕ್ಕಪರಿಶೋಧಕ ಜಿ.ಡಿ.ಗೋಪಾಲ್, ಆರ್.ರಾಮಕೃಷ್ಣಪ್ಪ, ಬಿ.ಟಿ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.