ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೇಟಿ ಮಾಡಿ ಮಾಹಿತಿ ಪಡೆದಿರುವುದನ್ನು ಪ್ರಶ್ನಿಸಿ, ಭಾರತದ ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ (ನ್ಯಾಯಾಂಗ) ಅವರಿಗೆ ಅಧಿಕೃತ ದೂರು ಸಲ್ಲಿಕೆಯಾಗಿದೆ. ಚಿತ್ರದುರ್ಗದ ಸಾಮಾಜಿಕ ಕಾರ್ಯಕರ್ತೆ ರಮಾ ನಾಗರಾಜ್ ಎನ್. ಅವರು ಅಕ್ಟೋಬರ್ 28ರ, 2026ರಂದು ಈ ಲಿಖಿತ ದೂರನ್ನು ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಸ್ವತಂತ್ರ ತನಿಖೆಯಲ್ಲಿ ರಾಜ್ಯದ ರಾಜಕೀಯ ಕಾರ್ಯಾಂಗ ಹಸ್ತಕ್ಷೇಪ ನಡೆಸುತ್ತಿದೆ ಎಂದು ದೂರುದಾರರು ಆಪಾದಿಸಿದ್ದಾರೆ.

2012ರ ಅಕ್ಟೋಬರ್ 9ರಂದು ಧರ್ಮಸ್ಥಳದಲ್ಲಿ ನಡೆದ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಮರುತನಿಖೆಗೆ ಒಪ್ಪಿಸಿತ್ತು. ಕುಸುಮಾವತಿ ಗೌಡ ವಿರುದ್ಧ ಕರ್ನಾಟಕ ಸರ್ಕಾರ ಮತ್ತು ಇತರರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸಂಜಯ್ ಕುಮಾರ್ ಹಾಗೂ ನ್ಯಾಯಮೂರ್ತಿ ಸಂಜೀವ್ ಸಚ್‌ದೇವ್ ಅವರ ಪೀಠವು ಸೆಪ್ಟೆಂಬರ್ 21, 2026ರಂದು ಮಹತ್ವದ ತೀರ್ಪು ಪ್ರಕಟಿಸಿತ್ತು. ಈ ಹಿಂದೆ ನಡೆದಿದ್ದ ಬೆಳ್ತಂಗಡಿ ಠಾಣೆ ಪೊಲೀಸರು, ಸಿಐಡಿ ಮತ್ತು ಸಿಬಿಐ ತನಿಖೆಗಳಲ್ಲಿನ ದೋಷಗಳನ್ನು ಎತ್ತಿಹಿಡಿದಿದ್ದ ನ್ಯಾಯಪೀಠವು, ಪ್ರಕರಣದ ಆರಂಭದಿಂದಲೇ ಸಮಗ್ರ ಹಾಗೂ ಹೊಸ ತನಿಖೆ ನಡೆಸುವಂತೆ ಆದೇಶಿಸಿತ್ತು.

ಈ ತೀರ್ಪಿನ ಆಧಾರದಲ್ಲಿ ರಾಜ್ಯ ಸರ್ಕಾರವು ಸೆಪ್ಟೆಂಬರ್ 24, 2026ರಂದು ಹಿರಿಯ ಐಪಿಎಸ್ ಅಧಿಕಾರಿ, ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿತು. ಈ ತಂಡವು ಅಕ್ಟೋಬರ್ 1ರಿಂದ ಮಂಗಳೂರಿನಲ್ಲಿ ಕಚೇರಿ ತೆರೆದು ತನಿಖೆಯನ್ನು ಚುರುಕುಗೊಳಿಸಿದೆ. ಹದಿನಾಲ್ಕು ವರ್ಷಗಳ ಬಳಿಕ ಹಿಂದಿನ ತನಿಖಾಧಿಕಾರಿಗಳನ್ನೇ ವಿಚಾರಣೆಗೆ ಒಳಪಡಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.

ಹಿಂದಿನ ಅಧಿಕಾರಿಗಳ ವಿಚಾರಣೆಗೆ ಎರಡು ದಿನಗಳು ಬಾಕಿ ಇರುವಾಗ, ಅಕ್ಟೋಬರ್ 28ರಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ಖಾಸಗಿ ನಿವಾಸಕ್ಕೆ SIT ಮುಖ್ಯಸ್ಥರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆಸಿಕೊಂಡಿದ್ದರು. ಐಜಿಪಿ ಶಶಿಕುಮಾರ್ ಅವರು ಕೇಸ್ ಡೈರಿಯೊಂದಿಗೆ ನಿವಾಸಕ್ಕೆ ತೆರಳಿ ಮುಖ್ಯಮಂತ್ರಿಗಳಿಗೆ ತನಿಖೆಯ ವಿವರಗಳನ್ನು ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಭೇಟಿಯಲ್ಲಿ ತನಿಖೆಯ ಪ್ರಗತಿ, ಇದುವರೆಗೆ ಸಂಗ್ರಹಿಸಿರುವ ಪುರಾವೆಗಳು ಹಾಗೂ ಮುಂದಿನ ಕ್ರಮಗಳ ಬಗ್ಗೆ ವಿವರ ನೀಡಲಾಗಿದೆ ಎಂದು ತಿಳಿದುಬಂದಿದೆ. ಯಾವುದೇ ಕಡತ ಅಥವಾ ಲಿಖಿತ ವರದಿಯನ್ನು ಹಸ್ತಾಂತರಿಸಲಾಗಿದೆಯೇ ಎಂಬ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

ಸುಪ್ರೀಂ ಕೋರ್ಟ್ ಆದೇಶದ ಅನ್ವಯ SITಯನ್ನು ರಚಿಸುವುದು ಮಾತ್ರ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿತ್ತು. ತನಿಖೆ ಪೂರ್ಣಗೊಳಿಸಿ ಮೂರು ತಿಂಗಳೊಳಗೆ ಸಂಬಂಧಪಟ್ಟ ನ್ಯಾಯಾಲಯಕ್ಕೆ ನೇರವಾಗಿ ವರದಿ ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿತ್ತು. ಆದರೂ, ಮುಖ್ಯಮಂತ್ರಿಗಳು ತನಿಖಾಧಿಕಾರಿಯನ್ನು ಕರೆಸಿ ಮಾಹಿತಿ ಪಡೆದಿರುವುದು ತನಿಖೆಯ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ತನಿಖಾ ಸಂಸ್ಥೆಗಳ ವೈಫಲ್ಯವನ್ನು ಉಲ್ಲೇಖಿಸಲಾಗಿದ್ದು, ರಾಜ್ಯ ಸಿಐಡಿ ಕೂಡ ಟೀಕೆಗೆ ಗುರಿಯಾದ ತನಿಖಾ ಸಂಸ್ಥೆಗಳಲ್ಲಿ ಒಂದಾಗಿದೆ. ಅದೇ ರಾಜ್ಯದ ಆಡಳಿತ ಮುಖ್ಯಸ್ಥರು ಹಾಲಿ ತನಿಖೆಯ ವಿವರಗಳನ್ನು ಕೇಳಿರುವುದು ನಿಯಮಬಾಹಿರ ಎಂದು ದೂರುದಾರರು ವಾದಿಸಿದ್ದಾರೆ.

ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನೈಜ ಅಪರಾಧಿಗಳು ಹಿಂದಿನ ತನಿಖೆಗಳ ಮೇಲೆ ಪ್ರಭಾವ ಬೀರಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದ ಪ್ಯಾರಾ 59ರಲ್ಲಿ ಉಲ್ಲೇಖಿಸಿತ್ತು. ಇಂತಹ ಗಂಭೀರ ಸನ್ನಿವೇಶದಲ್ಲಿ, ತನಿಖೆಯಲ್ಲಿ ಯಾರು ಹೇಳಿಕೆ ನೀಡಿದ್ದಾರೆ ಮತ್ತು ಮುಂದಿನ ಹಂತದಲ್ಲಿ ಯಾರನ್ನು ವಿಚಾರಣೆ ಮಾಡಲಾಗುತ್ತದೆ ಎಂಬ ಸೂಕ್ಷ್ಮ ವಿವರಗಳು ರಾಜಕೀಯ ನಾಯಕರಿಗೆ ತಲುಪಿದರೆ ತನಿಖೆಯ ದಿಕ್ಕೇ ಬದಲಾಗಬಹುದು ಎಂಬ ಆತಂಕವನ್ನು ದೂರುದಾರರು ವ್ಯಕ್ತಪಡಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮುಖ್ಯಮಂತ್ರಿಗಳು ಕರೆದಾಗ ಹೋಗುವುದನ್ನು ತಪ್ಪಿಸಲು ಸಾಧ್ಯವಿಲ್ಲವಾದರೂ, ಅಧಿಕಾರಿಯನ್ನು ಕರೆಸಿಕೊಂಡ ಕ್ರಮವೇ ಕಾನೂನುಬಾಹಿರ ಎಂದು ದೂರಿನಲ್ಲಿ ಬೆಟ್ಟುಮಾಡಲಾಗಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸಿಬಿಐ ದಾಖಲಿಸಿರುವ 74.93 ಕೋಟಿ ರೂ. ಅಕ್ರಮ ಆಸ್ತಿಗಳಿಕೆ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ರಾಜ್ಯ ಸರ್ಕಾರವು ಈ ಹಿಂದೆ ಸಿಬಿಐ ತನಿಖೆಗೆ ನೀಡಿದ್ದ ಒಪ್ಪಿಗೆಯನ್ನು ಹಿಂಪಡೆದು ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿದ್ದನ್ನು ಪ್ರಶ್ನಿಸಿ ಸಿಬಿಐ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಗಳು ನ್ಯಾಯಾಲಯದ ವಿಚಾರಣೆಯಲ್ಲಿವೆ. ಇಂತಹ ಕಾನೂನು ಹೋರಾಟಗಳನ್ನು ಎದುರಿಸುತ್ತಿರುವ ನಾಯಕರು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಡೆಯುತ್ತಿರುವ ತನಿಖೆಯ ಅಧಿಕಾರಿಯನ್ನು ಖಾಸಗಿ ನಿವಾಸಕ್ಕೆ ಕರೆಸಿಕೊಳ್ಳುವುದು ನ್ಯಾಯಾಂಗದ ಆದೇಶಗಳ ಬಗ್ಗೆ ನಿರ್ಲಕ್ಷ್ಯ ತೋರಿದಂತೆ ಎಂಬ ಅಭಿಪ್ರಾಯ ಮೂಡಿಸುತ್ತದೆ ಎಂದು ದೂರಿನಲ್ಲಿ ವಾದಿಸಲಾಗಿದೆ.

ಸೌಜನ್ಯ ಪ್ರಕರಣದ ಮರುತನಿಖೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ರಕ್ಷಣಾ ಆದೇಶದ ವಿವರಗಳನ್ನೂ ದೂರುದಾರರು ರಿಜಿಸ್ಟ್ರಾರ್ ಗಮನಕ್ಕೆ ತಂದಿದ್ದಾರೆ. 2026ರ ಏಪ್ರಿಲ್ 29ರಂದು ಸುಪ್ರೀಂ ಕೋರ್ಟ್ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ನೀಡಲು ಸೂಚಿಸಿದಾಗ, ರಾಜ್ಯ ಸರ್ಕಾರವು ಕೇವಲ ಮೂರು ವಾರಗಳಲ್ಲಿ ಎಂಟು ಪ್ರಮುಖ ಸಾಕ್ಷಿಗಳನ್ನು ಗುರುತಿಸಿತ್ತು. ಹಿಂದಿನ ತನಿಖಾ ಸಂಸ್ಥೆಗಳು ಮಾಡದ ಕೆಲಸವನ್ನು ನ್ಯಾಯಾಲಯದ ಆದೇಶದ ಬಳಿಕ ಮಾಡಲಾಗಿತ್ತು. ಸೌಜನ್ಯ ಕುಟುಂಬವು ಆರಂಭದಿಂದಲೂ ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಮೇಲೆ ಸಂಶಯ ವ್ಯಕ್ತಪಡಿಸುತ್ತಾ ಬಂದಿದ್ದರೂ, ಹಿಂದಿನ ತನಿಖೆಗಳಲ್ಲಿ ಅವರನ್ನು ಸೂಕ್ತವಾಗಿ ವಿಚಾರಣೆ ಮಾಡಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಾಕ್ಷಿಗಳ ರಕ್ಷಣೆ ಮತ್ತು ತನಿಖಾ ಮಾಹಿತಿಯ ಗೌಪ್ಯತೆಯನ್ನು ಕಾಪಾಡುವುದು ತೀರಾ ಅಗತ್ಯವಾಗಿದೆ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಧರ್ಮಸ್ಥಳ ಪರಿಸರದಲ್ಲಿ ಹಲವು ದಶಕಗಳಿಂದ ನಡೆದಿರುವ ಮಹಿಳೆಯರು ಮತ್ತು ಬಾಲಕಿಯರ ಅನುಮಾನಾಸ್ಪದ ಸಾವುಗಳ ಕುರಿತು ಪ್ರತ್ಯೇಕ ಎಫ್‌ಐಆರ್ ದಾಖಲಿಸಲು ಕೋರಿ ಸೌಜನ್ಯಳ ತಾಯಿ ಕುಸುಮಾವತಿ ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೌಜನ್ಯ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಈ ಹಿಂದೆ ಸಂತೋಷ್ ರಾವ್ ಎಂಬಾತನನ್ನು ದೋಷಮುಕ್ತಗೊಳಿಸಿತ್ತು. ನಂತರ ಹೈಕೋರ್ಟ್ ಮರುತನಿಖೆಯ ಅರ್ಜಿಯನ್ನು ವಜಾಗೊಳಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ನೈಜ ಅಪರಾಧಿಗಳನ್ನು ಪತ್ತೆಹಚ್ಚಲು ಹೊಸ SIT ತನಿಖೆಗೆ ಆದೇಶಿಸಿದೆ. ಹೀಗಾಗಿ ಈ ತನಿಖೆಯನ್ನು ರಾಜಕೀಯ ಮಧ್ಯಪ್ರವೇಶದಿಂದ ಮುಕ್ತವಾಗಿಡುವುದು ಅನಿವಾರ್ಯವಾಗಿದೆ ಎಂದು ರಮಾ ನಾಗರಾಜ್ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ಈ ವಿಚಾರವನ್ನು ತಂದು ತುರ್ತು ನಿರ್ದೇಶನಗಳನ್ನು ನೀಡುವಂತೆ ದೂರುದಾರರು ರಿಜಿಸ್ಟ್ರಾರ್ ಅವರನ್ನು ಒತ್ತಾಯಿಸಿದ್ದಾರೆ. ಅಕ್ಟೋಬರ್ 28ರಂದು ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಭೇಟಿಯ ಕುರಿತು ರಾಜ್ಯ ಸರ್ಕಾರ ಹಾಗೂ SIT ಮುಖ್ಯಸ್ಥರಿಂದ ಮುಚ್ಚಳಿಕೆ ಅಥವಾ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಬೇಕು ಎಂದು ಕೋರಲಾಗಿದೆ. ಆ ಸಭೆಯಲ್ಲಿ ತನಿಖಾ ಕಡತಗಳು ಅಥವಾ ದಾಖಲೆಗಳನ್ನು ಹಸ್ತಾಂತರಿಸಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮನವಿ ಮಾಡಲಾಗಿದೆ.

ಮುಖ್ಯಮಂತ್ರಿಗಳಾಗಲಿ, ಸಚಿವರಾಗಲಿ ಅಥವಾ ರಾಜಕೀಯ ಕಾರ್ಯಾಂಗದ ಯಾವುದೇ ಅಧಿಕಾರಿಯಾಗಲಿ SITಯಿಂದ ಯಾವುದೇ ರೀತಿಯ ತನಿಖಾ ಮಾಹಿತಿ ಅಥವಾ ಪ್ರಗತಿ ವರದಿಗಳನ್ನು ಪಡೆಯದಂತೆ ಸಂಪೂರ್ಣ ನಿರ್ಬಂಧ ವಿಧಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ. ಅಂತಿಮ ವರದಿ ಸಲ್ಲಿಸುವವರೆಗೂ ತನಿಖೆಯ ಸ್ಥಿತಿಗತಿ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಮಾತ್ರ ಸಲ್ಲಿಸುವಂತೆ SITಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಕೋರಲಾಗಿದೆ. ಇದಲ್ಲದೆ, ಪ್ರಕರಣದ ಪ್ರಮುಖ ಎಂಟು ಸಾಕ್ಷಿಗಳಿಗೆ ನೀಡಲಾಗಿರುವ ಭದ್ರತೆಯನ್ನು ಮರುಪರಿಶೀಲಿಸಿ, ಹೆಚ್ಚುವರಿ ಸಾಕ್ಷಿಗಳಿಗೂ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಲು ಅಗತ್ಯ ಆದೇಶ ಹೊರಡಿಸಬೇಕೆಂದು ದೂರಿನಲ್ಲಿ ವಿನಂತಿಸಲಾಗಿದೆ. ಈ ದೂರನ್ನು ಅಕ್ಟೋಬರ್ 28ರ ಮಾಧ್ಯಮ ವರದಿಗಳು ಹಾಗೂ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಪ್ರತಿಯೊಂದಿಗೆ ರಿಜಿಸ್ಟ್ರಾರ್ ಅವರಿಗೆ ಅಧಿಕೃತವಾಗಿ ಸಲ್ಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor